ರಾಮನಗರ: ‘ತಾನು ಈಡಿಗ ಸಮುದಾಯದ ಸ್ವಾಮೀಜಿ ಎಂದು ಹೇಳಿಕೊಂಡು ತಿರುಗುತ್ತಿರುವ ಪ್ರಣವಾನಂದ ಸ್ವಾಮೀಜಿಗೂ, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಸ್ವಾಮೀಜಿ ಅವರು ವಿನಾ ಕಾರಣ ಸಮುದಾಯದಲ್ಲಿ ಒಡಕು ಮೂಡಿಸಿ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದ್ದಾರೆ’ ಎಂದು ರಾಮನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ. ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
‘ಸ್ವಾಮೀಜಿ ಅವರು ನಮ್ಮ ಕೇಂದ್ರ ಸಂಘ ಹಾಗೂ ಜಿಲ್ಲಾ ಸಂಘಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಗೂ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ, ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ’ ಎಂದು ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘1944ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಈಡಿಗರ ಸಂಘಕ್ಕೆ 78 ವರ್ಷಗಳಾಗಿವೆ. ಸಮುದಾಯದಲ್ಲಿ ಈಡಿಗ, ಬಿಲ್ಲವ, ನಾಮದಾರಿ ಪಂಗಡಗಳು ಸೇರಿದಂತೆ 26 ಪಂಗಡಗಳಿವೆ. 2008ರವರೆಗೆ ಸಮುದಾಯದ ಧಾರ್ಮಿಕ ಪೀಠ ಅಸ್ಥಿತ್ವಕ್ಕೆ ಬಂದಿರಲಿಲ್ಲ. ಸ್ವಾಮೀಜಿ ಸಹ ಇರಲಿಲ್ಲ. ಸಮುದಾಯದ ಮೊದಲ ಗುರುವಾಗಿ ರೇಣುಕಾನಂದ ಸ್ವಾಮೀಜಿ ಅವರಿಗೆ 2008ರ ಮಾರ್ಚ್ 19ರಂದು ಪಟ್ಟಾಭಿಷೇಕ ಮಾಡಲಾಗಿತ್ತು. ರೇಣುಕಾ ಪೀಠ ಹಾಗೂ ನಾರಾಯಣ ಗುರು ಮಠದ ಪೀಠಾಧಿಪತಿಯಾಗಿ ಸ್ವೀಕರಿಸಲಾಯಿತು’ ಎಂದು ಹೇಳಿದರು.
‘ಸ್ವಾಮೀಜಿ ಆಧ್ಯಾತ್ಮಿಕ ಸಾಧನೆ ಮುಂದುವರೆಸುವುದಕ್ಕಾಗಿ 2014ರಲ್ಲಿ ಪೀಠ ತ್ಯಜಿಸಿದರು. ಏಳು ವರ್ಷ ತೆರವಾಗಿದ್ದ ಪೀಠಾಧಿಪತಿ ಸ್ಥಾನಕ್ಕೆ ಎಲ್ಲಾ ಜಿಲ್ಲೆಗಳ ಈಡಿಗ ಸಮುದಾಯದ ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ನಾಯಕರಾದ ಬಿ.ಕೆ. ಹರಿಪ್ರಸಾದ್ ಸಲಹೆ ಪರಿಗಣಿಸಿ ಕಾರ್ಕಳದ ಬಲ್ಯೊಟ್ಟಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಾ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದ, ಕೇರಳದ ಶಿವಗಿರಿಯಲ್ಲಿ ನಾರಾಯಣ ಗುರು ದೀಕ್ಷೆ ಪಡೆದಿದ್ದ ವಿಖ್ಯಾತಾನಂದ ಸ್ವಾಮೀಜಿ ಅವರನ್ನು ಗುರುವಾಗಿ ಸ್ವೀಕರಿಸಲು ತೀರ್ಮಾನಿಸಲಾಯಿತು’ ಎಂದರು.
‘ಅದರಂತೆ, ಸ್ವಾಮೀಜಿ ಅವರನ್ನು ಸಮುದಾಯದ 25 ಪಂಗಡಗಳು ಒಪ್ಪಿಕೊಂಡ ಬಳಿಕ, ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿರುವ ಸಂಘದ ಆರ್ಯ ಈಡಿಗ ಮಹಾಸಂಸ್ಥಾನದಲ್ಲಿ 2022ರಂದು ಪಟ್ಟಾಭಿಷೇಕ ನೆರವೇರಿಸಿ, ಪೀಠಾಧಿಪತಿಗಳೆಂದು ಸ್ವೀಕರಿಸಲಾಗಿದೆ. ಹಾಗಾಗಿ, ಪ್ರಣವಾನಂದ ಸ್ವಾಮೀಜಿಗೂ ಸಂಘಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ’ ಎಂದು ಸ್ಪಷ್ಪಪಡಿಸಿದರು.
ಸಂಘದ ಉಪಾಧ್ಯಕ್ಷ ರಮೇಶ್ ಆರ್, ಖಜಾಂಚಿ ಸುಧೀರ್ ಗೋಪಾಲ್ ಹಾಗೂ ನಿರ್ದೇಶಕಿ ಪೂಜಾ ಇದ್ದರು.
ಸಮುದಾಯ ವಿಭಜಿಸುತ್ತಿರುವ ಸ್ವಾಮೀಜಿ: ‘ಸ್ವಯಂಘೋಷಿತ ಪ್ರಣವಾನಂದ ಸ್ವಾಮೀಜಿ ಅವರು, ಸಮುದಾಯವನ್ನು ವಿಭಜಿಸುತ್ತಿದ್ದಾರೆ. ಇದರಿಂದ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಸಮುದಾಯಕ್ಕೆ ಸರ್ಕಾರ ಮತ್ತು ರಾಜಕೀಯ ಮುಖಂಡರ ಸಹಕಾರ ಅತ್ಯಗತ್ಯ. ಆದರೆ, ಸಮುದಾಯದಲ್ಲಿ ರಾಜಕೀಯ ಬೆರೆಸಬಾರದು. ಹಾಗಾಗಿ, ಸೆ. 15ರಂದು ಜಿಲ್ಲಾ ಸಂಘಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ಸಂಘಕ್ಕೂ ಸ್ವಾಮೀಜಿಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಮಟ್ಟದಲ್ಲಿ ಸ್ಪಷ್ಟನೆ ನೀಡಲಾಗುತ್ತಿದೆ’ ಎಂದು ಎಂ. ನಾಗರಾಜ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.