ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಹಾನಿ: ಸೂಕ್ತ ಪರಿಹಾರ ಒದಗಿಸಿ

ಸಂಸದ ಡಿ.ಕೆ. ಸುರೇಶ್‌ ನೇತೃತ್ವದಲ್ಲಿ ಅಧಿಕಾರಿಗಳ ಸಭೆ
Last Updated 13 ಸೆಪ್ಟೆಂಬರ್ 2022, 6:12 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಅಧಿಕಾರಿಗಳು ನಿರ್ವಹಿಸಬೇಕು ಎಂದು ಸಂಸದ ಡಿ. ಕೆ ಸುರೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರವಾಹ ಹಾನಿ ಪರಿಹಾರ ಕುರಿತ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು ಪ್ರವಾಹ, ಪ್ರಕೃತಿ ವಿಕೋಪಗಳಿಂದ ಸಂಕಷ್ಟದಲ್ಲಿರುವ ರೈತರಿಗೆ ತೊಂದರೆಯಾಗಿದೆ. ಆದಷ್ಟು ಶೀಘ್ರ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಯಿಂದ ಹಾನಿಯಾದ ಮನೆಗಳಿಗೆ ಮತ್ತು ಬೆಳೆ ಹಾನಿಗಳಿಗೆ ಸೂಕ್ತ ಪರಿಹಾರ ನೀಡಬೇಕು. ಶಾಲೆ, ರಸ್ತೆ ಮೂಲ ಸೌಕರ್ಯಗಳಿಗೂ ಧಕ್ಕೆಯಾಗಿದ್ದು, ಶೀಘ್ರವೇ ಸರಿಪಡಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ರಸ್ತೆ, ಸೇತುವೆ, ಕಾಲುವೆಗಳು ಹಾನಿಯಾಗಿದ್ದು, ತುರ್ತು ದುರಸ್ತಿ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಹೇಳಿದರು.

ರಾಮನಗರ ಮತ್ತು ಮಾಗಡಿ ತಾಲ್ಲೂಕುಗಳಲ್ಲಿ 34 ಕಿ.ಮೀ ಉದ್ದ ರಸ್ತೆಗಳು ಹಾಳಾಗಿದ್ದು, ಇವುಗಳ ದುರಸ್ತಿಗೆ ಜಿಲ್ಲಾಧಿಕಾರಿ ಈಗಾಗಲೇ ₹39 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ. ಇದರಿಂದ ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ಜಿಲ್ಲೆಯಲ್ಲಿನ ಸೇತುವೆಗಳು ಹಾನಿಗೀಡಾಗಿದ್ದು, ಶಾಲಾ-ಕಾಲೇಜು ಮಕ್ಕಳು ಹಾಗೂ ಜನರಿಗೆ ಓಡಾಡಲು ಅನುಕೂಲವಾಗುವಂತೆ ತಾತ್ಕಾಲಿಕ ಸೇತುವೆ ನಿರ್ಮಿಸುವಂತೆ ತಿಳಿಸಿದರು.

ಇನ್ನು 3 ದಿನಗಳಲ್ಲಿ ಜಿಲ್ಲೆಯಲ್ಲಿ ಆಗಿರುವ ನಷ್ಟದ ವರದಿಯನ್ನು ತಯಾರಿಸಿ ಟೆಂಡರ್ ಕರೆಯದೆ 4ಜಿ ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವ ಸಲ್ಲಿಸುವಂತೆ ಹಾಗೂ ಈ ಎಲ್ಲಾ ಕಾಮಗಾರಿಗಳ ಪರಿಶೀಲನೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಮುಖ್ಯ ಕಾರ್ಯನಿರ್ವಾಕಾಧಿಕಾರಿ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಟಿ. ಜವರೇಗೌಡ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

‘ಹಾನಿ ಸ್ಥಳಕ್ಕೆ ಭೇಟಿ ನೀಡಿ’

ಪ್ರವಾಹ ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ರಸ್ತೆ, ಸೇತುವೆ, ಕಾಲುವೆ ಹಾನಿಗಳ ಸರಿಯಾದ ಅಂಕಿ ಅಂಶ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಸದ ಡಿ.ಕೆ. ಸುರೇಶ್ ಅವರು ಅಧಿಕಾರಿಗಳಿಗೆ ಹೇಳಿದರು.

ಮಳೆಯಿಂದ ಸಾವಿಗೀಡಾದ ಸಾಕು ಪ್ರಾಣಿಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದರು. ಬೆಳೆ ಹಾನಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸರಿಯಾಗಿ ಕ್ರೋಢೀಕರಿಸಿ ಪರಿಹಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಮಳೆ ಹಾಗೂ ಪ್ರವಾಹದಿಂದ ಮನೆಗಳಿಗೆ ಹಾನಿಯಾಗಿದ್ದು, ಅವರ ಜೀವನ ಪುನಃ ಸ್ಥಾಪಿಸಿಕೊಳ್ಳಲು ಇನ್ನು ಆರು ತಿಂಗಳ ಅವಶ್ಯಕತೆ ಇದೆ. ಅದುದರಿಂದ ಸಂಬಂಧಪಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕು. ಆರೋಗ್ಯ ಇಲಾಖೆಯವರು ಆರೋಗ್ಯ ಕೇಂದ್ರಗಳನ್ನು ತೆರೆದು ಸೂಕ್ತ ಚಿಕಿತ್ಸೆಯನ್ನು ನೀಡಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT