ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ರಾಜಕಾಲುವೆಗಳಲ್ಲಿ ಹೂಳು; ಸ್ಚಚ್ಛವಾಗದ ಚರಂಡಿ

ಮಳೆಗಾಲ ನಿರ್ವಹಣೆಗೆ ಸಿದ್ಧತೆ ಮಾಡಿಕೊಳ್ಳದ ರಾಮನಗರ ನಗರಸಭೆ l ಚರಂಡಿಯಲ್ಲಿ ಗಿಡಗಂಟಿ, ಕಸದ ರಾಶಿ
Last Updated 13 ಜೂನ್ 2022, 8:32 IST
ಅಕ್ಷರ ಗಾತ್ರ

ರಾಮನಗರ: ಸುಡು ಬಿಸಿಲಿನ ಬೇಸಿಗೆ ತರುವಾಯ ಜಿಲ್ಲೆಯಲ್ಲಿ ಮಳೆಗಾಲ ಕಾಲಿರಿಸಿದೆ. ಆದರೆ ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಸ್ಥಳೀಯ ನಗರ ಸಂಸ್ಥೆ ಆಡಳಿತ ಅದಕ್ಕೆ ಸಿದ್ಧತೆ ಮಾಡಿಕೊಳ್ಳುವುದನ್ನು ಮರೆತಂತಿದೆ.

ರಾಮನಗರದ ಬಹುತೇಕ ರಾಜಕಾಲುವೆಗಳು ಮತ್ತು ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದ್ದು, ಗಿಡಗಂಟಿಗಳು ತುಂಬಿ ನಿಂತಿವೆ. ವರುಣನ ಅಬ್ಬರ ಹೆಚ್ಚಾದಷ್ಟೂ ಜನರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷದಿಂದ ರಾಜಕಾಲುವೆಗಳ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ನಗರದ ಒಳಗೆ ಮಳೆ ನೀರು ಸಲೀಸಾಗಿ ಹರಿದು ಹೋಗುವ ಸಲುವಾಗಿ ರಾಜಕಾಲುವೆಗಳು ನಿರ್ಮಾಣವಾಗಿವೆ. ಮಾಮೂಲಿ ಚರಂಡಿಗಿಂತ ನಾಲ್ಕಾರು ಪಟ್ಟು ದೊಡ್ಡದಾಗಿರುವ ಇವು ಮಳೆ ನೀರನ್ನು ಅಷ್ಟೇ ಸಲೀಸಾಗಿ ಕೊಂಡೊಯ್ಯವ ವ್ಯವಸ್ಥೆ ಹೊಂದಿವೆ. ರಾಮನಗರದಲ್ಲಿ ಸದ್ಯ ಇಂತಹ ನಾಲ್ಕೈದು ದೊಡ್ಡ ಕಾಲುವೆಗಳು ಇವೆ. ನಗರದೊಳಗಿನ ಕೆರೆಗಳ ಕೋಡಿ ಬಿದ್ದ ನೀರು ಹರಿದುಹೋಗುವ ಹಳ್ಳಗಳು ಕ್ರಮೇಣವಾಗಿ ರಾಜಕಾಲುವೆಗಳಾಗಿ ಪರಿವರ್ತನೆ
ಹೊಂದಿವೆ.

ಒಂದು ಕಾಲುವೆಯು ರಾಯರದೊಡ್ಡಿ ಬಳಿಯಿಂದ ವಿವೇಕಾನಂದ ನಗರ, ರೋಟರಿ ವೃತ್ತ ಮಾರ್ಗವಾಗಿ ಹರಿದು ಅರ್ಕಾವತಿ ನದಿ ಸೇರುತ್ತದೆ. ಬೋಳಪ್ಪನ ಕೆರೆಯ ಕೋಡಿ ಕಾಲುವೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾರ್ಗವಾಗಿ ಎಬಿಆರ್‌ ಹೋಟೆಲ್ ಹಿಂಭಾಗದಿಂದ ಅರ್ಕಾವತಿಗೆ ತಲುಪುತ್ತದೆ.

