ಸೋಮವಾರ, ನವೆಂಬರ್ 29, 2021
20 °C

dnp ಎಲೇಕೇರಿಗೆ ರಾಘಣ್ಣ ಭೇಟಿ: ಕುಟುಂಬಕ್ಕೆ ಸಾಂತ್ವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ನಟ ಪುನೀತ್ ರಾಜ್‌ಕುಮಾರ್‌ ನಿಧನದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ನಗರದ ಎಲೇಕೇರಿಯ ಪುನೀತ್ ಅಭಿಮಾನಿ ವೆಂಕಟೇಶ್ ಮನೆಗೆ ನಟ ರಾಘವೇಂದ್ರ ರಾಜ್‌ಕುಮಾರ್ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ
ಹೇಳಿದರು.

ವೆಂಕಟೇಶ್ (25) ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪುನೀತ್ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಅವರು ತನ್ನ ನೆಚ್ಚಿನ ನಟ ಇಲ್ಲದ ಮೇಲೆ ನಾನು ಬದುಕುವುದಿಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ಮನೆಯವರ ಕಾವಲಿನ ನಡುವೆಯೂ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ತನ್ನ ಕಣ್ಣುಗಳನ್ನು ಪುನೀತ್ ಅವರಂತೆಯೇ ದಾನ ಮಾಡಬೇಕು ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದ ಕಾರಣ ಸಾವಿನ ನೋವಿನ ನಡುವೆಯೂ ಅವರ ಕಣ್ಣುಗಳನ್ನು ಕುಟುಂಬದವರು ದಾನ ಮಾಡಿದ್ದರು. ಅದನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯವುಳ್ಳವರಿಗೆ ಕಸಿ ಮಾಡಲಾಗಿತ್ತು.

ವಿಷಯ ತಿಳಿದು ಭಾನುವಾರ ಎಲೇಕೇರಿಗೆ ಬಂದ ರಾಘವೇಂದ್ರ ರಾಜ್‌ಕುಮಾರ್ ಅರ್ಧ ಗಂಟೆಗೂ ಹೆಚ್ಚು ಕಾಲ ವೆಂಕಟೇಶ್ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು. ನಿಮ್ಮ ಜೊತೆಗೆ ನಾವಿದ್ದೇವೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.

‘ಪುನೀತ್ ಸಾವು ಎಲ್ಲರಿಗೂ ದುಃಖ ತಂದಿದೆ. ಅದನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟ. ಆದರೂ ಅಭಿಮಾನಿಗಳು ಧೈರ್ಯಗೆಡಬಾರದು. ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಮಾಡಬಾರದು. ನಿಮಗೂ ಕುಟುಂಬವಿದೆ ಎಂಬುದನ್ನು ಮರೆಯಬಾರದು’ ಎಂದು ಮನವಿ ಮಾಡಿದರು.

ಸ್ಥಳೀಯ ಮುಖಂಡರು, ಮಹಿಳೆಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.