ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ ಪುರಸಭೆ ಮುಂದೆ ಪ್ರತಿಭಟನೆ

ಹಳೆ ಮಸೀದಿ ಮೊಹಲ್ಲಾದಲ್ಲಿ ಕುಡಿಯುವ ನೀರಿಗೆ ಬರ
Last Updated 24 ಏಪ್ರಿಲ್ 2019, 15:30 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿ ಒಂದು ತಿಂಗಳಿಂದಲೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಎಂದು ತಾಲ್ಲೂಕು ಎಸ್‌ಡಿಪಿಐ ಅಧ್ಯಕ್ಷ ಸೈಯದ್ ತಾಂಜಿಮ್ ಪಾಷಾ ತಿಳಿಸಿದರು.

ನೀರಿಗಾಗಿ ಆಗ್ರಹಿಸಿ ಹಳೆ ಮಸೀದಿ ಮೊಹಲ್ಲಾದ ನಿವಾಸಿಗಳು ಬುಧವಾರ ಪುರಸಭೆ ಕಚೇರಿ ಮುಂದೆ ನಡೆಸಿದ ಧರಣಿ ನಿರತರನ್ನು ಕುರಿತು ಅವರು ಮಾತನಾಡಿದರು.

ಮಂಚನಬೆಲೆ ಜಲಾಶಯದಲ್ಲಿ ಮೂರು ವರ್ಷಕ್ಕೆ ಬೇಕಾಗುವಷ್ಟು ನೀರು ಸಂಗ್ರಹವಾಗಿದೆ. ಕುಡಿಯುವ ನೀರು ಸರಬರಾಜಿಗೆ ಬಹುಕೋಟಿ ಹಣ ಖರ್ಚಾಗಿದೆ. ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ದಿನದ 24 ಗಂಟೆಯೂ ನೀರು ಸರಬರಾಜು ಮಾಡುವುದಾಗಿ ₹ 25 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಕಳಪೆ ಕಾಮಗಾರಿಯಿಂದಾಗಿ ನೀರು ಸರಬರಾಜು ಆಗುತ್ತಿಲ್ಲ. ವಾರ್ಡ್ 16 ಮತ್ತು 18 ರಲ್ಲೂ ನೀರಿನ ಬವಣೆ ಇದೆ. ಕೊಳವೆ ಬಾವಿಗಳು ಸಹ ಇಲ್ಲದೆ ಕುಡಿಯುವ ನೀರಿಗೆ ಬೇಸಿಗೆಯಲ್ಲಿ ಜನತೆ ಪರದಾಡಬೇಕಿದೆ ಎಂದರು.

ನೂರ್‌ ಜಹಾನ್ ಮಾತನಾಡಿ, ತೆರೆದ ಚರಂಡಿಯಿಂದ ದುರ್ಗಂಧ ಸೂಸುತ್ತಿದೆ. ಚರಂಡಿಗಳು ಕಟ್ಟಿಕೊಂಡಿವೆ. ಕೊಳಚೆ ನೀರು ಮುಂದೆ ಹರಿಯುತ್ತಿಲ್ಲ. ತೆರೆದ ಚರಂಡಿಯ ಮೇಲೆ ಛಾವಣಿ ಹಾಕಿಸಬೇಕು. ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡಬೇಕು. ಅಲ್ಲಿಯ ವರೆಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವಂತೆ ಆಗ್ರಹಿಸಿದರು.

ಹೋರಾಟಗಾರ ಸೈಯದ್ ಜಮೀರ್ ಮಾತನಾಡಿ, ‘ನಮ್ಮ ವಾರ್ಡ್‌ಗಳಲ್ಲಿ ಮೂಲಸವಲತ್ತುಗಳಿಲ್ಲ. ಕಸ ಗುಡಿಸುವುದಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೇಳತೀರದು’ ಎಂದರು.

ಮುಖಂಡರಾದ ಮಹಮದ್ ಜಬಿ, ಟೈಲರ್ ಬಾಬು, ಸೈಯದ್ ಆಲಿ, ಅಬ್ದುಲ್, ಭಾಷಾಖಾನ್, ಶಾವರ್‌ ತಾಜ್‌, ಸಹಿದಾ, ಅಬ್ದುಲ್ ಪಾಷಾ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಮಹೇಶ್ ಅವರಿಗೆ ಮನವಿ ಸಲ್ಲಿಸಿದರು. ಮಹಿಳೆಯರು ಧರಣಿ ನಡೆಸಿದರು.

ಭೇಟಿ: ಪುರಸಭೆ ಮುಖ್ಯಾಧಿಕಾರಿ ಮಹೇಶ್ ಮಾತನಾಡಿ, ಏ.26ರಂದು ಬೆಳಿಗ್ಗೆ 9 ಗಂಟೆಗೆ ಹಳೆಮಸೀದಿ ಮೊಹಲ್ಲಾ ಮತ್ತು 16, 18ನೇ ವಾರ್ಡಗಳಿಗೆ ಭೇಟಿ ನೀಡಿ ಪರಶೀಲಿಸುತ್ತೇನೆ. ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುವುದು ಎಂದರು.

ಚರಂಡಿ: ಪುರಸಭೆ ಆರೋಗ್ಯ ಅಧಿಕಾರಿ ಕುಸುಮ ಮಾತನಾಡಿ, ಹಳೆ ಮಸೀದಿ ಮೊಹಲ್ಲಾದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ ವತಿಯಿಂದ ಕಟ್ಟಡ ಕಟ್ಟುತ್ತಿದ್ದು, ಚರಂಡಿಗೆ ಮಣ್ಣು ಸುರಿದಿದ್ದಾರೆ. ಚರಂಡಿಯಲ್ಲಿ ನೀರು ಹರಿದು ಹೋಗಲು ಅಡ್ಡಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT