ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲಾ ಬಂದ್‌ಗೆ ಕರೆ

ಡಿಕೆಶಿ ಪರ ನಿಂತ ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರು
Last Updated 4 ಸೆಪ್ಟೆಂಬರ್ 2019, 13:50 IST
ಅಕ್ಷರ ಗಾತ್ರ

ರಾಮನಗರ: ಡಿ.ಕೆ. ಶಿವಕುಮಾರ್‌ ಬಂಧನ ವಿರೋಧಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಗುರುವಾರ ಜಿಲ್ಲಾ ಬಂದ್‌ಗೆ ಕರೆ ನೀಡಿವೆ.

‘ಶಿವಕುಮಾರ್‌ ವಿರುದ್ಧ ಕೇಂದ್ರ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ಜಿಲ್ಲೆಯವರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಅವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ನಾವೆಲ್ಲ ಮಾಡಬೇಕಿದೆ. ಬುಧವಾರ ಸಾರ್ವಜನಿಕರು ತಾವಾಗಿಯೇ ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ಸೂಚಿಸಿದ್ದಾರೆ. ಗುರುವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ನಾಲ್ಕೂ ತಾಲ್ಲೂಕಿನಲ್ಲಿ ಪ್ರತಿಭಟನೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ರಾಮನಗರದಲ್ಲಿ ಪ್ರತಿಭಟನಾ ಮೆರವಣಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ವರ್ತಕರು, ಸಾರ್ವಜನಿಕರು ಬೆಂಬಲ ನೀಡಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಇ.ಡಿ. ಅಧಿಕಾರಿಗಳು ಶಿವಕುಮಾರ್ ಅವರನ್ನು ನಾಲ್ಕು ದಿನ ಸತತ ವಿಚಾರಣೆ ನೆಪದಲ್ಲಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಸತತ ವಿಚಾರಣೆಯಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಿದ್ದೂ ಬಂಧಿಸಿ, ವೈದ್ಯರಿಗೆ ಸುಳ್ಳು ಪ್ರಮಾಣಪತ್ರ ನೀಡುವಂತೆ ಒತ್ತಡ ಹೇರಲಾಗಿದೆ. ಶಿವಕುಮಾರ್‌ಗೆ ಹೆಚ್ಚುಕಡಿಮೆ ಆದರೆ ಯಾರು ಹೊಣೆ‘ ಎಂದು ಪ್ರಶ್ನಿಸಿದರು.

‘ಅಮಿತ್‌ ಶಾ ಏನು ಆಮಿಷ ಒಡ್ಡಿದರು ಎಂಬುದು ಡಿಕೆಶಿ ಜೊತೆಗಿದ್ದ ನಮಗೆ ಗೊತ್ತು. ಈ ಸಂದರ್ಭ ಗೋವಿಂದ ಕಾರಜೋಳ ಅವರು ಶಾ ಜೊತೆಗಿದ್ದರಾ’ ಎಂದು ಮರು ಪ್ರಶ್ನಿಸಿದರು. ‘ಅಹ್ಮದ್ ಪಟೇಲ್‌ರನ್ನು ರಕ್ಷಿಸಲು ಹೋಗಿ ಶಿವಕುಮಾರ್ ಬಲಿಪಶು ಆಗಿದ್ದಾರೆ. ಅದನ್ನು ವಿರೋಧಿಸಿ ನಾವೆಲ್ಲ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ’ ಎಂದರು.

ಮಾಗಡಿಯ ಕಾಂಗ್ರೆಸ್ ಮುಖಂಡ ಎಚ್‌.ಸಿ, ಬಾಲಕೃಷ್ಣ ಮಾತನಾಡಿ ‘ದ್ವೇಷದ ರಾಜಕಾರಣ ಈ ಮೊದಲು ತಮಿಳುನಾಡಿನಲ್ಲಿ ಮಾತ್ರ ಇತ್ತು. ಬಿಜೆಪಿಯಿಂದ ಅದು ಕರ್ನಾಟಕಕ್ಕೂ ವ್ಯಾಪಿಸಿದೆ. ಆದರೆ ರಾಜಕಾರಣ ನಿಂತ ನೀರಲ್ಲ. ಶಿವಕುಮಾರ್ ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಎದುರಿಸಿ ಹೊರ ಬರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಣ್ಣ ಪುಟ್ಟ ವ್ಯಾಪಾರ ಮಾಡುವವರೂ ಒಂದಲ್ಲ ಒಂದು ರೀತಿಯಲ್ಲಿ ಆದಾಯ ತೆರಿಗೆ ವಂಚನೆ ಮಾಡಿದ್ದಾರೆ. ಬಿಜೆಪಿಯಲ್ಲೂ ಇಂತಹ ಶೇ 75ರಷ್ಟು ಜನರು ಇದ್ದಾರೆ. ಅವರ ಮನೆಗಳಲ್ಲಿ ನೋಟು ಎಣಿಕೆ ಯಂತ್ರಗಳೇ ಸಿಕ್ಕಿವೆ. ಅವರನ್ನು ಏಕೆ ಬಂಧಿಸಿಲ್ಲ’ ಎಂದು ಬಾಲಕೃಷ್ಣ ಪ್ರಶ್ನಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಗಂಗಾಧರ್‌ ಮಾತನಾಡಿ ‘ನಾನು ಎರಡು ದಿನ ದೆಹಲಿಯಲ್ಲಿದ್ದೆ. ಸೋಮವಾರ ವಿಚಾರಣೆ ಮುಗಿಯಲಿದ್ದು, ನೀವು ಹೋಗಬಹುದು ಎಂದು ಇ.ಡಿ. ಅಧಿಕಾರಿಗಳು ಡಿಕೆಶಿಗೆ ಹೇಳಿದ್ದರು. ಆದರೆ ಅಧಿಕಾರಿಗಳ ಮೇಲೆ ಒತ್ತಡ ತಂದು ಏಕಾಏಕಿ ಅವರನ್ನು ಬಂಧಿಸಲಾಗಿದೆ. ಗುಜರಾತ್‌ ಶಾಸಕರಿಗೆ ಆಶ್ರಯ ನೀಡಿದ್ದು, ಸಮ್ಮಿಶ್ರ ಸರ್ಕಾರ ರಚನೆಯ ಸೇಡಿಗಾಗಿ ಬಿಜೆಪಿ ಈ ಕೃತ್ಯ ಎಸಗಿದೆ’ ಎಂದು ದೂರಿದರು.

ಮುಖಂಡ ಕೆ. ರಾಜು ಮಾತನಾಡಿ ‘ಡಿಕೆಶಿ ಶಕ್ತಿ ಕುಗ್ಗಿಸಲು ಬಿಜೆಪಿ ಈ ತಂತ್ರ ಮಾಡಿದ್ದಾರೆ. ಆದರೆ ಇದರಿಂದ ಅವರ ಶಕ್ತಿ ಹೆಚ್ಚಲಿದೆ’ ಎಂದರು.

ಕಾಂಗ್ರೆಸ್‌ ಮುಖಂಡರಾದ ಸಯ್ಯದ್‌ ಜಿಯಾವುಲ್ಲಾ, ಕೆ. ಶೇಷಾದ್ರಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಮಾತನಾಡಿ ಬಂದ್ ಬೆಂಬಲಿಸುವಂತೆ ಕೋರಿದರು.

**
ಇ.ಡಿ. ಹೆಸರಲ್ಲಿ ಬಿಜೆಪಿ ನಾಯಕರೇ ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ. 40 ವರ್ಷ ರಾಜಕಾರಣ ಮಾಡಿರುವ ಡಿಕೆಶಿ ಈ ಬಂಧನದಿಂದ ಹೊರಬರುತ್ತಾರೆ
- ಎಚ್‌.ಸಿ. ಬಾಲಕೃಷ್ಣ,ಕಾಂಗ್ರೆಸ್‌ ಮುಖಂಡ

**
ಗುರುವಾರ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಬಂದ್ ಆಚರಿಸಲಾಗುವುದು. ಯಾರೂ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಬಾರದು
- ಸಿ.ಎಂ. ಲಿಂಗಪ್ಪ,ವಿಧಾನ ಪರಿಷತ್‌ ಸದಸ್ಯ

**

ಗುರುವಾರದ ಬಂದ್ ಬೆಂಬಲಿಸುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಶಿವಕುಮಾರ್‌ ಮೇಲಿನ ದ್ವೇಷ ರಾಜಕಾರಣ ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು
- ರಾಜಶೇಖರ್,ಅಧ್ಯಕ್ಷ, ಜೆಡಿಎಸ್ ರಾಮನಗರ ತಾಲ್ಲೂಕು ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT