ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ನವಮಿ: ಚನ್ನಪಟ್ಟಣ ಕೇಸರಿಮಯ

ಇಂದು ಶೋಭಾಯಾತ್ರೆ l ಜನಪದ ಕಲಾತಂಡಗಳ ಭಾಗಿ l ಭಜನೆ–ಸಂಗೀತ ಕಾರ್ಯಕ್ರಮ
Last Updated 10 ಏಪ್ರಿಲ್ 2022, 4:20 IST
ಅಕ್ಷರ ಗಾತ್ರ

ಚನ್ನಪಟ್ಟಣ: ಶ್ರೀರಾಮ ಸೇವಾ ಸಮಿತಿಯಿಂದ ಭಾನುವಾರ ನಗರದಲ್ಲಿ ಶ್ರೀರಾಮನವಮಿ ಆಚರಣೆ ಹಾಗೂ ಶೋಭಾಯಾತ್ರೆ ನಡೆಯಲಿದ್ದು, ಕಾರ್ಯಕ್ರಮದ ಅಂಗವಾಗಿ ಇಡೀ ನಗರ ಕೇಸರಿಮಯವಾಗಿದೆ.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಾಲ್ಲೂಕಿನಲ್ಲಿ ಅದ್ದೂರಿ ರಾಮನವಮಿ ಆಚರಣೆಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ರಾಮ ಭಕ್ತರು, ಬಿಜೆಪಿ ಕಾರ್ಯಕರ್ತರು ಕಳೆದ ಮೂರು ದಿನಗಳಿಂದ ನಗರವನ್ನು ಶೃಂಗಾರ ಮಾಡಿದ್ದು, ಶೋಭಾಯಾತ್ರೆ ತೆರಳುವ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಕೇಸರಿ ಬಾವುಟ, ಫ್ಲೆಕ್ಸ್, ಬಂಟಿಂಗ್ಸ್, ಕೇಸರಿ ತೋರಣಗಳನ್ನು ಕಟ್ಟಿದ್ದಾರೆ.

ರಾಮನವಮಿ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುತ್ತಿರುವ ಭರದ ಸಿದ್ಧತೆ ಎಲ್ಲರಲ್ಲಿಯೂ ಕುತೂಹಲ ಮೂಡಿಸಿದೆ. ತಾಲ್ಲೂಕಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಶ್ರೀರಾಮನವಮಿ ಆಚರಣೆಯಾಗುತ್ತಿರುವ ಹಿಂದೆ ರಾಜಕೀಯ ಉದ್ದೇಶ ಇದೆ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

ರಾಮನವಮಿ ದಿನ ನಗರದಾದ್ಯಂತ ಮೆರವಣಿಗೆ, ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಶ್ರೀರಾಮದೇವರ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಲಾಗುವುದು. ಈ ಎಲ್ಲಾ ಸ್ಥಳಗಳಲ್ಲಿ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಗುವುದು. ಇದೇ ವೇಳೆ ರಾಮ ಭಜನೆ ಹಾಗೂ ಸಂಗೀತ ಕಾರ್ಯಕ್ರಮ ನಡೆಸಲಾಗುವುದು ಎಂದು ರಾಮ ಸೇವಾ ಸಮಿತಿ ತಿಳಿಸಿದೆ.

ಬೃಹತ್ ಶೋಭಾಯಾತ್ರೆ: ಶ್ರೀರಾಮನವಮಿಯನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಬೃಹತ್ ಶೋಭಾಯಾತ್ರೆ ಆಯೋಜಿಸಲಾಗಿದೆ.

ನಗರದ ಡ್ಯೂಂಲೈಟ್ ವೃತ್ತದ ಶ್ರೀಸುಗ್ರಿವಾಂಜನೇಯ ದೇವಾಲಯದ ಬಳಿಯಿಂದ ಹೊರಡಲಿರುವ ಯಾತ್ರೆಯು ನಗರದ ಪ್ರಮುಖ ರಸ್ತೆಗಳನ್ನು ಹಾಯ್ದು ಮಂಗಳವಾರಪೇಟೆ ಬಸವನಗುಡಿ ದೇವಾಲಯದ ಬಳಿ ಕೊನೆಗೊಳ್ಳಲಿದೆ.

ಈ ವೇಳೆ ನಗರದ 8 ಕಡೆಗಳಲ್ಲಿ ಶ್ರೀರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ನಗರದ ಡ್ಯೂಂಲೈಟ್ ಸರ್ಕಲ್, ಕೋಟೆ ವರದರಾಜಸ್ವಾಮಿ ದೇವಾಲಯದ ವೃತ್ತ, ಬಸ್ ನಿಲ್ದಾಣ ವೃತ್ತ, ಪೊಲೀಸ್ ಠಾಣೆ ವೃತ್ತ, ನ್ಯಾಯಾಲಯ ವೃತ್ತ, ಮಂಗಳವಾರಪೇಟೆ ಬಸವನಗುಡಿ ದೇವಾಲಯದಲ್ಲಿ ಶ್ರೀರಾಮದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಭಕ್ತರಿಗೆ ಪಾನಕ, ಕೋಸಂಬರಿ ಹಾಗೂ ಮಜ್ಜಿಗೆ ವಿತರಣೆ ಮಾಡಲಾಗುತ್ತದೆ.

ಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದು, ಇದಕ್ಕಾಗಿ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ಪಾಲ್ಗೊಳ್ಳುವ ಎಲ್ಲಾ ಭಕ್ತರು ಕೇಸರಿ ಶಾಲು ಹಾಕಿಕೊಂಡು, ಭಾಗವ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಮೆರವಣಿಗೆ ವೇಳೆ ಕರಾವಳಿ ಭಾಗದ ಚಂಡೆ ಮದ್ದಳೆ, ಮಹಿಳಾ ಡೊಳ್ಳು ಕುಣಿತದ ತಂಡ, ರಾಮ, ಸೀತಾ, ಲಕ್ಷ್ಮಣ, ಹನುಮಂತನ ಪ್ರತಿಕೃತಿಯ ಬೃಹತ್ ಬೊಂಬೆಗಳು, ಪೂಜೆ ಮತ್ತು ವೀರಗಾಸೆ ಕುಣಿತದ ತಂಡಗಳು ಮೆರುಗು ನೀಡಲಿವೆ.

ಹಿಂದೂ ಜಾಗರಣಾ ವೇದಿಕೆಯ ಕರ್ನಾಟಕ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಕಾರಂತ್, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಬಿಜೆಪಿ ಪದಾಧಿಕಾರಿಗಳು, ಹಿಂದೂಪರ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT