ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರಿಂದ ಅಲ್ಲಲ್ಲಿ ಪ್ರತಿಭಟನೆ; ವ್ಯಾಪಾರ–ವಹಿವಾಟು ಸ್ಥಗಿತ

ಜಿಲ್ಲೆಯಾದ್ಯಂತ ಶಾಂತಿಯುತ ಬಂದ್

Published:
Updated:
Prajavani

ರಾಮನಗರ: ಜಿಲ್ಲೆಯಾದ್ಯಂತ ಗುರುವಾರ ಕರೆ ನೀಡಲಾಗಿದ್ದ ಬಂದ್‌ ಶಾಂತಿಯುತವಾಗಿತ್ತು. ಎಲ್ಲಿಯೂ ಅಹಿತಕರ ಘಟನೆಗಳು ಸಂಭವಿಸಿಲ್ಲ.

ಇ.ಡಿ. ಅಧಿಕಾರಿಗಳಿಂದ ಶಾಸಕ ಡಿ.ಕೆ. ಶಿವಕುಮಾರ್‌ ಬಂಧನ ವಿರೋಧಿಸಿ ಕಾಂಗ್ರೆಸ್‌, ಜೆಡಿಎಸ್‌ ಜಂಟಿಯಾಗಿ ಬಂದ್ ಕರೆ ನೀಡಿದ್ದವು. ಜಿಲ್ಲೆಯ ನಾಲ್ಕೂ ತಾಲ್ಲೂಕಿನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಶಾಲೆ–ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಗ್ರಾಮಾಂತರ ಪ್ರದೇಶಗಳಿಗೆ ಸಂಜೆಯವರೆಗೂ ಬಸ್‌ ಸಂಚಾರ ರದ್ದಾಗಿತ್ತು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ವಿರಳವಾಗಿತ್ತು. ಖಾಸಗಿ ಬಸ್‌ ಹಾಗೂ ಇತರೆ ವಾಹನಗಳ ಸಂಚಾರ ಎಂದಿನಂತೆ ಇತ್ತು. ಜಿಲ್ಲೆಯಲ್ಲಿನ ಬಾರ್‌ಗಳು ಗುರುವಾರವೂ ಬಂದ್‌ ಆಗಿದ್ದವು. ಬಹುತೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ರದ್ದುಗೊಂಡಿತ್ತು. ಕೆಲವು ಪೆಟ್ರೋಲ್‌ ಬಂಕ್‌ಗಳು ವಹಿವಾಟು ಸ್ಥಗಿತಗೊಳಿಸಿದ್ದವು. ಹೋಟೆಲ್‌ಗಳೂ ಬಂದ್‌ ಆಗಿದ್ದವು. ಸರ್ಕಾರಿ ಕಚೇರಿಗಳು ತೆರೆದಿದ್ದರೂ ಜನಸಂದಣಿ ಇರಲಿಲ್ಲ. ರೈಲು ಸಂಚಾರಕ್ಕೆ ಮಾತ್ರ ಯಾವುದೇ ಅಡ್ಡಿ ಆಗಲಿಲ್ಲ.

ಕನಕಪುರದಲ್ಲಿ ಕೊಂಚ ಉದ್ವಿಗ್ನ ಸ್ಥಿತಿ ಇದ್ದು, ಸಾಲು ಸಾಲು ಪ್ರತಿಭಟನೆಗಳು ನಡೆದವು. ಜೊತೆಗೆ ಅಣಕು ಶವಯಾತ್ರೆ, ಕೇಶಮುಂಡನ, ಬೈಕ್‌ ರ್‍ಯಾಲಿ, ‘ತಿಥಿ’ ಕಾರ್ಯಗಳೂ ನಡೆದವು. ದೊಡ್ಡಾಲಹಳ್ಳಿಯಲ್ಲಿ ಬೈಕ್‌ವೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದರು. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್‌ ರ್‍ಯಾಲಿ ನಡೆಸಿ, ಪೊಲೀಸ್‌ ಠಾಣೆ ಮುಂಭಾಗ ಹೆದ್ದಾರಿಯಲ್ಲಿ ಪ್ರತಿಭಟಿಸಿದರು. ಮಾಗಡಿಯಲ್ಲೂ ಪ್ರತಿಭಟನೆ ನಡೆದಿದ್ದು, ವಹಿವಾಟು ಸ್ಥಗಿತಗೊಂಡಿತ್ತು.

ರಾಮನಗರದಲ್ಲಿ ಬೆಳಗ್ಗೆಯಿಂದಲೇ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದಾಗಿ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬೆಳಗ್ಗೆ ಬೆಂಗಳೂರು ಕಡೆಗೆ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಮಾತ್ರ ಸಂಚರಿಸಿದ್ದು, ಜನರು ಪರದಾಡಿದರು. ಖಾಸಗಿ ಬಸ್‌ಗಳಿಗೆ ಬೇಡಿಕೆ ಕುದುರಿತ್ತು. ಆಟೊಗಳು, ಖಾಸಗಿ ವಾಹನಗಳ ಓಡಾಟ ಮಾತ್ರ ಎಂದಿನಂತೆ ಇತ್ತು.

ಪ್ರತಿಭಟನೆ ಕಾವು: ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಐಜೂರು ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಹೆದ್ದಾರಿ ಪಕ್ಕದಲ್ಲಿ ಇರುವ ಜಿಲ್ಲಾ ಕಾಂಗ್ರೆಸ್‌ಸಮಿತಿ ಕಚೇರಿ ಮುಂಭಾಗ ಸಮಾವೇಶಗೊಂಡ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಮೂಲಕ ಐಜೂರು ವೃತ್ತಕ್ಕೆ ಬಂದರು. ಕೈಯಲ್ಲಿ ಡಿ.ಕೆ. ಶಿವಕುಮಾರ್ ಭಾವಚಿತ್ರಗಳನ್ನು ಹಿಡಿದು ಅವರ ಪರವಾಗಿ ಕೂಗಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ಬಳಿಕ ಪ್ರತಿಭಟನಾಕಾರರು ಹಳೇ ಬಸ್‌ ನಿಲ್ದಾಣ ವೃತ್ತ, ಡಾ.ರಾಜ್ ಕುಮಾರ್ ಕಾಂಪ್ಲೆಕ್ಸ್ , ಚೌಕ ವೃತ್ತ, ಕಾಮಣ್ಣನಗುಡಿ ವೃತ್ತ, ಜೂನಿಯರ್ ಕಾಲೇಜು ಮಾರ್ಗವಾಗಿ ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ತೆರಳಿ ಮನವಿ ಸಲ್ಲಿಸಿದರು.  ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಮುಖಂಡ ಎಚ್‌.ಸಿ. ಬಾಲಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಿಯಾವುಲ್ಲಾ, ಕೆಪಿಸಿಸಿ ಸದಸ್ಯ ಕೆ.ರಮೇಶ್, ತಾ.ಪಂ. ಅಧ್ಯಕ್ಷ ಗಾಣಕಲ್‌ ನಟರಾಜು, ಮುಖಂಡರಾದ ಸಿಎನ್‌ಆರ್ ವೆಂಕಟೇಶ್, ಎಸ್.ಟಿ.ಕಾಂತರಾಜ್ ಪಟೇಲ್, ಚೇತನ್‌ಕುಮಾರ್‌, ಲೋಹಿತ್ ಬಾಬು, ವಿ.ಎಚ್ .ರಾಜು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಮತ್ತಿತರರು ಪಾಲ್ಗೊಂಡರು.

ಬೈಕ್‌ ರ್‍ಯಾಲಿ–ಬಲವಂತದ ಬಂದ್‌: ಕಾಂಗ್ರೆಸ್‌ ಹಾಗೂ ಜೆಡಿಎಸ್ ಕಾರ್ಯಕರ್ತರು ಬೆಳಗ್ಗೆಯಿಂದಲೇ ನಗರದಲ್ಲಿ ಬೈಕ್‌ ರ್‍ಯಾಲಿ ನಡೆಸುತ್ತಾ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು. ಬಂದ್ ಬೆಂಬಲಿಸುವಂತೆ ಆಟೊ ಪ್ರಚಾರವೂ ನಡೆದಿತ್ತು.  ರಾಮನಗರದ ಕನಕಪುರ ವೃತ್ತದಲ್ಲಿನ ಕೆಲವು ಅಂಗಡಿಗಳನ್ನು ಪ್ರತಿಭಟನಾಕಾರರು ಬಲವಂತವಾಗಿ ಮುಚ್ಚಿಸಿದರು. ಇದನ್ನು ಮಾಧ್ಯಮಗಳು ಸೆರೆ ಹಿಡಿಯುತ್ತಲೇ ತಮ್ಮ ವರಸೆ ಬದಲಿಸಿ ಮನವಿ ಮಾಡಿಕೊಂಡರು.

ಕೆಎಸ್‌ಆರ್‌ಟಿಸಿಗೆ ₨1.5 ಕೋಟಿ ನಷ್ಟ

ಜಿಲ್ಲೆಯಾದ್ಯಂತ ಎರಡು ದಿನ ಬಂದ್ ನಡೆಸಿದ್ದರಿಂದಾಗಿ ಸಾರಿಗೆ ಸಂಸ್ಥೆಗೆ ಸುಮಾರು ₨1.5 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಬುಧವಾರ ರಾಮನಗರ, ಕನಕಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಆನೇಕಲ್‌, ಮಾಗಡಿ, ಚನ್ನಪಟ್ಟಣದಲ್ಲಿ ಕೆಲವು ವಾಹನಗಳು ಸಂಚರಿಸಿದ್ದವು. ಆದರೆ ಗುರುವಾರ ಜಿಲ್ಲೆಯ ಬಹುತೇಕ ಡಿಪೋಗಳಿಂದ ಬೆಳಗ್ಗೆಯಿಂದಲೇ ಬಸ್‌ ಸಂಚಾರ ಸ್ಥಗಿತಗೊಂಡಿತು. ಜಿಲ್ಲೆಯ 513 ಮಾರ್ಗಗಳಲ್ಲಿ ಸಂಚರಿಸಬೇಕಿದ್ದ 538 ಬಸ್‌ಗಳು ಡಿಪೊದಲ್ಲಿಯೇ ಉಳಿದವು. ದೂರದೂರುಗಳಿಗೆ ಹೋಗುವ ಕೆಲವೇ ವಾಹನಗಳನ್ನು ಮಾತ್ರ ಕಳುಹಿಸಿಕೊಡಲಾಯಿತು. ಸಂಜೆ ನಂತರ ಬಸ್ ಸಂಚಾರ ಪುನರಾರಂಭಗೊಂಡಿತು.

ರೇಷ್ಮೆಗೂಡು ಹರಾಜಿಗೆ ಅಡ್ಡಿ

ಬಂದ್‌ನಿಂದಾಗಿ ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣದಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ತಡವಾಯಿತು. ಬೆಳಿಗ್ಗೆ ನಿಗದಿತ ಸಮಯಕ್ಕೆ ಇ–ಹರಾಜು ನಡೆಯಲಿಲ್ಲ. ಮಧ್ಯಾಹ್ನದ ವೇಳೆಗೆ ಹರಾಜು ಕಾರ್ಯ ನಡೆಯಿತು. ಬಂದ್ ಬಗ್ಗೆ ತಿಳಿದಿದ್ದ ರೈತರು ಗೂಡು ಹೊತ್ತು ಕೊಳ್ಳೇಗಾಲ, ಶಿಡ್ಲಘಟ್ಟ ಮೊದಲಾದ ಕಡೆಗಳಿಗೆ ಮುಖ ಮಾಡಿದ್ದರು. ಹೀಗಾಗಿ ಗುರುವಾರ ಮಾರುಕಟ್ಟೆಗಳಿಗೂ ಗೂಡಿನ ಆವಕವೂ ಕಡಿಮೆ ಇತ್ತು.

ಹೆದ್ದಾರಿಗಳಲ್ಲಿ ವಾಹನ ಸವಾರರ ಪರದಾಟ

ಬೆಂಗಳೂರು–ಮೈಸೂರು, ಬೆಂಗಳೂರು–ಕನಕಪುರ ಹಾಗೂ ಬೆಂಗಳೂರು–ಹಾಸನ ಹೆದ್ದಾರಿಗಳಲ್ಲಿ ಆಗಾಗ್ಗೆ ಪ್ರತಿಭಟನೆಗಳು ನಡೆದ ಕಾರಣ ಪ್ರಯಾಣಿಕರು ಪರದಾಡಿದರು. ಕೆಲವು ಗಂಟೆಗಳ ಕಾಲ ರಸ್ತೆಗಳು ಬಂದ್ ಆಗಿದ್ದವು.

ಬಂದ್‌ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮಾರ್ಗವನ್ನು ಬದಲಿಸಲಾಗಿತ್ತು. ಬೆಂಗಳೂರು, ಬಿಡದಿ, ಮಾಗಡಿ, ಹುಲಿಯೂರು ದುರ್ಗ, ಮದ್ದೂರು, ಮಂಡ್ಯ ಮಾರ್ಗವಾಗಿ ಬಸ್‌ಗಳು ಮೈಸೂರು ಕಡೆಗೆ ಸಂಚರಿಸಿದವು. ಇನ್ನೂ ಕೆಲವು ಕುಣಿಗಲ್‌, ನಾಗಮಂಗಲ ಮಾರ್ಗವಾಗಿ ಸಂಚಾರ ಕೈಗೊಂಡವು.

ಖಾಕಿ ಕಣ್ಗಾವಲು: ಲಾಠಿ ಹಿಡಿದ ಎಸ್ಪಿ

ಕೇಂದ್ರ ವಲಯ ಐಜಿಪಿ ಶರತ್‌ ಚಂದ್ರ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಗುರುವಾರದ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ನಾಲ್ವರು ಐಪಿಎಸ್‌ ಅಧಿಕಾರಿಗಳು, 10 ಮಂದಿ ಡಿವೈಎಸ್ಪಿ, 30 ಇನ್‌ಸ್ಪೆಕ್ಟರ್‌, 35 ಸಬ್‌ ಇನ್‌ಸ್ಪೆಕ್ಟರ್‌, 15 ಕೆಎಸ್‌ಆರ್‌ಪಿ ಹಾಗೂ 21 ಡಿಎಆರ್‌ ತುಕಡಿಗಳನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಯಿತು. ಇದಲ್ಲದೆ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿಯೂ ಇದ್ದರು. ಕನಕಪುರದಲ್ಲಿ ಅನುಪಮ್‌ ಅಗರ್‌ವಾಲ್‌, ಚಿಕ್ಕಬಳ್ಳಾಪುರ ಎಸ್ಪಿ ಸಂತೋಷ್‌ ಬಾಬು, ಚನ್ನಪಟ್ಟಣದಲ್ಲಿ ಅಭಿನವ್‌ ಖರೆ ಉಸ್ತುವಾರಿ ವಹಿಸಿದ್ದರು.
‘ಪೊಲೀಸ್ ಸಿಬ್ಬಂದಿ ನಿರಂತರ ಗಸ್ತು ತಿರುಗುತ್ತಿದ್ದಾರೆ. ಎಲ್ಲಿಯೂ ಗಲಾಟೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಐಜಿಪಿ ಶರತ್ ಚಂದ್ರ ತಿಳಿಸಿದರು. ರಾಮನಗರದಲ್ಲಿ ಎಸ್ಪಿ ಅನೂಪ್‌ ಶೆಟ್ಟಿ ಭದ್ರತೆ ಉಸ್ತುವಾರಿ ಹೊತ್ತಿದ್ದು, ಸ್ವತಃ ತಾವೇ ಲಾಠಿ ಹಿಡಿದು ನಿಂತಿದ್ದರು.

ಪೊಲೀಸರ ವಿರುದ್ಧ ಕ್ರಮ?

ಬುಧವಾರ ಸಾತನೂರು ಹಾಗೂ ತುಗಣಿಯಲ್ಲಿ ಪೊಲೀಸರ ಕಣ್ಣೆದುರೆ ಬೈಕುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಸಿಬ್ಬಂದಿಯನ್ನು ರಾಮನಗರ ಎಸ್ಪಿ ಅನೂಪ್‌ ಶೆಟ್ಟಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಬ್ಬರ ಅಮಾನತಿಗೂ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೈಗಾರಿಕಾ ಪ್ರದೇಶಗಳಲ್ಲೂ ಬೆಂಬಲ

ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲೂ ಬಂದ್‌ಗೆ ಬೆಂಬಲ ವ್ಯಕ್ತವಾಯಿತು.
ಸಂಘಟಕರ ಮನವಿ ಮೇರೆಗೆ ಬಹುತೇಕ ಕಾರ್ಖಾನೆಗಳು ತಮ್ಮ ಸಿಬ್ಬಂದಿಗೆ ರಜೆ ಘೋಷಣೆ ಮಾಡಿದ್ದವು, ಹೀಗಾಗಿ ಉತ್ಪಾದನೆ, ವಹಿವಾಟು ನಡೆಯಲಿಲ್ಲ. ಇದೇ ಮೊದಲ ಬಾರಿಗೆ ಬೃಹತ್‌ ಕೈಗಾರಿಕೆಗಳೂ ಬಂದ್‌ ಬೆಂಬಲಿಸಿದ್ದು ವಿಶೇಷ.

Post Comments (+)