ಬೋಳಪ್ಪನ ಕೆರೆಯ ಮತ್ತೊಂದು ಕೋಡಿ ಕಾಲುವೆಯು ಚಾಮುಂಡಿಪುರದಿಂದ ಆರಂಭ ಗೊಂಡು, ಮಂಜುನಾಥ ನಗರ, ಕೆಂಪೇಗೌಡ, ಐಜೂರು ವೃತ್ತ, ಕೈಗಾರಿಕಾ ಪ್ರದೇಶದ ಮಾರ್ಗವಾಗಿ ಅರ್ಕಾವತಿಯ ಒಡಲು ಸೇರುತ್ತಿದೆ. ಮತ್ತೊಂದು ಕಾಲುವೆಯು ಬಿ.ಎಂ. ರಸ್ತೆ, ಹನುಮಂತನಗರ, ಕನಕಪುರ ರಸ್ತೆ ಮಾರ್ಗವಾಗಿ ಅರ್ಕಾವತಿ ನದಿ ಸೇರುತ್ತದೆ.

ಈ ನಾಲ್ಕು ರಾಜಕಾಲುವೆಗಳ ಜೊತೆಗೆ ಮತ್ತೊಂದು ಬೃಹತ್‌ ರಾಜಕಾಲುವೆಯೂ ನಗರದಲ್ಲಿ ಹರಿಯುತ್ತದೆ. ಜಿಲ್ಲಾಧಿಕಾರಿ ಕಚೇರಿ ಹಿಂಭಾಗ ಇರುವ ಭಕ್ಷಿ ಕೆರೆಯ ಸಿಹಿ ನೀರಿನ ಹಳ್ಳ ಜನರ ಬಾಯಲ್ಲಿ ಸೀರಳ್ಳವಾಗಿ ಬದಲಾಗಿ ಹೋಗಿವೆ. ಇಲ್ಲಿ ಸಿಹಿ ನೀರಿನ ಬದಲಾಗಿ ಹೊಲಸು ನೀರು ತುಂಬಿ ಹರಿದಿದೆ. ಈ ಹಳ್ಳವು ಭಕ್ಷಿ ಕೆರೆಯಿಂದ ಆರಂಭಗೊಂಡು ಬಾಲಗೇರಿ, ಕೊತ್ತೀಪುರ, ಅರ್ಕಾವತಿ ಬಡಾವಣೆ ಸಹಿತ ಹತ್ತಾರು ಪ್ರದೇಶದ ಚರಂಡಿ ನೀರನ್ನು ತುಂಬಿಕೊಂಡು ಅಚ್ಚಲು ಸಮೀಪ ಅರ್ಕಾವತಿ ನದಿಯಲ್ಲಿ ವಿಲೀನವಾಗುತ್ತಿದೆ.

ಗಿಡಗಂಟಿ, ಕಸದ ರಾಶಿ: ರಾಜಕಾಲುವೆಗಳ ಬಹುತೇಕ ಕಡೆ ಹೂಳು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸುವುದೇ ನಗರಸಭೆಗೆ ಸವಾಲಾಗಿದೆ. ಕೆಲವು ಕಡೆ ಹೂಳೆತ್ತಿಯೂ ಮತ್ತೆ ಮಣ್ಣು ತುಂಬಿಕೊಂಡಿದೆ. ಬಹುತೇಕ ಕಡೆಗಳಲ್ಲಿ ಕಾಲುವೆಗಳ ಒಳಗೆ ಗಿಡಗಂಟಿಗಳು ಬೆಳೆದು ನಿಂತಿವೆ. ಅಲ್ಲಲ್ಲಿ ಕಸ ಕಡ್ಡಿ ತುಂಬಿಕೊಂಡಿರುವ ಕಾರಣ ನೀರು ಸರಾಗವಾಗಿ ಹರಿಯದಾಗಿದೆ. ಇದರಿಂದಾಗಿ ಸುತ್ತಲಿನ ಜನರಿಗೆ ಸೊಳ್ಳೆಗಳು, ಹಾವು–ಚೇಳಿನ ಕಾಟ ವಿಪರೀತವಾಗಿದೆ.

ಬಹುತೇಕ ಕಡೆ ಜನರು ರಾಜಕಾಲುವೆಗಳಿಗೆ ಕಸದ ರಾಶಿ ಸುರಿಯುತ್ತಿದ್ದಾರೆ. ಪ್ಲಾಸ್ಟಿಕ್‌ ಕಸ, ಕೋಳಿ ಅಂಗಡಿಗಳ ತ್ಯಾಜ್ಯ, ಹೋಟೆಲ್‌ಗಳಲ್ಲಿನ ಉಳಿಕೆ ಪದಾರ್ಥ... ಹೀಗೆ ಎಲ್ಲವೂ ಕಾಲುವೆಗಳಿಗೆ ಬಂದು ಸೇರುತ್ತಿವೆ. ಇದರಿಂದಾಗಿ ನೀರು ಕಲುಷಿತಗೊಳ್ಳುವ ಜೊತೆಗೆ ಅಲ್ಲಲ್ಲಿ ಕಟ್ಟಿಕೊಂಡು ಸಮಸ್ಯೆಯಾಗುತ್ತಿದೆ.

ಒತ್ತುವರಿಯದ್ದೇ ಸಮಸ್ಯೆ: ನಗರದ ಬಹುತೇಕ ಕಾಲುವೆಗಳು ಒತ್ತುವರಿಗೆ ಒಳಪಟ್ಟಿವೆ. ರಾಜಕಾಲುವೆಗಳು ಸುಮಾರು 30 ಅಡಿ ಅಗಲ ಇರಬೇಕು. ಅದರ ಸುತ್ತ ಕನಿಷ್ಠ 5 ಅಡಿ ಜಾಗ ಬಿಟ್ಟು ಮನೆ ಕಟ್ಟಿಕೊಳ್ಳಬೇಕು ಎಂಬ ನಿಯಮ ಇದೆ. ಆದರೆ ಸಾಕಷ್ಟು ಕಡೆಗಳಲ್ಲಿ ಈ ಕಾಲುವೆಗಳು 10–15 ಅಡಿಗೆ ಸೀಮಿತಗೊಂಡಿವೆ. ಕೆಲವು ಕಡೆ ನಗರಸಭೆಯೇ 15 ಅಗಲಕ್ಕೆ ಗೋಡೆ ಕಟ್ಟಿಕೊಂಡು ತಾನೇ ಕಾಲುವೆ ಸೀಮಿತ ಮಾಡಿಕೊಂಡಿದೆ. ಹೀಗಾಗಿ ಸುತ್ತಮುತ್ತ ಮನೆಗಳು ನಿರ್ಮಾಣ ಆಗಿವೆ. ಈ ಒತ್ತುವರಿಯನ್ನು ತೆರವು ಗೊಳಿಸುವ ಪ್ರಯತ್ನ ನಡೆದಿಲ್ಲ.

ಇನ್ನೂ ಕೆಲವು ಕಡೆ ರಾಜಕಾಲುವೆಗಳ ಗುರುತೇ ಸಿಗದಂತೆ ಮುಚ್ಚಿ ಹಾಕಲಾಗಿದೆ. ನಕ್ಷೆಯಲ್ಲಿ ಕಾಲುವೆ ಇದ್ದರೂ ಅಲ್ಲಿ ಮನೆಗಳು ಎದ್ದಿವೆ. ಕೆಲವು ಹಳ್ಳಗಳು ಅರ್ಧಕ್ಕೆ ಮೊಟಕುಗೊಂಡಿವೆ. ಇಂತಹ ಕಡೆ ಮಳೆ ಬಂದ ಸಂದರ್ಭ ನೀರು ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ. ನಗರದ ಹೋಲಿ ಕ್ರೆಸೆಂಟ್‌ ಶಾಲೆ ಹಿಂಭಾಗ, ರೈಲು ನಿಲ್ದಾಣ ಹಿಂಭಾಗದ ಅರ್ಕಾವತಿ ಬಡಾವಣೆ ಸೇರಿದಂತೆ ಹಲವು ಪ್ರದೇಶದ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ.

ತಡೆಗೋಡೆಗಳಿಲ್ಲ: ನಗರಸಭೆಯು ವಿವಿಧ ಅನುದಾನಗಳ ಅಡಿಯಲ್ಲಿ ರಾಜಕಾಲುವೆಗಳಿಗೆ ತಡೆಗೋಡೆಗಳನ್ನು ನಿರ್ಮಾಣ ಮಾಡಿದೆ. ಇದರಿಂದಾಗಿ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗುವುದು ತಪ್ಪಿದೆ. ಕೆಲವು ಕಡೆ 10–15 ಅಡಿಗಳ ಎತ್ತರಕ್ಕೆ ಗೋಡೆಗಳು ನಿರ್ಮಾಣ ಆಗಿವೆ. ಆದರೆ ಇನ್ನೂ ಸಾಕಷ್ಟು ಕಡೆಗಳಲ್ಲಿ ತಡೆಗೋಡೆಗಳ ನಿರ್ಮಾಣ ಆಗಬೇಕಿದೆ.

ಆರ್ಕಾವತಿಗೆ ಕಲುಷಿತ ನೀರು: ಬಹುತೇಕ ಕಡೆಗಳಲ್ಲಿ ಮನೆಗಳ ಚರಂಡಿ ನೀರನ್ನು ರಾಜಕಾಲುವೆಗಳ ಜೊತೆ ಸಂಪರ್ಕ ಮಾಡಲಾಗಿದೆ. ದೊಡ್ಡ ಕಾಲುವೆಗಳು ಕೇವಲ ಮಳೆ ನೀರಿನ ಹರಿವಿನ ಉದ್ದೇಶಕ್ಕೆ ಇದ್ದರೂ ಒಳಚರಂಡಿ ನೀರು ಮಿಶ್ರಣದಿಂದಾಗಿ ಕಲುಷಿತ ವಾಗುತ್ತಿವೆ. ಆದರೆ ಎರಡೂ ನೀರನ್ನು ಸದ್ಯಕ್ಕೆ ಅರ್ಕಾವತಿಗೆ ಬಿಡಲಾಗುತ್ತಿದೆ. ಚರಂಡಿ ನೀರನ್ನು ರಾಜಕಾಲು ವೆಗಳಿಂದ ಬೇರ್ಪಡಿಸಿ ಅದನ್ನು ಶುದ್ಧೀಕರಿಸುವ ಪ್ರಯತ್ನ ನಡೆದಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ.

ಚರಂಡಿಗಳಲ್ಲಿ ಬರೀ ಹೂಳು: ನಿತ್ಯ ಒಂದಲ್ಲ ಕಂಡು ಕಡೆ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದು ಹೊಲಸು ಮಿಶ್ರಿತ ನೀರು ರಸ್ತೆ ತುಂಬೆಲ್ಲ ಹರಿಯುತ್ತಿದೆ. ಇದರಿಂದಾಗಿ ಸಾರ್ವಜನಿಕರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾ ಇದ್ದಾರೆ. ಐಜೂರು, ಮಂಜುನಾಥ ನಗರ, ವಿವೇಕಾನಂದ ನಗರ, ಟಿಪ್ಪು ನಗರ, ಹನುಮಂತನಗರ, ಟ್ರೂಪ್‌ ಲೇನ್‌ ಮೊದಲಾದ ಪ್ರದೇಶಗಳಲ್ಲಿಯೂ ಮ್ಯಾನ್‌ಹೋಲ್‌ಗಳು ಉಕ್ಕುವುದು ಸಾಮಾನ್ಯವಾಗಿದೆ. ಸಾಕಷ್ಟು ಕಡೆ ಚರಂಡಿಗಳಲ್ಲಿ ಹೂಳು ತುಂಬಿದೆ. ಸ್ವಚ್ಛತಾ ಕಾರ್ಮಿಕರು ಕೆಲವು ಕಡೆ ಚರಂಡಿ ಸ್ವಚ್ಛಗೊಳಿಸಿದ್ದಾರೆ. ಇನ್ನೂ ಕೆಲವು ಕಡೆ ಚರಂಡಿಯಿಂದ ತೆಗೆದ ಕಸವನ್ನು ಪಕ್ಕಕ್ಕೆ ಇಡಲಾಗಿದ್ದು, ಅದು ಮತ್ತೆ ಚರಂಡಿ ಪಾಲಾಗಿದೆ. ಸಾಕಷ್ಟು ಕಡೆಗಳಲ್ಲಿ ಅರ್ಧಕ್ಕೆ ಚರಂಡಿಗಳು ಕಟ್ಟಿಕೊಂಡು ನೀರು ಮುಂದೆ ಹರಿಯುತ್ತಿಲ್ಲ. ಇದರಿಂದ ಮಳೆ ಬಂದ ಸಂದರ್ಭ ರಸ್ತೆಗೆ ನೀರು ನುಗ್ಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT