ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಬ್ಲಾಕ್ ಸ್ಪಾಟ್ ಗುರುತಿಸಿ ಅಪಘಾತ ತಪ್ಪಿಸಿ: ಜಿಲ್ಲಾಧಿಕಾರಿ ಯಶವಂತ್

ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ಸೂಚನೆ
Published : 12 ಸೆಪ್ಟೆಂಬರ್ 2024, 4:59 IST
Last Updated : 12 ಸೆಪ್ಟೆಂಬರ್ 2024, 4:59 IST
ಫಾಲೋ ಮಾಡಿ
Comments

ರಾಮನಗರ: ‘ಜಿಲ್ಲೆ ವ್ಯಾಪ್ತಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಬೇಕು. ಅದಕ್ಕಾಗಿ, ಅಪಘಾತದ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಹೆದ್ದಾರಿ ಹಾದು ಹೋಗಿರುವ ಬಿಡದಿಯ ಶೇಷಗಿರಿಹಳ್ಳಿ, ಹೆಜ್ಜಾಲ ಗೇಟ್, ಕಲ್ಲುಗೋಪನಹಳ್ಳಿ ಹಾಗೂ ಹನುಮಂತನಗರದಲ್ಲಿ ಅಪಘಾತಗಳಾಗುತ್ತಿವೆ. ಸವಾರರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಸಹ ಅಪಘಾತಕ್ಕೆ ಕಾರಣವಾಗುತ್ತಿದೆ’ ಎಂದರು.

‘ಅಪಘಾತಕ್ಕೆ ಎಡೆ ಮಾಡಿಕೊಡುವಂತೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವವರಿಗೆ ಮೊದಲ ಹಂತದಲ್ಲಿ ದಂಡ ವಿಧಿಸಬೇಕು. ಅದಕ್ಕೂ ಬಗ್ಗದಿದ್ದರೆ ಸವಾರರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಅಪಘಾತದ ಬ್ಲಾಕ್‌ಸ್ಪಾಟ್‌ಗಳಲ್ಲಿ ರಸ್ತೆಯುಬ್ಬು (ಹಂಪ್ಸ್) ಹಾಕಿ ಅದಕ್ಕೆ ಬಣ್ಣ ಬಳಿಯಬೇಕು. ಸವಾರರಿಗೆ ಮೊದಲೇ ಗೊತ್ತಾಗುವಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯ ರಸ್ತೆಗಳಲ್ಲಿ ಗುಂಡಿ ಕಾರಣಕ್ಕೆ ಅಪಘಾತವಾಗದಂತೆ ಎಚ್ಚರಿಕೆ ವಹಿಸಬೇಕು. ಮುಖ್ಯವಾಗಿ ಬಸ್‌ಗಳು ಸಂಚರಿಸುವ ರಸ್ತೆಯಲ್ಲಿ ಗುಂಡಿಗಳಿದ್ದರೆ ಮೊದಲು ಮುಚ್ಚಬೇಕು. ಯಾವುದೇ ಕಾರಣಕ್ಕೂ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಈ ಕುರಿತು ಪೊಲೀಸ್, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಗಾ ಇಡಬೇಕು’ ಎಂದು ಹೇಳಿದರು.

‘ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿ ಹಾಕಿರುವ ತಂತಿ ಬೇಲಿಯನ್ನು ಕೆಲವೆಡೆ ಕತ್ತರಿಸಲಾಗಿದೆ. ಅದನ್ನು ಮತ್ತೆ ಅಳವಡಿಸಬೇಕು. ಅಕ್ರಮವಾಗಿ ಯಾರೂ ಬೇಲಿ ಕತ್ತರಿಸಿ ಹೆದ್ದಾರಿ ಪ್ರವೇಶಿಸದಂತೆ ಜಾಗ್ರತೆ ವಹಿಸಬೇಕು. ರಸ್ತೆಯ ವಿವಿಧೆಡೆ ಆಳೆತ್ತರಕ್ಕೆ ಬೆಳೆದಿರುವ ಕಳೆಯನ್ನು ತೆರವು ಮಾಡಬೇಕು’ ಎಂದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಎಚ್.ಎಂ. ಮಹಾದೇವಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿತೇಂದ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ನಿಶ್ಚಿತ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಿರಂಜನ್, ಪೊಲೀಸ್ ಅಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT