ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಯ್ದೆ ವಿರುದ್ಧ ಹೋರಾಟ ರಾಜಕೀಯ ಪ್ರೇರಿತ’

ಬಿಡದಿ: ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಡಿಸಿಎಂರಿಂದ ಶಿಲಾನ್ಯಾಸ
Last Updated 25 ಜನವರಿ 2021, 14:50 IST
ಅಕ್ಷರ ಗಾತ್ರ

ಬಿಡದಿ: ‘ರೈತರ ಕಲ್ಯಾಣಕ್ಕಾಗಿ ರೂಪಿಸಿರುವ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟವು ರಾಜಕೀಯ ಪ್ರೇರಿತ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಆರೋಪಿಸಿದರು.

ಬಿಡದಿಯಲ್ಲಿ ಸೋಮವಾರ ಟೊಯೊಟಾ ಕಿರ್ಲೋಸ್ಕರ್‌ ಕಂಪನಿ ಸಹಯೋಗದಲ್ಲಿ 12 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಮಾದರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡಿದ ಸಂದರ್ಭ ಪತ್ರಕರ್ತರ ಜೊತೆ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೆಲಸಗಳನ್ನು ಸಹಿಸದೇ ಕೆಲವರು ಅಪಪ್ರಚಾರ ಮಾಡುತ್ತ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದೇಶ ಮುನ್ನಡೆಯುವುದನ್ನು ವ್ಯವಸ್ಥಿತವಾಗಿ ತಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಆರ್ಥಿಕವಾಗಿ ಪ್ರಬಲರಾಗುವುದು ಅವರಿಗೆ ಇಷ್ಟವಿಲ್ಲ. ಯಾವತ್ತಿಗೂ ಅವರು ಮತಬ್ಯಾಂಕ್‌ನ ಬಲಿಪಶುಗಳಾಗಿಯೇ ಇರಬೇಕು ಎಂಬುದು ಅವರ ದುರದ್ದೇಶ ಎಂದು ದೂರಿದರು.

‘ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿದ್ದ ರೈತರು ಬೆಳೆದ ಬೆಳೆಗಳನ್ನು ಈಗ ಎಲ್ಲಿ ಬೇಕಾದರೂ ಮಾರಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಇದ್ದರೆ ಅನ್ನದಾತನಿಗೆ ಉತ್ತಮ ಬೆಲೆ ಸಿಗುತ್ತದೆ. ದಲ್ಲಾಳಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿಯೇ ರೈತರನ್ನು ಎತ್ತಿಕಟ್ಟಲಾಗುತ್ತಿದೆ’ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

‘ಕೃಷಿ ಕಾಯ್ದೆಗಳಲ್ಲಿ ರೈತರಿಗೆ ಮಾರಕವಾದ ಒಂದು ಅಂಶವೂ ಇಲ್ಲ. ಸ್ವತಃ ಪ್ರಧಾನಮಂತ್ರಿಗಳೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗೆಗಿನ ಎಲ್ಲ ಅನುಮಾನಗಳನ್ನು ಬಗೆಹರಿಸಿದ್ದಾರೆ. ಇಷ್ಟಾದರೂ ಹಠಕ್ಕೆ ಬಿದ್ದು ರೈತರನ್ನು ಹಾದಿ ತಪ್ಪಿಸುತ್ತಾರೆಂದರೆ ಇದರ ಹಿಂದೆ ಯಾವುದೋ ದುರುದ್ದೇಶ ಅಡಗಿದೆ ಎಂಬ ಅನುಮಾನ ಬರುವುದು ಸಹಜ. ಇಂಥ ಜನಪರ ಕಾರ್ಯಕ್ರಮಗಳಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ಲೋಪ ಸರಿಮಾಡುತ್ತೇವೆ: ರಾಮನಗರ ಜಿಲ್ಲೆಯ ಕೃಷಿ ಸೇವಾ ಕೇಂದ್ರಗಳಲ್ಲಿ ತಾಂತ್ರಿಕ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ಯಾವ ಉದ್ದೇಶಕ್ಕೆ ಆ ಕೇಂದ್ರಗಳನ್ನು ಸ್ಥಾಪಿಸಲಾಗಿದೆಯೋ ಅದು ಈಡೇರಬೇಕು. ಈ ಕೇಂದ್ರಗಳಲ್ಲಿನ ಯಂತ್ರೋಪಕರಣಗಳನ್ನು ಕೂಡಲೇ ಅರ್ಹ ಫಲಾನುಭವಿಗಳಿಗೆ ವಿತರಿಸುವಂತೆ ಆದೇಶ ನೀಡಲಾಗುವುದು’ ಎಂದರು.

