ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ಕೇಂದ್ರವಾಯ್ತು ರಾಮನಗರ ಜೈಲು

ಹಸಿರು ವಲಯಕ್ಕೆ ಕೊರೊನಾ ಶಂಕಿತರ ಸ್ಥಳಾಂತರಕ್ಕೆ ಜನಪ್ರತಿನಿಧಿಗಳ ಒಕ್ಕೊರಲ ವಿರೋಧ
Last Updated 23 ಏಪ್ರಿಲ್ 2020, 9:16 IST
ಅಕ್ಷರ ಗಾತ್ರ

ರಾಮನಗರ: ಪಾದರಾಯನಪುರ ದಾಂದಲೆ ಆರೋಪಿಗಳ ಪಾಲಿಗೆ ರಾಮನಗರ ಜಿಲ್ಲಾ ಕಾರಾಗೃಹವು ಕ್ವಾರಂಟೈನ್‌ ಕೇಂದ್ರವಾಗಿ ಬದಲಾಗಿದ್ದು, ಪ್ರಕರಣದ ಎಲ್ಲ ಆರೋಪಿಗಳನ್ನೂ ಒಂದೇ ಜೈಲಿಗೆ ಕರೆತರಲಾಗಿದೆ. ಆದರೆ ಕೊರೊನಾ ಹಸಿರು ವಲಯದಲ್ಲಿ ಇರುವ ರಾಮನಗರವನ್ನು ಇದಕ್ಕೆ ಬಳಸಿಕೊಳ್ಳುತ್ತಿರುವುದಕ್ಕೆ ಈ ಭಾಗದ ಜನಪ್ರತಿನಿಧಿಗಳಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ.

‘ಕೇವಲ ಒಂದು ಪ್ರಕರಣದ ಆರೋಪಿಗಳಿಗಾಗಿ ಇಡೀ ಜೈಲಿನ ಕೈದಿಗಳನ್ನೇ ಸ್ಥಳಾಂತರ ಮಾಡಿದ್ದು ಇದೇ ಮೊದಲು. ದೊಡ್ಡ ದೊಡ್ಡ ಭೂಗತ ದೊರೆಗಳನ್ನು ಜೈಲಿನಲ್ಲಿ ಇಟ್ಟಾಗಲೂ ಈ ರೀತಿ ಸ್ಥಳಾಂತರ ಆಗಿರಲಿಲ್ಲ ಎನ್ನುತ್ತಾರೆ ಪೊಲೀಸರು. ಕೈದಿಗಳ ಸ್ಥಳಾಂತರದಿಂದ ಪೊಲೀಸ್ ಇಲಾಖೆಗೆ ಕೆಲವು ಅನುಕೂಲಗಳು ಆಗಿವೆ. ಹಾಗೆಯೇ ಕೆಲವು ಅನನುಕೂಲಗಳೂ ಎದುರಾಗುವ ಸಾಧ್ಯತೆ ಇದೆ. ಪರಪ್ಪನ ಅಗ್ರಹಾರದಲ್ಲಿ ಇವರನ್ನು ಇಟ್ಟುಕೊಳ್ಳುವುದರಿಂದ ಆಗುವ ತೊಂದರೆಯೇ ಹೆಚ್ಚು ಎಂದು ಅಲ್ಲಿನ ಜೈಲು ಅಧಿಕಾರಿಗಳು ವಿರೋಧಿಸಿದ ಕಾರಣಕ್ಕೆ ರಾಮನಗರಕ್ಕೆ ಸ್ಥಳಾಂತರ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ’ ಎನ್ನಲಾಗಿದೆ.

ಅಧಿಕಾರಿಗಳೇ ಹೊಣೆ: ಪಾದರಾಯನಪುರದ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪುಂಡರನ್ನು ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸುವುದರಿಂದಾಗುವ ಮುಂದಿನ ಅನಾಹುತಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

‘ಕೊರೊನಾ ಸೋಂಕಿನ ವಿಷಯದಲ್ಲಿ ಹಸಿರು ವಲಯವಾಗಿರುವ ರಾಮನಗರದಲ್ಲಿ ಕ್ವಾರಂಟೈನ್‌ಗೆ ಒಳಗಾಗಬೇಕಿದ್ದ ಗಲಭೆಕೋರರನ್ನು ರಾಮನಗರ ಜೈಲಿನಲ್ಲಿರಿಸುವುದು ವಿವೇಕಯುತ ನಿರ್ಧಾರವಲ್ಲ. ಚೋದ್ಯವೆಂದರೆ ರಾಮನಗರ ಜೈಲಿನ ಕೈದಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿ, ಪಾದರಾಯನಪುರದ ಪುಂಡರನ್ನು ರಾಮನಗರದ ಕಾರಗೃಹದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿಯನ್ನು ಒಂದೇ ಕೊಠಡಿಯಲ್ಲಿರಿಸುವ ಮೂಲಕ ಕೊರೊನಾ ಭೀತಿ ಎದುರಾಗಿದೆ. ಜಿಲ್ಲೆಯ ಜನತೆ ಭಯಗೊಂಡಿದ್ದಾರೆ. ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

‘ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಇಂತಹದ್ದೊಂದು ದುಡುಕು ನಿರ್ಧಾರಕ್ಕೆ ಕಾರಣರಾಗಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಗೃಹ ಕಾರ್ಯದರ್ಶಿ ಅವರೊಂದಿಗೆ ಎರಡೆರಡು ಬಾರಿ ದೂರವಾಣಿಯಲ್ಲಿ ಚರ್ಚಿಸಿದ್ದೇನೆ. ರಾಮನಗರ ಜಿಲ್ಲೆಯ ಜನರು ಮತ್ತು ಜನ ಪ್ರತಿನಿಧಿಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯಾವುದೇ ಪ್ರತಿಭಟನೆಗೆ ಇಳಿಯದಂತೆ ಅವರ ಮನವೊಲಿಸಿದ್ದೇನೆ. ಇದನ್ನು ಸರ್ಕಾರದ ಗಮನಕ್ಕೂ ತರಲಾಗಿದೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಪಾದರಾಯನಪುರ ಗಲಭೆ ಸಂಬಂಧ ಒಟ್ಟು ಈವರೆಗೆ ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಳಗಾಗುವ ಈ ಎಲ್ಲರನ್ನೂ ಬೆಂಗಳೂರಿನ ಯಾವುದಾದರೂ ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್ ಅಥವಾ ಯಾವುದಾದರೂ ಕಟ್ಟಡದಲ್ಲಿ ಸೂಕ್ತ ಬಂದೋಬಸ್ತ್‌ನೊಂದಿಗೆ ಇಡುವುದು ಸೂಕ್ತ. ರಾಮನಗರ ಕಾರಾಗೃಹದಲ್ಲಿ ಅಡುಗೆಯವರು ಮತ್ತು ಶುಚಿತ್ವದ ಸಿಬ್ಬಂದಿ ವಾಸಿಸುತ್ತಿದ್ದು ಜನರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಗಲಭೆಕೊರರಿಂದ ಅಕಸ್ಮಾತ್ ಸೋಂಕು ತಗುಲಿದರೆ ಜಿಲ್ಲೆಯ ಸ್ವಾಸ್ಥ್ಯ ಹದಗೆಡುತ್ತದೆ ಎಂಬ ಕನಿಷ್ಠ ಪ್ರಜ್ಞೆ ಸರ್ಕಾರಕ್ಕೆ ಬೇಡವೇ ಎಂದು ಕಿಡಿ ಕಾರಿದ್ದಾರೆ.

121 ಆರೋಪಿಗಳಿಗೆ ಆಶ್ರಯ:ಪಾದರಾಯನಪುರ ದಾಂದಲೆ ಪ್ರಕರ ಣದ ಒಟ್ಟು 121 ಆರೋಪಿಗಳನ್ನು ಈವರೆಗೆ ಇಲ್ಲಿನ ಜಿಲ್ಲಾ ಕಾರಾಗೃಹಕ್ಕೆ ಕರೆತರಲಾಗಿದೆ. ಮಂಗಳವಾರ ಸಂಜೆ 49 ಆರೋಪಿಗಳನ್ನು ಕರೆತರಲಾಗಿತ್ತು. ಬುಧವಾರ ಬೆಳಗ್ಗೆ ಇನ್ನುಳಿದ 72 ಆರೋಪಿಗಳನ್ನು 8 ಕೆಎಸ್‌ಆರ್‌ಪಿ ಬಸ್‌ಗಳಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಇಲ್ಲಿಗೆ ಕರೆತರಲಾಯಿತು

ಅನುಕೂಲಗಳೇನು?:ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಈ ಜೈಲು ಕೆಲವೇ ಎಕರೆಗಳ ವಿಸ್ತೀರ್ಣದಲ್ಲಿ ಇದ್ದು, ಅಗತ್ಯ ಭದ್ರತಾ ಸೌಲಭ್ಯಗಳನ್ನು ಹೊಂದಿದೆ. ಸುಮಾರು 150-200 ಜನರ ವಸತಿಗೆ ಆಗುವಷ್ಟು ಜಾಗವಿದೆ. ಸದ್ಯ ಪಾದರಾಯನಪುರ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಇಡೀ ಜೈಲು ಸಾಕಾಗುತ್ತದೆ. ಕೇವಲ ಅವರನ್ನು ಮಾತ್ರವೇ ಜೈಲಿನಲ್ಲಿ ಇಟ್ಟುಕೊಳ್ಳುವ ಕಾರಣ ಅವರಲ್ಲಿ ಸೋಂಕು ಸಾಧ್ಯತೆಗಳು ಇದ್ದಲ್ಲಿ ಇತರರಿಗೆ ಹರಡುವುದು ತಪ್ಪುತ್ತದೆ. ಆರೋಗ್ಯದ ಮೇಲೆ, ಅವರ ಇಡೀ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು ಅನುಕೂಲ ಆಗುತ್ತದೆ.

ಆರೋಪಿಗಳೆಲ್ಲರೂ ಬೆಂಗಳೂರಿನವರೇ ಆದ್ದರಿಂದ ಅವರನ್ನು ನೋಡಲು ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಇದರಿಂದ ಪರಪ್ಪನ ಅಗ್ರಹಾರದಲ್ಲಿ ಜನಸಂದಣಿ ಹೆಚ್ಚಿ ಇನ್ನಷ್ಟು ತೊಂದರೆ ಆಗಬಹುದು. ರಾಮನಗರದಲ್ಲಿ ಆರೋಪಿಗಳನ್ನು ಇಟ್ಟರೆ ಅವರ ಬಂಧು-ಬಳಗವನ್ನೂ ನಿಯಂತ್ರಿಸಬಹುದು ಎನ್ನುವ ಆಲೋಚನೆ ಪೊಲೀಸರದ್ದು. ಹೆದ್ದಾರಿಯ ಪಕ್ಕದಲ್ಲೇ ಜೈಲು ಇದ್ದು, ನಗರದ ಪರಿಮಿತಿಯಲ್ಲೇ ಇರುವ ಕಾರಣ ಯಾವುದೇ ತೊಂದರೆ ಇಲ್ಲ. ಓಡಾಟಕ್ಕೂ ಹೆಚ್ಚಿನ ಅನನುಕೂಲ ಆಗದು ಎನ್ನುವ ಲೆಕ್ಕಾಚಾರ ಪೊಲೀಸ್‌ ಇಲಾಖೆಯದ್ದು.

ಅನನುಕೂಲವೇನು?:ರಾಮನಗರ ಜಿಲ್ಲೆಯಾದ್ಯಂತ ಈವರೆಗೆ ಒಂದೂ ಕೋವಿಡ್‌-19 ಪ್ರಕರಣ ವರದಿಯಾಗಿಲ್ಲ. ಹೀಗಿರುವಾಗ ಕೊರೊನಾ ಹಾಟ್‌ಸ್ಪಾಟ್‌ ಪ್ರದೇಶದಲ್ಲಿ ಬಂಧಿಸಲಾದ ಆರೋಪಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡುವುದರಿಂದ ಇಲ್ಲಿಗೆ ಸೋಂಕು ಹರಡಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎನ್ನುವುದು ಜನರ ಆತಂಕಕ್ಕೆ ಕಾರಣವಾಗಿದೆ. ಜೈಲಿನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ರಾಮನಗರದಲ್ಲೇ ವಾಸವಿದ್ದಾರೆ. ಅವರಿಗೂ ತೊಂದರೆ. ಆರೋಪಿಗಳನ್ನು ಕಾಣಲು ಬರುವ ಜನರಿಂದ ಇಲ್ಲಿ ಮತ್ತೆ ಜನರ ಓಡಾಟ ಹೆಚ್ಚಬಹುದು ಎನ್ನುವ ಆತಂಕವಿದೆ.

ಸದ್ಯ ರಾಮನಗರದ 177 ಕೈದಿಗಳು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಆಗಿದ್ದಾರೆ. ಅವರಲ್ಲಿ ಸಾಕಷ್ಟು ಮಂದಿ ವಿಚಾರಣಾಧೀನ ಕೈದಿಗಳೂ ಇದ್ದಾರೆ. ಒಮ್ಮೆ ನ್ಯಾಯಾಲಯದ ಕಲಾಪಗಳು ಆರಂಭಗೊಂಡ ಮೇಲೆ ಅವರೆಲ್ಲರನ್ನೂ ಪ್ರತಿ ಪ್ರತಿ ಪ್ರಕರಣಕ್ಕೂ ಬೆಂಗಳೂರಿನಿಂದ ಕರೆತರುವುದು. ಟ್ರಾಫಿಕ್‌ನಲ್ಲಿ ಕಾಲಹರಣ ಆಗುವುದು ಇಲ್ಲಿನ ಪೊಲೀಸರಿಗೂ ತಲೆ ನೋವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT