ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ ತೀವ್ರ; ಬಿತ್ತನೆ ಕುಂಠಿತ

ರಾಗಿ ಕಣಜ ರಾಮನಗರದಲ್ಲಿ ಈ ವರ್ಷ ಉತ್ಪಾದನೆ ಕ್ಷೀಣ ಸಾಧ್ಯತೆ
Last Updated 16 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ ಕೆಲವು ಭಾಗಗಳಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಆದಾಗ್ಯೂ ಕನಕಪುರ ಹಾಗೂ ಚನ್ನಪಟ್ಟಣದಲ್ಲಿ ಮಳೆಯ ಕೊರತೆ ತೀವ್ರವಾಗಿದ್ದು, ರೈತರು ಕೃಷಿಯಿಂದ ವಿಮುಖವಾಗಿದ್ದಾರೆ.

ಜುಲೈ ಹಾಗೂ ಆಗಸ್ಟ್‌ನಲ್ಲಿ ಮಳೆಯ ಕೊರತೆ ತೀವ್ರವಾಗಿದೆ. ಎರಡೂ ತಿಂಗಳಲ್ಲೂ ವಾಡಿಕೆಗಿಂತ ಶೇ 33ರಷ್ಟು ಮಳೆ ಕಡಿಮೆ ಬಿದ್ದಿದೆ. ಹೀಗಾಗಿಯೇ ರೈತರು ಕೃಷಿ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಾಗಿಯ ಕಣಜವಾದ ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಏಕದಳ ಧಾನ್ಯದ ಬಿತ್ತನೆಗೆ ತೀವ್ರ ಹಿನ್ನಡೆ ಆಗಿದೆ. ಅದರಲ್ಲಿಯೂ ಕನಕಪುರದಲ್ಲಿ 47,965 ಹೆಕ್ಟೇರ್‌ ಕೃಷಿ ಯೋಗ್ಯ ಭೂಮಿಯಲ್ಲಿ ಈವರೆಗೆ ಕೇವಲ 9370 ಹೆಕ್ಟೇರ್‌ ಭೂಮಿಯಲ್ಲಿ ಮಾತ್ರ ಕೃಷಿ ಚಟುವಟಿಕೆ ನಡೆದಿದ್ದು, ಶೇ 19.54 ಜಮೀನಿನಲ್ಲಿ ಮಾತ್ರ ಬಿತ್ತನೆಯಾಗಿದೆ. ಇನ್ನುಳಿದ ಬಹುಪಾಲು ಭೂಮಿಯಲ್ಲಿ ರೈತರು ಉಳುಮೆ ಮಾಡುವುದನ್ನೇ ಬಿಟ್ಟಿದ್ದಾರೆ. ಎಲ್ಲಿ ನೋಡಿದರೂ ಬೀಳು ಬಿಟ್ಟ ಜಮೀನುಗಳು ಕಾಣತೊಡಗಿವೆ. ಹೀಗಾಗಿ ಈ ವರ್ಷ ರಾಗಿ ಸೇರಿದಂತೆ ಪ್ರಮುಖ ಧಾನ್ಯಗಳ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗುವ ಸಾಧ್ಯತೆ ಇದೆ.

ಚನ್ನಪಟ್ಟಣದಲ್ಲಿ ಸಹ ಪರಿಸ್ಥಿತಿ ಭಿನ್ನವಾಗಿ ಏನು ಇಲ್ಲ. ಕೆರೆಗಳು ತುಂಬಿರುವ ಪ್ರದೇಶಗಳಲ್ಲಿ ಮಾತ್ರ ಕೃಷಿ ಕಾರ್ಯ ನಡೆದಿದೆ. ಆದರೆ ಮಳೆಯನ್ನೇ ನಂಬಿರುವ ರೈತರು ಕೈಚೆಲ್ಲಿ ಕುಳಿತಿದ್ದಾರೆ. ಇಲ್ಲಿನ 15,762 ಹೆಕ್ಟೇರ್‌ ಕೃಷಿ ಜಮೀನಿನ ಪೈಕಿ 2378 ಹೆಕ್ಟೇರ್‌ ಭೂಮಿ ಮಾತ್ರ ಈವರೆಗೆ ಬಿತ್ತನೆಗೆ ಒಳಪಟ್ಟಿದ್ದು, ಶೇ 15.09 ಪ್ರದೇಶದಲ್ಲಿ ಮಾತ್ರ ಕೃಷಿ ಚಟುವಟಿಕೆ ನಡೆದಿದೆ. ಇನ್ನೂ ಸಾಕಷ್ಟು ಜಮೀನು ಖಾಲಿಯಾಗಿಯೇ ಉಳಿದುಹೋಗಿದೆ.

ಉಳಿದೆರಡು ತಾಲ್ಲೂಕಿಗೆ ಹೋಲಿಸಿದರೆ ರಾಮನಗರ ಹಾಗೂ ಮಾಗಡಿ ತಾಲ್ಲೂಕಿನ ಕೃಷಿ ಸ್ಥಿತಿ–ಗತಿ ಕೊಂಚ ಸುಧಾರಿಸಿದೆ. ಮಾಗಡಿ ತಾಲ್ಲೂಕಿನ 30,111 ಹೆಕ್ಟೇರ್‌ ಜಮೀನಿನ ಪೈಕಿ 19,165 ಹೆಕ್ಟೇರ್‌ ಭೂಮಿ ಬಿತ್ತನೆಗೆ ಒಳಪಟ್ಟಿದ್ದು, ಶೇ 63.65 ರಷ್ಟು ಜಮೀನು ಕೃಷಿಗೆ ಒಳಪಟ್ಟಿದೆ. ರಾಮನಗರ ತಾಲ್ಲೂಕಿನಲ್ಲಿ 20,163 ಕೃಷಿ ಯೋಗ್ಯ ಭೂಮಿ ಇದ್ದು, ಇದರಲ್ಲಿ 11,672 ಹೆಕ್ಟೇರಿನಲ್ಲಿ ಬಿತ್ತನೆ ನಡೆದಿದ್ದು, ಶೇ 57.89 ರಷ್ಟು ಜಮೀನಿನಲ್ಲಿ ಕೃಷಿ ಕಾರ್ಯ ನಡೆದಿದೆ.

ಚೇತರಿಕೆ ಕಷ್ಟ; ಮಳೆಯ ತೀವ್ರ ಕೊರತೆಯಿಂದಾಗಿ ಬಿತ್ತನೆ ಕುಂಠಿತಗೊಂಡಿರುವ ತಾಲ್ಲೂಕುಗಳಲ್ಲಿ ಕೃಷಿ ಕಾರ್ಯ ಚೇತರಿಕೆ ಕಾಣುವುದು ಕಷ್ಟವಾಗಿದೆ.

‘ಕನಕಪುರ ಹಾಗೂ ಚನ್ನಪಟ್ಟಣದಲ್ಲಿ ಮತ್ತೆ ಮಳೆಯಾದರೂ ಹೆಚ್ಚಿನ ಜಮೀನು ಬಿತ್ತನೆಗೆ ಒಳಪಡುವುದು ಅನುಮಾನ. ರಾಗಿ ಬಿತ್ತನೆಯ ಅವಧಿ ಮುಗಿಯುತ್ತಾ ಬಂದಿದೆ. ತತ್‌ಕ್ಷಣಕ್ಕೆ ಉತ್ತಮ ಮಳೆಯಾದಲ್ಲಿ ಅಲ್ಪಾವಧಿ ತಳಿಗಳನ್ನು ಬಿತ್ತಬಹುದು. ಅದಕ್ಕೆ ಮುಂದೆಯೂ ಮಳೆ ಬೇಕಾಗುತ್ತದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್‌. ರವಿ.

ಅಂಕಿ–ಅಂಶ

* 1.14 ಲಕ್ಷ ಹೆಕ್ಟೇರ್‌–ಜಿಲ್ಲೆಯಲ್ಲಿನ ಮುಂಗಾರು ಬಿತ್ತನೆ ಪ್ರಮಾಣ
* 42,585 ಹೆಕ್ಟೇರ್–ಈವರೆಗೆ ಬಿತ್ತನೆಗೆ ಒಳಪಟ್ಟ ಜಮೀನು
* 37.36–ಶೇಕಡವಾರು ಬಿತ್ತನೆ ಪ್ರಮಾಣ

ತಾಲ್ಲೂಕುವಾರು ರಾಗಿ ಬಿತ್ತನೆ ಪ್ರಮಾಣ (ಹೆಕ್ಟೇರ್‌ಗಳಲ್ಲಿ)
ತಾಲ್ಲೂಕು ಗುರಿ ಸಾಧನೆ
ರಾಮನಗರ 12,530 9370
ಚನ್ನಪಟ್ಟಣ 10,750 1520
ಕನಕಪುರ 29,280 6974
ಮಾಗಡಿ 21,800 16745
ಒಟ್ಟು 74,380 34614

ತಿಂಗಳುವಾರು ಮಳೆ ಪ್ರಮಾಣ (ಮಿ.ಮೀಗಳಲ್ಲಿ)
ತಿಂಗಳು ವಾಡಿಕೆ ವಾಸ್ತವ ವ್ಯತ್ಯಾಸ
ಜೂನ್‌ 70 69 –1
ಜುಲೈ 81 54 –33
ಆಗಸ್ಟ್‌ 47 31 –33

ಮುಂಗಾರಿನಲ್ಲಿ ತಾಲ್ಲೂಕುವಾರು ಮಳೆ ಪ್ರಮಾಣ (ಜೂನ್‌ 1ರಿಂದ ಆಗಸ್ಟ್‌ 16ವರೆಗೆ)
ತಾಲ್ಲೂಕು ವಾಡಿಕೆ ವಾಸ್ತವ ವ್ಯತ್ಯಾಸ

ಚನ್ನಪಟ್ಟಣ 189 157 –17
ಕನಕಪುರ 172 101 –41
ಮಾಗಡಿ 235 238 1
ರಾಮನಗರ 224 184 –18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT