ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟಾ ಕಾರ್ಮಿಕರ ಹೋರಾಟ ಬೆಂಬಲಿಸಿ ಪಾದಯಾತ್ರೆ

Last Updated 28 ಜನವರಿ 2021, 13:43 IST
ಅಕ್ಷರ ಗಾತ್ರ

ಬಿಡದಿ (ರಾಮನಗರ): ಟೊಯೊಟಾ ಕಾರ್ಮಿಕರ ಬಿಕ್ಕಟ್ಟು ಪರಿಹಾರಕ್ಕೆ ಒತ್ತಾಯಿಸಿ ಬಿಡದಿಯಲ್ಲಿ ಗುರುವಾರ ಬೃಹತ್‌ ಪಾದಯಾತ್ರೆ ನಡೆಯಿತು. ಸಮಸ್ಯೆ ಇತ್ಯರ್ಥಕ್ಕೆ ಪಾದಯಾತ್ರಿಗಳು ಕಾರ್ಖಾನೆಗೆ ಒಂದು ವಾರದ ಗಡುವು ನೀಡಿದರು.

ಪಟ್ಟಣದ ಬಿಜಿಎಸ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಮಂದಿ ಹೆಜ್ಜೆ ಹಾಕಿದರು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕಾರ್ಮಿಕ ಪರ ಘೋಷಣೆ ಕೂಗುತ್ತ ಕಾಲ್ನಡಿಗೆ ಹೊರಟು ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯ ಮುಂಭಾಗ ಸಮಾವೇಶಗೊಳ್ಳಲಾಯಿತು. ರಾಮನಗರದ ಜೊತೆಗೆ ನೆರೆಯ ಬೆಂಗಳೂರು ಗ್ರಾಮಾಂತರ, ಮಂಡ್ಯ ಮೊದಲಾದ ಜಿಲ್ಲೆಗಳಿಂದ ಜನರು ಬಂದಿದ್ದರು. ಕಾರ್ಮಿಕರ ಜೊತೆಗೆ ಅವರ ಕುಟುಂಬದವರು, ರೈತ, ಕನ್ನಡಪರ, ಕಾರ್ಮಿಕ ಒಕ್ಕೂಟಗಳ ಕಾರ್ಯಕರ್ತರೂ ಹೆಜ್ಜೆ ಹಾಕಿದರು. ಸಂಸದ ಡಿ.ಕೆ. ಸುರೇಶ್, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತಿತರರು ಭಾಗಿಯಾದರು.

ಕಾರ್ಖಾನೆಯ ಮುಂಭಾಗ ಪಾದಯಾತ್ರೆ ಉದ್ದೇಶಿಸಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌, ಸಮಸ್ಯೆ ಇತ್ಯರ್ಥಕ್ಕೆ ಟೊಯೊಟಾ ಆಡಳಿತ ಮಂಡಳಿಗೆ ಒಂದು ವಾರದ ಗಡುವು ನೀಡಿದರು. ಅಷ್ಟರೊಳಗೆ ಕಾರ್ಮಿಕರ ಜೊತೆ ಮಾತುಕತೆ ನಡೆಸಿ, ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳದೇ ಹೋದರೆ ಕಾರ್ಖಾನೆಗೆ ಬೀಗ ಜಡಿಯುವ ಎಚ್ಚರಿಕೆ ನೀಡಿದರು.

‘ಬಿಕ್ಕಟ್ಟು ಉಲ್ಬಣಕ್ಕೆ ಕಾರ್ಖಾನೆಯ ಹಠಮಾರಿ ಧೋರಣೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನಿರ್ಲಕ್ಷ್ಯವೇ ಕಾರಣ’ ಎಂದು ಆರೋಪಿಸಿದ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ, ‘ಎಚ್‌.ಡಿ. ಕುಮಾರಸ್ವಾಮಿ ಈ ಹೋರಾಟದ ನೇತೃತ್ವ ವಹಿಸಿಕೊಳ್ಳುವುದಾದರೆ ಅವರ ಹಿಂದೆ ನಿಂತು ಕಾರ್ಮಿಕರಿಗೆ ನ್ಯಾಯ ಕೊಡಿಸಲು ಸಿದ್ಧ’ ಎಂದರು.

ಮಾಜಿ ಸಚಿವ ನರೇಂದ್ರ ಸ್ವಾಮಿ, ಮಾಜಿ ಶಾಸಕರಾದ ಚಲುವರಾಯಸ್ವಾಮಿ, ಕೆ. ರಾಜು ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ರೈತ ಸಂಘ, ಬಿಎಸ್ಪಿ, ವಿವಿಧ ಕಾರ್ಮಿಕ ಒಕ್ಕೂಟಗಳು, ಸಂಘಟನೆಗಳು ಈ ಹೋರಾಟವನ್ನು ಬೆಂಬಲಿಸಿದ್ದವು.

***

ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಎಲ್ಲರೂ ಒಗ್ಗೂಡಿ ಕಾರ್ಖಾನೆ ಬಾಗಿಲು ಮುಚ್ಚಿಸುತ್ತೇವೆ.
-ಡಿ.ಕೆ. ಸುರೇಶ್,ಬೆಂಗಳೂರು ಗ್ರಾಮಾಂತರ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT