ಬುಧವಾರ, ನವೆಂಬರ್ 20, 2019
24 °C
ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಸಂಭ್ರಮ: ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣರಿಂದ ಧ್ವಜಾರೋಹಣ

ರಾಮನಗರ ಜಿಲ್ಲೆಯ 800 ಕೆರೆ ಒತ್ತುವರಿ ತೆರವು ಶೀಘ್ರ: ಡಿಸಿಎಂ ಅಶ್ವತ್ಥ್‌ ನಾರಾಯಣ

Published:
Updated:
Prajavani

ರಾಮನಗರ: ಜಿಲ್ಲೆಯಲ್ಲಿನ 800ಕ್ಕೂ ಹೆಚ್ಚು ಕೆರೆಗಳು ಒತ್ತುವರಿ ಮಾಡಿಕೊಂಡವರ ವಿರುದ್ಧ ಶೀಘ್ರದಲ್ಲೇ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ್‌ ನಾರಾಯಣ ಎಚ್ಚರಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 64ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ನೀರಿನ ಮೂಲಗಳಾದ ಜಿಲ್ಲೆಯ ಕೆರೆಗಳು ಒತ್ತುವರಿ ಆಗಿದ್ದು, ಅದರ ವರದಿ ಪಡೆಯಲಾಗುತ್ತಿದೆ. ಅಂತೆಯೇ ಅಕ್ರಮ ಗಣಿಗಾರಿಕೆ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಮೂಲ ಸೌಕರ್ಯಗಳ ವಿಸ್ತರಣೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ರೇಷ್ಮೆ ಬೆಳೆಗಾರರ ಹಿತದೃಷ್ಟಿಯಿಂದ ರಾಮನಗರ ರೇಷ್ಮೆ ಮಾರುಕಟ್ಟೆಯನ್ನು ವಿಸ್ತರಿಸುವ ಹಾಗೂ ಹೈಟೆಕ್ ಮಾರುಕಟ್ಟೆಯನ್ನಾಗಿಸುವ ಪ್ರಯತ್ನ ನಡೆದಿದೆ. ಚನ್ನಪಟ್ಟಣದಲ್ಲಿರುವ ರೇಷ್ಮೆ ಕಾರ್ಖಾನೆಯ ಮತ್ತೊಂದು ಘಟಕವನ್ನು ಆರಂಭಿಸಲು ಈಗಾಗಲೇ ₨8 ಕೋಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ರೇಷ್ಮೆ ಸಿಲ್ಕ್ ಸ್ಯಾರಿಸ್ ಮಳಿಗೆಯನ್ನು ತೆರೆಯುವ ಯೋಜನೆ ಮುಂದಿದೆ ಎಂದು ಹೇಳಿದರು.

ಜಿಲ್ಲಾ ಕೇಂದ್ರದಲ್ಲಿ ನೂತನ ಜಿಲ್ಲಾ ಆಸ್ಪತ್ರೆ ಕಾಮಗಾರಿಯ ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಜಿಲ್ಲೆಯಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸುಸಜ್ಜಿತವಾಗಿ ಕಾರ್ಯ ನಿರ್ವಹಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಸ್ಮಶಾನಕ್ಕೆ ಭೂಮಿ ಇಲ್ಲದ 143 ಗ್ರಾಮಗಳಲ್ಲಿ ಸರ್ಕಾರ ಜಮೀನು ಗುರುತಿಸಿ ಅಂತಹ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಜಮೀನು ಕಾಯ್ದಿರಿಸಲು ಅನುಮೋದನೆ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗಾಗಿ ಏಳು ವಸತಿ ಶಾಲೆಗಳನ್ನು ನಿರ್ಮಿಸಲು ಜಮೀನು ಗುರುತಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ವೀರಾಪುರ ಹಾಗೂ ಬಾನಂದೂರು ಅಭಿವೃದ್ಧಿಗೆ ತಲಾ ₨25 ಕೋಟಿ ಅನುದಾನ ಬಿಡುಗಡೆ ಆಗಿದೆ. ಕೆಂಪೇಗೌಡರ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಲು ಕ್ರಮ ವಹಿಸಲಾಗಿದೆ ಎಂದರು.

ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಾಯಮ್ಮ, ಬಿ.ಪ್ರಶಾಂತ್, ಸಿ.ಕೆ.ರಾಘವೇಂದ್ರ, ಯೋಗೀಶ್ ಚೆಕ್ಕೆರೆ, ಡಿ.ಸಿ ರಾಮಚಂದ್ರ, ರಮೇಶ್‌ ಅಕ್ಕೂರು, ಆರ್‌.ಪ್ರಶಾಂತ್‌, ಆರ್‌. ಶ್ರೀಧರ್‌, ಶಿವರಾಜು ಹಾಗೂ ಆರ್‌. ಜಿತೇಂದ್ರ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕ್ರೀಡಾಪಟುಗಳು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನವೂ ನಡೆಯಿತು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾ ಕ್ರೀಡಾಂಗಣದವರೆಗೂ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಯಿತು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಪೊಲೀಸ್‌ ವರಿಷ್ಠಾಕಾರಿ ಅನೂಪ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ್, ಉಪ ವಿಭಾಗಾಕಾರಿ ದಾಕ್ಷಾಯಿಣಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಉಮೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶಂಕರಪ್ಪ, ಜಿಲ್ಲಾ ಕೆಡಿಪಿ ಸದಸ್ಯ ಎಂ. ರುದ್ರೇಶ್‌ ಇದ್ದರು. ಶಿಕ್ಷಕ ಶಿವಸ್ವಾಮಿ ನಿರೂಪಿಸಿದರು.

 

==
ಬಾಕ್ಸ್‌–1
ಕನ್ನಡದ ಕಂಪು: ಆಕರ್ಷಕ ನೃತ್ಯ
ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಎಲ್ಲೆಡೆ ಕನ್ನಡದ ಕಂಪು ಪಸರಿಸಿತ್ತು. ಸ್ತಬ್ಧ ಚಿತ್ರಗಳ ಪ್ರದರ್ಶನ, ಆಕರ್ಷಕ ನೃತ್ಯಗಳು, ಪಥ ಸಂಚಲನವು ಕನ್ನಡ ಪ್ರೇಮಿಗಳ ಗಮನ ಸೆಳೆಯಿತು.

ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಶಾಲೆ–ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸ್, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್‌ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟವು. ಪ್ಯಾಪುಲರ್ ಶಾಲೆ ಪ್ರಥಮ, ಲಿಟ್ಲ್‌ ಪ್ರಿಟಿ ಶಾಲೆ ದ್ವಿತೀಯ ಹಾಗೂ ತಿಲಕ್‌ ಶಾಲೆಯು ತೃತೀಯ ಸ್ಥಾನ ಪಡೆಯಿತು.

ಭಾರತೀಯ ಸಂಸ್ಕೃತಿ ವಿದ್ಯಾಪೀಠ, ಟ್ಯಾಗೋರ್, ನ್ಯೂ ಮಿಲೇನಿಯಂ ಇಂಗ್ಲಿಷ್‌ ಮಾಧ್ಯಮ ಶಾಲೆ, ಎಂ.ಎಚ್‌. ಶಾಲೆ ವಿದ್ಯಾರ್ಥಿಗಳು ತಮ್ಮ ನೃತ್ಯಸಿರಿಯಿಂದ ಎಲ್ಲರನ್ನೂ ರಂಜಿಸಿದರು. ಕನ್ನಡದ ನಾಡು ನುಡಿಯ ಹಿರಿಮೆಯನ್ನು ಬಿಂಬಿಸುವ ಪ್ರಯತ್ನ ಮಾಡಿದರು. ಬಿಡದಿಯ ಜ್ಞಾನ ವಿಕಾಸ ಶಾಲೆಯ ವಿದ್ಯಾರ್ಥಿಗಳು ಜಾನಪದ ಸಿರಿಯನ್ನೇ ಕಣ್ಮುಂದೆ ತಂದಿದ್ದರು. ಕಂಸಾಳೆ, ಡೊಳ್ಳುಕುಣಿತ, ಪಟಕುಣಿತ, ಕರಗ, ಕೀಲು ಕುದುರೆ, ಕೋಲಾಟ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳ ಮೂಲಕ ಗಮನ ಸೆಳೆದು ಮೊದಲ ಬಹುಮಾನ ತಮ್ಮದಾಗಿಸಿಕೊಂಡರು.

ಬಾಕ್ಸ್‌–2
ಸ್ತಬ್ಧ ಚಿತ್ರಗಳ ಮೆರವಣಿಗೆ
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೆಎಸ್‌ಆರ್‌ಟಿಸಿಯ ಸಿಬ್ಬಂದಿ ಬಸ್‌ ಅನ್ನು ಅಲಂಕರಿಸಿ ತಂದಿದ್ದರು. ಸಂಸ್ಥೆಯ ಸಾಧನೆಗಳ ಜೊತೆಗೆ ಕಿಡಿಗೇಡಿಗಳಿಂದ ಆಗುವ ನಷ್ಟ, ಅದರಿಂದಾದ ಪರಿಣಾಮಗಳನ್ನು ಬಿಂಬಿಸುವ ಪ್ರಯತ್ನ ನಡೆಯಿತು. ನಗರಸಭೆಯಿಂದ ನಿರ್ಮಿಸಲಾದ ಮಳೆನೀರು ಸಂಗ್ರಹಣೆ ಪದ್ಧತಿ ಕುರಿತ ಚಿತ್ರ ಗಮನ ಸೆಳೆಯಿತು. ಇದೇ ಸಂದರ್ಭ ನೀರಿನ ಸಂರಕ್ಷಣೆಯ ಕುರಿತ ಕಿರು ನಾಟಕವನ್ನೂ ಪ್ರದರ್ಶಿಸಲಾಯಿತು. ಕೃಷಿ ಇಲಾಖೆಯ ಸಿರಿಧಾನ್ಯ ಮಹತ್ವದ ಕುರಿತ ಸ್ತಬ್ಧಚಿತ್ರವೂ ಗಮನ ಸೆಳೆಯಿತು.

 

ಪ್ರತಿಕ್ರಿಯಿಸಿ (+)