ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಗ್ರಂಥಾಲಯದ ಎದುರು ಓದುಗರ ಪ್ರತಿಭಟನೆ

ಶಿಥಿಲಗೊಂಡಿರುವ ಹಳೆಯ ಕಟ್ಟಡ, ಮೂಲಸೌಕರ್ಯ ಮರೀಚಿಕೆ: ಆಕ್ರೋಶ
Published 19 ಜುಲೈ 2023, 3:55 IST
Last Updated 19 ಜುಲೈ 2023, 3:55 IST
ಅಕ್ಷರ ಗಾತ್ರ

ರಾಮನಗರ: ನಗರದ ರೈಲು ನಿಲ್ದಾಣ ರಸ್ತೆಯಲ್ಲಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಟ್ಟಡವು ಶಿಥಿಲಗೊಂಡಿದ್ದು, ಮೂಲಸೌಕರ್ಯ ಮರೀಚಿಕೆಯಾಗಿದೆ ಎಂದು ಆರೋಪಿಸಿ, ಓದುಗರು ಹಾಗೂ ವಿದ್ಯಾರ್ಥಿಗಳು ಗ್ರಂಥಾಲಯದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹೆಸರಿಗಷ್ಟೇ ಇದು ಜಿಲ್ಲಾ ಗ್ರಂಥಾಲಯ. ಆದರೆ, ಪಂಚಾಯಿತಿ ಮಟ್ಟದ ಗ್ರಂಥಾಲಯಕ್ಕಿಂತಲೂ ಕಡೆಯಾಗಿದೆ. ಅತ್ಯಂತ ಹಳೆಯ ಕಟ್ಟಡವಾಗಿರುವುದರಿಂದ ಮಳೆಗಾಲದಲ್ಲಿ ಹಲವೆಡೆ ಸೋರುತ್ತದೆ. ಒಳ ಭಾಗದಲ್ಲಿ ಸ್ಥಳಾವಕಾಶವೂ ಚಿಕ್ಕದಾಗಿರುವುದರಿಂದ ಹೆಚ್ಚಿನ ಜನರಿಗೆ ಕುಳಿತು ಓದಲು ಸಾಧ್ಯವಾಗುವುದಿಲ್ಲ ಎಂದು ಗ್ರಂಥಾಲಯ ಅಧಿಕಾರಿ ಜಯಕುಮಾರ್ ಅವರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ಜಿಲ್ಲೆಗಳ ಮುಖ್ಯ ಗ್ರಂಥಾಲಯಗಳಿಗೆ ಹೋಲಿಸಿದರೆ, ಇಲ್ಲಿರುವ ಪುಸ್ತಕಗಳ ಸಂಖ್ಯೆಯೂ ಕಡಿಮೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿಗೆ ಓದಲು ಬರುತ್ತಾರೆ. ಆದರೆ, ಅವರಿಗೆ ಬೇಕಾದ ಅತ್ಯುತ್ತಮ ಪುಸ್ತಕಗಳು ಇಲ್ಲಿಲ್ಲ. ಜಿಲ್ಲಾ ಕೇಂದ್ರದ ಗ್ರಂಥಾಲಯಕ್ಕೆ ಇರಬೇಕಾದ ಯಾವುದೇ ಲಕ್ಷಣಗಳು ಇಲ್ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಂಥಾಲಯಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದಾಗಲೆಲ್ಲಾ, ಕಟ್ಟಡ ಮಂಜೂರಾಗಿದೆ ಎಂದು ಅಧಿಕಾರಿಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ, ಇದುವರೆಗೆ ಕಟ್ಟಡ ತಲೆ ಎತ್ತಿಲ್ಲ. ಈಗಿರುವ ಕಟ್ಟಡದಲ್ಲಿ ಮೂಲಸೌಕರ್ಯಗಳಿಲ್ಲ. ಕುಳಿತುಕೊಳ್ಳಲು ಸರಿಯಾದ ಕುರ್ಚಿಗಳಿಲ್ಲ. ಕುಡಿಯುವ ನೀರು ಸೇರಿದಂತೆ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಶಿಥಿಲಗೊಂಡಿರುವ ಚಾವಣಿಯಿಂದ ಆಗಾಗ ದೂಳು ಉದುರುತ್ತದೆ ಎಂದು ಸಮಸ್ಯೆಗಳನ್ನು ಬಿಚ್ಚಿಟ್ಟರು.

ವಿಷಯ ತಿಳಿದು ಸ್ಥಳಕ್ಕೆ ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಭೇಟಿ ನೀಡಿದರು. ಗ್ರಂಥಾಲಯದ ಸಮಸ್ಯೆಗಳನ್ನು ಪ್ರತಿಭಟನಾಕಾರರು ಅವರಿಗೆ ವಿವರಿಸಿದರು.

‘ಕುಡಿಯುವ ನೀರು ಸೇರಿದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗುವುದು. ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ಸಿಗುವವರೆಗೆ ಇಲ್ಲಿಯೇ ಅನಿವಾರ್ಯವಾಗಿ ಹೊಂದಿಕೊಂಡು ಹೋಗಬೇಕಾಗಿದೆ’ ಎಂದು ಚನ್ನಕೇಶವ ಅವರು ಭರವಸೆ ನೀಡಿ ಸಮಾಧಾನಪಡಿಸಲು ಯತ್ನಿಸಿದರು.

ಅಷ್ಟಕ್ಕೆ ಸುಮ್ಮನಾಗದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರನ್ನು ಭೇಟಿ ಮಾಡಿಮ ಸಮಸ್ಯೆಗಳ ಕುರಿತು ಗಮನ ಸೆಳೆದರು. ಸೌಕರ್ಯ ಒದಗಿಸುವ ಜೊತೆಗೆ, ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

‘ಬಿಡುಗಡೆಯಾಗದ ಅನುದಾನ’

‘ಐದು ವರ್ಷಗಳ ಹಿಂದೆಯೇ ನೂತನ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ಕೋವಿಡ್ ಕಾರಣದಿಂದಾಗಿ ಮುಂದಿನ ಪ್ರಕ್ರಿಯೆಗಳು ವಿಳಂಬವಾದವು. ಇದೀಗ ಜಿಲ್ಲೆಯ ಉಪ ಮುಖ್ಯಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಕಟ್ಟಡ ನಿರ್ಮಾಣಕ್ಕೆ ಮತ್ತೆ ಅನುಮೋದನೆ ಕೊಟ್ಟು ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ’ ಎಂದು ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT