ಚನ್ನಪಟ್ಟಣ: ನಗರದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಫಲ್ಯ, ಅವ್ಯವಸ್ಥೆ, ವೈದ್ಯರ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟ, ರಾಜ್ಯ ನೇಗಿಲು ಹೊತ್ತ ರೈತರ ಸಂಘ ಹಾಗೂ ಎಸ್.ಡಿ.ಪಿ.ಐ ಕಾರ್ಯಕರ್ತರು ಗುರುವಾರ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ವೈದ್ಯರ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ಹೆಚ್ಚಾಗಿದೆ. ಚಿಕಿತ್ಸೆಗಾಗಿ ಬರುವ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಜೊತೆಗೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲವಾಗಿದೆ. ಈ ಎಲ್ಲಾ ಅವ್ಯವಸ್ಥೆಗಳನ್ನು ಜಿಲ್ಲಾಡಳಿತ ಶೀಘ್ರವೇ ಸರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದಲಿತಪರ ಸಂಘಟನೆಯ ಮುಖಂಡ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, ಚಿಕಿತ್ಸೆಗಾಗಿ ಬರುವ ರೋಗಿಗಳನ್ನು ವೈದ್ಯರು ತಪಾಸಣೆ ಮಾಡುವಲ್ಲಿ ತೀರಾ ನಿರ್ಲಕ್ಷ್ಯ ವಹಿಸುತ್ತಾರೆ. ಔಷಧಿ ಚೀಟಿ ಬರೆದು ಕೊಡುವುದು, ಪ್ರತಿಯೊಂದು ಪರೀಕ್ಷೆಗೂ ಖಾಸಗಿ ಲ್ಯಾಬ್‌ಗಳಿಗೆ ಕಳಿಸುವುದು, ಇಂತಹ ಲ್ಯಾಬ್‌ನಲ್ಲಿಯೆ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹೇಳಿ ಒತ್ತಡ ಹಾಕುವುದು ನಡೆಯುತ್ತಿವೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು ಮತ್ತು ರೋಗಿಗಳಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ದಲಿತಪರ ಸಂಘಟನೆಯ ಮುಖಂಡ ಅಪ್ಪಗೆರೆ ಶ್ರೀನಿವಾಸಮೂರ್ತಿ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಜೊತೆಗೆ ಸ್ವಚ್ಚತೆ ಮರೀಚಿಕೆಯಾಗಿದೆ. ಸ್ವಚ್ಛತಾ ಕೆಲಸಗಾರರ ಸಂಖ್ಯೆ ಕಡಿಮೆ ಇದೆ. ದುರ್ವಾಸನೆಯಿಂದ ರೋಗಿಗಳು ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಕುಮಾರ್ ಅವರಿಗೆ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಮನವರಿಕೆ ಮಾಡಿಕೊಟ್ಟ ಪ್ರತಿಭಟನಾಕಾರರು ಅವರಿಗೆ ಮನವಿ ನೀಡಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಬಿವಿಎಸ್ ಕುಮಾರ್, ಶಿವಾನಂದ್, ತೀರ್ಥಪ್ರಸಾದ್, ಕೃಷ್ಣಯ್ಯ, ಸತೀಶ್, ಪ್ರಸಾದ್, ರವೀಂದ್ರ, ಶಿವರಾಂ, ನಾಗೇಶ್, ಮಂಜು, ಹೊಂಬಾಳಯ್ಯ, ಶಹಬಾಜ್ ಹಾಲಿ, ಅಮ್ಜದ್ ಷರೀಫ್, ಫಾಜಿಲ್ ಅಹಮದ್, ಶಿವಲಿಂಗಯ್ಯ, ಪ್ರಕಾಶ್, ಬೇವೂರು ಕೃಷ್ಣೇಗೌಡ, ಡಿ.ಲೋಕೇಶ್, ಹುಲಿಯೂರಯ್ಯ, ಮಹೇಶ್, ದಿನೇಶ್, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.