ಆರೋಗ್ಯ ಕೇಂದ್ರದಿಂದ ಅನುಕೂಲ: ‘ಬಿಡದಿಯಲ್ಲಿ ಟೊಯೊಟಾ ಕಿರ್ಲೋಸ್ಕರ್‌ ಸಂಸ್ಥೆ ನಿರ್ಮಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರದಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಈ ಭಾಗದ ಜನರ ಆರೋಗ್ಯಕ್ಕೆ ವರದಾನವಾಗಲಿದೆ. ಅವರೇ ಇದನ್ನು ನಿರ್ವಹಣೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಅವರೂ ಒಪ್ಪಿದ್ದಾರೆ’ ಎಂದು ಮಾಹಿತಿ ನೀಡಿದರು.

ಮಾಗಡಿ ಶಾಸಕ‌ ಮಂಜುನಾಥ, ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎನ್‌. ಅಶೋಕ್‌, ತಾ.ಪಂ. ಸದಸ್ಯ ಗಾಣಕಲ್ ನಟರಾಜು, ಬಿಡದಿ ಪುರಸಭೆ ಅಧ್ಯಕ್ಷೆ ಸರಸ್ವತಿ ರಮೇಶ್, ಉಪಾಧ್ಯಕ್ಷ ಸಿ.ಲೋಕೇಶ್, ಜಿಲ್ಲಾಧಿಕಾರಿ ಅರ್ಚನಾ, ಜಿ.ಪಂ. ಸಿಇಒ ಇಕ್ರಮ್, ಎಸ್ಪಿ ಗಿರೀಶ್, ಡಿಎಚ್ಒ ಡಾ.ನಿರಂಜನ, ಸಿ. ಸೋಮೇಗೌಡ, ಟೊಯೊಟಾ ಸಂಸ್ಥೆಯ ಹಿರಿಯ ಅಧಿಕಾರಿ ರಾಜೇಂದ್ರ ಹೆಗಡೆ ಇದ್ದರು.

₹12 ಕೋಟಿ ವೆಚ್ಚ: ಸಕಲ ಸೌಲಭ್ಯ
ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ ಈಗ ಇರುವ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿಯೇ ಈ ಹೊಸ ಕೇಂದ್ರ ತಲೆ ಎತ್ತಲಿದೆ. ಇದಕ್ಕಾಗಿ ಟಿಕೆಎಂ ಕಂಪನಿ ಬರೋಬ್ಬರಿ ₨12 ಕೋಟಿ ವ್ಯಯಿಸಲಿದೆ. ಮುಂದಿನ 24ರಿಂದ 30 ತಿಂಗಳ ಒಳಗೆ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ.

ಹೊಸ ಸಮುದಾಯ ಆರೋಗ್ಯ ಸೌಲಭ್ಯದ ನಿರ್ಮಾಣದ ಜೊತೆಗೆ, ಮಕ್ಕಳ ಆಸ್ಪತ್ರೆ, ಒಬಿಜಿ, ಅರಿವಳಿಕೆ ಮತ್ತು ದಂತ ವೈದ್ಯಕೀಯ ವಿಶೇಷಗಳ ಹೊರರೋಗಿಗಳ ಕೊಠಡಿಗಳು ನಿರ್ಮಾಣ ಆಗಲಿವೆ. ಚುಚ್ಚುಮದ್ದು, ಆಪ್ಟೋಮೆಟರ್, ಎಕ್ಸ್-ರೇ, ರಿಕವರಿ ಮತ್ತು ಲಸಿಕೆ ಕೊಠಡಿಗಳು, ವಾರ್ಡ್ ಗಳು, ವಿವಿಧ ಪ್ರಯೋಗಾಲಯಗಳು, ಫಾರ್ಮಸಿ, ಸ್ಟಾಫ್ ರೂಂಗಳು, ಸಭಾಂಗಣ ಮತ್ತು ಒಪಿಡಿ ನೋಂದಣಿ ಕೌಂಟರ್ ಗಳನ್ನು ಸ್ಥಾಪಿಸಲಾಗುತ್ತದೆ. ಅಲ್ಲದೆ ಪೀಠೋಪಕರಣಗಳು, ಫಿಕ್ಸರ್ ಗಳು ಮತ್ತು ವಿದ್ಯುತ್ ವ್ಯವಸ್ಥೆಯನ್ನೂ ಟಿಕೆಎಂ ಒದಗಿಸಲಿದೆ. ಆರೋಗ್ಯ ಇಲಾಖೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಟಿಕೆಎಂ ಈ ಆಸ್ಪತ್ರೆಯನ್ನು ನಿರ್ವಹಣೆಯಾಗಲಿದೆ. ಇದರಿಂದ ಬಿಡದಿ ಸುತ್ತಲಿನ ಸುಮಾರು 1.2 ಲಕ್ಷ ಜನರಿಗೆ ಅನುಕೂಲ ಆಗಲಿದೆ.

***

ಈ ಸಮುದಾಯ ಆರೋಗ್ಯ ಕೇಂದ್ರದಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಇದನ್ನು ಟೊಯೊಟಾ ಕಂಪನಿಯೇ ನಿರ್ವಹಣೆ ಮಾಡಲು ಒಪ್ಪಿದೆ.
-ಡಾ. ಸಿ.ಎನ್. ಅಶ್ವತ್ಥನಾರಾಯಣ,ಉಪಮಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT