ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗ ತಾರತಮ್ಯ ಅರಿವು ಮೂಡಿಸಿ

ಲಿಂಗ ಅಸಮಾನತೆ ಕುರಿತು ಉಪನ್ಯಾಸ
Last Updated 7 ನವೆಂಬರ್ 2019, 14:16 IST
ಅಕ್ಷರ ಗಾತ್ರ

ಚನ್ನಪಟ್ಟಣ: ಲಿಂಗ ತಾರತಮ್ಯದ ಬಗ್ಗೆ ಅರಿವು ಮೂಡಿಸುವ ಅವಶ್ಯ ಇದೆ ಎಂದು ಕನ್ನಡ ಶಿಕ್ಷಕ ಯೋಗೇಶ್ ಚಕ್ಕೆರೆ ತಿಳಿಸಿದರು.

ಪಟ್ಟಣದ ಮಂಜುನಾಥ ಬಡಾವಣೆಯಲ್ಲಿ ಮಹಿಳಾ ಕಾರ್ಮಿಕರ ಸಂಘದ ಕಚೇರಿಯಲ್ಲಿ ಮಾನವಹಕ್ಕು ಮತ್ತು ಅಭಿವೃದ್ಧಿ ಸ್ವತಂತ್ರ ಆಯೋಗ ಸರ್ಕಾರೇತರ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ ‘ಲಿಂಗ ಅಸಮಾನತೆ ತಡೆಯುವಲ್ಲಿ ಯುವ ಸಮೂಹದ ಪಾತ್ರ'ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಗಂಡು ಮತ್ತು ಹೆಣ್ಣು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನು ಅರಿತು ಪುರುಷ ಮತ್ತು ಮಹಿಳೆಯರಲ್ಲಿ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳಬೇಕು. ಗಂಡು ಮತ್ತು ಹೆಣ್ಣೆಂಬ ಬೇಧಭಾವ ಇಂದಿಗೂ ಜೀವಂತವಾಗಿದೆ. ಇಬ್ಬರೂ ಸಮಾನರು ಎಂಬ ಭಾವನೆ ಇನ್ನು ಸಮಾಜದಲ್ಲಿ ಮೂಡಿಲ್ಲ. ಗಂಡು ಮಗು ಜನಿಸಿದಾಗ ಇರುವ ಸಂತಸ, ಹೆಣ್ಣು ಮಗು ಜನಿಸಿದಾಗ ಇರುವುದಿಲ್ಲ. ಹೆಣ್ಣು ಮಗು ಹುಟ್ಟುವ ಹಕ್ಕನ್ನೇ ನಿರಾಕರಿಸುತ್ತಿರುವುದು ವಿಷಾದನೀಯ ಎಂದರು.

ಸಂಸ್ಥೆಯ ರಾಮನಗರ ಜಿಲ್ಲಾ ಸಂಯೋಜಕಿ ಗೋಪಾ ರಾಮನ್ ಮಾತನಾಡಿ, ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶಗಳಿದ್ದರೂ ಸ್ತ್ರೀಯನ್ನು ಎರಡನೇ ದರ್ಜೆ ಪ್ರಜೆಯನ್ನಾಗಿ ನೋಡಲಾಗುತ್ತಿದೆ. ಇಂದಿನ ಆಧುನಿಕ ಯುಗದಲ್ಲಿಯೂ ಬಾಲ್ಯವಿವಾಹ, ವರದಕ್ಷಿಣೆ, ಗಂಡು ಮಗು ಬೇಕು ಎನ್ನುವ ಹಂಬಲ, ಹೆಣ್ಣು ಶಿಶುಹತ್ಯೆ, ವಿವಾಹ ವಿಚ್ಛೇದನ, ಸಾಮಾಜಿಕ ಅಭದ್ರತೆ, ಅತ್ಯಾಚಾರ, ಲೈಂಗಿಕ ಹಾಗೂ ಕೌಟುಂಬಿಕ ದೌರ್ಜನ್ಯ ಸುಳಿಗೆ ಹೆಣ್ಣು ಸಿಲುಕಿ ತತ್ತರಿಸುತ್ತಿದ್ದಾಳೆ ಎಂದು ವಿಷಾದಿಸಿದರು.

ಪ್ರತಿಯೊಬ್ಬರೂ ಹೆಣ್ಣು ಮತ್ತು ಗಂಡು ಮಗುವನ್ನು ಸಮಾನವಾಗಿ ಕಂಡಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಇಂದಿನ ಯುವಜನರು ಮತ್ತು ಸಂಘ – ಸಂಸ್ಥೆಗಳು ಲಿಂಗ ತಾರತಮ್ಯ ಮಾಡದಂತೆ ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆ‌ ಸಂಯೋಜನಾಧಿಕಾರಿ ಲಲಿತಾ, ಯೋಗೇಶ್ ದ್ಯಾವಪಟ್ಟಣ, ಗುರುಕಿರಣ್, ಈಶ್ವರ್, ಚಂದ್ರಶೇಖರ್, ಚೇತನ್, ಜೀವನ್ ಇದ್ದರು.

ರಾಮನಗರ, ಮಂಡ್ಯ, ಮೈಸೂರು ಭಾಗದ ಆಯ್ದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT