ಸೋಮವಾರ, ಜುಲೈ 26, 2021
26 °C
ವಿದ್ಯಾರ್ಥಿಗಳಿಗೆ ಪ್ರವೇಶದ್ವಾರದಲ್ಲಿ ಉಷ್ಣಾಂಶ ತಪಾಸಣೆ: ಮಾಸ್ಕ್‌ ಬಳಕೆ ಕಡ್ಡಾಯ

ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ 18ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಇದೇ 18ರಂದು ದ್ವಿತೀಯ ಜಿಲ್ಲೆಯ 12 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ನಡೆಯಲಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಕಳೆದ ಮಾರ್ಚ್‌ 4ರಿಂದ ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ನಡೆದಿದ್ದವು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಇಂಗ್ಲಿಷ್ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಆ ಪರೀಕ್ಷೆ ನಡೆಯುತ್ತಿದೆ. ಕೋವಿಡ್‌-19 ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಗುರುವಾರ ಒಟ್ಟು 8592 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಬೆಳಿಗ್ಗೆ 10ಕ್ಕೆಲ್ಲ ಪರೀಕ್ಷೆ ಆರಂಭಗೊಳ್ಳಲಿದ್ದು, ಪರೀಕ್ಷಾ ಕೇಂದ್ರಗಳ ಒಳಗೆ ಬರುವವರಿಗೆ ಮೊದಲಿಗೆ ಥರ್ಮಲ್‌ ಸ್ಕ್ಯಾನಿಂಗ್ ಮೂಲಕ ದೇಹದ ಉಷ್ಣತೆಯನ್ನು ಅಳೆಯಲಾಗುತ್ತದೆ. 100 ಡಿಗ್ರಿ ಒಳಗಿನ ಉಷ್ಣಾಂಶವುಳ್ಳವರಿಗೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತದೆ. ಅಧಿಕ ಉಷ್ಣಾಂಶ ಇಲ್ಲವೇ ಜ್ವರದ ಸಮಸ್ಯೆಯುಳ್ಳವರಿಗೆ ಒಳಗೆ ಪ್ರವೇಶವಿಲ್ಲ. ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಅಳೆಯಲೆಂದೇ ಶಿಕ್ಷಣ ಇಲಾಖೆಯು ಥರ್ಮಲ್‌ ಗನ್‌ಗಳನ್ನು ಖರೀದಿ ಮಾಡಿಟ್ಟುಕೊಂಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಈ ಯಂತ್ರಗಳನ್ನು ಸಜ್ಜುಗೊಳಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿನ ಎಲ್ಲ 12 ಪರೀಕ್ಷಾ ಕೇಂದ್ರಗಳ ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ. ಇದರೊಟ್ಟಿಗೆ ಕೇಂದ್ರಕ್ಕೆ ಬರುವ ಪ್ರತಿ ವಿದ್ಯಾರ್ಥಿಗೂ ಸ್ಯಾನಿಟೈಸರ್‌ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯು ಮಾಸ್ಕ್‌ ಬಳಸುವುದು ಕಡ್ಡಾಯವಾಗಿದೆ. ಮನೆಯಿಂದಲೇ ಮಾಸ್ಕ್‌ ತರುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆದಾಗ್ಯೂ ಪ್ರತಿ ಕೇಂದ್ರಕ್ಕೂ 100-200 ಮಾಸ್ಕ್‌ಗಳು ಪೂರೈಕೆ ಆಗಲಿದ್ದು, ಮಾಸ್ಕ್‌ ತರದ ವಿದ್ಯಾರ್ಥಿಗಳಿಗೆ ಸಹ ವಿತರಣೆ ಆಗಲಿದೆ.

'ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ದೂರವಾಣಿ ಕರೆ ಮಾಡಿ ಪರೀಕ್ಷೆ ಬಗ್ಗೆ ಮಾಹಿತಿ ನೀಡಿದ್ದೇವೆ. ವಿದ್ಯಾರ್ಥಿಯು ಸ್ವ ಇಚ್ಛೆಯಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳುವುದನ್ನು ಖಾತ್ರಿಪಡಿಸಿಕೊಂಡಿದ್ದೇವೆ. ಒಂದು ವೇಳೆ ವಿದ್ಯಾರ್ಥಿಗೆ ಆರೋಗ್ಯದ ಸಮಸ್ಯೆ ಇದ್ದಲ್ಲಿ ಅಂತಹವರಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು. ಅಂತಹ ಅವಕಾಶವನ್ನು ಸಾಮಾನ್ಯ ಪರೀಕ್ಷೆ ಎಂದೇ ಇಲಾಖೆ ಪರಿಗಣಿಸಲಿದೆ’ ಎಂದು ಡಿಡಿಪಿಯು ನರಸಿಂಹ ಮೂರ್ತಿ ತಿಳಿಸಿದರು.

ಸದ್ಯ ಜಿಲ್ಲೆಯಲ್ಲಿ ಉಳಿದುಕೊಂಡಿರುವ ಹೊರ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಇಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದ್ದು, ಅಂತಹ 264 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಜಾರ್ಖಂಡ್ ಮೂಲದ ವಿದ್ಯಾರ್ಥಿಯೊಬ್ಬರು ಇಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ.

ಅಂತರ ಪಾಲನೆ: ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಅಂತರ ಪಾಲನೆಗೆ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ಪ್ರತಿ ಕೊಠಡಿಗೆ 30 ವಿದ್ಯಾರ್ಥಿಗಳಿದ್ದು, ಇದನ್ನು 24ಕ್ಕೆ ಇಳಿಸಲಾಗಿದೆ. ಒಂದು ಕೊಠಡಿಯಲ್ಲಿ ಒಂದು ಬದಿಗೆ ಆರು ಡೆಸ್ಕ್‌ಗಳಂತೆ ಒಟ್ಟು 12 ಡೆಸ್ಕ್‌ಗಳು ಮಾತ್ರ ಇರಲಿವೆ. ಪ್ರತಿ ವಿದ್ಯಾರ್ಥಿ ನಡುವೆ ಕನಿಷ್ಠ 3 ಅಡಿ ಅಂತರ ಇರುವಂತೆ ಡೆಸ್ಕ್‌ಗಳನ್ನು ಇಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಪ್ರತಿ ಕೇಂದ್ರಕ್ಕೆ ಪರೀಕ್ಷಾ ಸಿಬ್ಬಂದಿ ಜೊತೆಗೆ ಆರೋಗ್ಯ ಸಹಾಯಕಿರನ್ನು ನೇಮಕ ಮಾಡಲಾಗಿದೆ. ಹೊರಗೆ ಪೊಲೀಸರು ಕಾವಲಿಗೆ ನಿಲ್ಲಲಿದ್ದಾರೆ. ಸುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಝೆರಾಕ್ಸ್ ಅಂಗಡಿಗಳು ಕಡ್ಡಾಯವಾಗಿ ಮುಚ್ಚಲಿವೆ. ಪ್ರತಿ ಕೇಂದ್ರದಲ್ಲೂ ಸಿಸಿಟಿವಿ ಕಣ್ಗಾವಲು ಇರಲಿದೆ.

ಉಚಿತ ಪ್ರಯಾಣ: ಪರೀಕ್ಷಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಇದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ತೋರಿಸಿ ಪ್ರಯಾಣಿಸಬಹುದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.