ಗುರುವಾರ , ಮೇ 19, 2022
21 °C
ಕನಕಪುರ ತಾಲ್ಲೂಕಿನ ಕಡಸಿಕೊಪ್ಪ ಬಳಿ ನರೇಗಾ ಯೋಜನೆಯಡಿ ಕಾಮಗಾರಿ

ರಾಮನಗರ: ಗುಂಡುತೋಪಿಗೆ ಉದ್ಯಾನದ ರೂಪ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸುತ್ತಲಿನ ನಿವಾಸಿಗಳಿಂದ ಒತ್ತುವರಿಯಾಗಿದ್ದ ಗುಂಡುತೋಪಿನಲ್ಲಿ ಇದೀಗ ಸುಂದರ ಉದ್ಯಾನವೊಂದು ನಿರ್ಮಾಣ ಆಗಿದ್ದು, ಜನರನ್ನು ತನ್ನತ್ತ ಸೆಳೆಯತೊಡಗಿದೆ.

ಕನಕಪುರ ತಾಲ್ಲೂಕಿನ ಕೊಳಗೊಂಡನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಸಿಕೊಪ್ಪ ಗ್ರಾಮಕ್ಕೆ ಹೊಂದಿಕೊಂಡಂತೆ 5 ಸಾವಿರ ಚದರ ಮೀಟರ್‌ನಷ್ಟು ಪ್ರದೇಶ ಇದೀಗ ಹಸಿರು ಹೊದ್ದು ನಿಂತಿದೆ. ಆಕರ್ಷಕವಾದ ಹಸಿರು ಹುಲ್ಲಿನ ನೆಲಹಾಸು, ಕಲ್ಲು ಬೆಂಚುಗಳು, ಜನರ ಮುಂಜಾನೆ–ಮುಸ್ಸಂಜೆಯ ನಡಿಗೆಗೆ ಅನುಕೂಲ ಆಗುವಂತಹ ವಾಕಿಂಗ್‌ ಪಥ... ಹೀಗೆ ನಾನಾ ಸೌಲಭ್ಯಗಳು ಇಲ್ಲಿ ನಿರ್ಮಾಣ ಆಗಿದೆ.

ಸ್ಥಳೀಯ ಗ್ರಾಮ ಪಂಚಾಯಿತಿಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಗುಂಡುತೋಪಿಗೆ ಉದ್ಯಾನದ ಸ್ಪರ್ಶ ನೀಡಿದ್ದು, ಯಾವ ನಗರಕ್ಕೂ ಕಡಿಮೆ ಇಲ್ಲದಂತಹ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಒತ್ತುವರಿ ತೆರವು: ಇಲ್ಲೊಂದು ಗುಂಡುತೋಪು ಇದೆ ಎಂಬುದೇ ಎಷ್ಟೋ ಜನರಿಗೆ ತಿಳಿದಿರಲಿಲ್ಲ. ಮೂರ್ನಾಲ್ಕು ಮರ ಬಿಟ್ಟರೆ ಹೆಚ್ಚಿನದ್ದೇನೂ ಅಲ್ಲಿ ಇರಲಿಲ್ಲ. ಹೀಗಾಗಿ ಮೊದಲಿಗೆ ಅಲ್ಲಿನ ಒತ್ತುವರಿಯನ್ನು ತೆರವು ಮಾಡಿ ಜಾಗವನ್ನು ಗ್ರಾ.ಪಂ. ವಶಕ್ಕೆ ಪಡೆದವು. ನಂತರ ನರೇಗಾ ಯೋಜನೆ ಅಡಿ ಉದ್ಯಾನ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿಕೊಂಡೆವು. ಸುಮಾರು ಎಂಟು ತಿಂಗಳ ಪರಿಶ್ರಮದ ಬಳಿಕ ಇದಕ್ಕೆ ಉದ್ಯಾನದ ರೂಪ ದೊರೆತಿದೆ ಎನ್ನುತ್ತಾರೆ ಕೊಳಗೊಂಡನಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೊಡ್ಡಲಿಂಗೇಗೌಡ.

‘ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ನರೇಗಾ ಯೋಜನೆ ಅಡಿ ಪ್ರಕೃತಿ ಸಂರಕ್ಷಣೆಗೆ ಆದ್ಯತೆ ನೀಡುತ್ತ ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಈ ಉದ್ಯಾನ ನಿರ್ಮಾಣಕ್ಕೆ ಯೋಜನೆ ಸಿದ್ಧವಾಯಿತು. ಮೊದಲಿಗೆ ಗುಂಡುತೋಪು ಸಮತಟ್ಟು ಮಾಡಿ, ಅಲ್ಲಿ ಹುಲ್ಲಿನ ನೆಲಹಾಸು ಬೆಳೆಸಿದೆವು. ಸುತ್ತಲೂ ಕಾಂಪೌಂಡ್ ಸಹ ನಿರ್ಮಾಣವಾಯಿತು. ಜನರು ವಿಶ್ರಾಂತಿ ಪಡೆಯಲು ಕಲ್ಲಿನ ಬೆಂಚುಗಳು, ಅಲಂಕಾರಿಕ ಸಸ್ಯಗಳು, ಜನರ ಓಡಾಟಕ್ಕಾಗಿ ನಡಿಗೆ ಪಥ... ಹೀಗೆ ಎಲ್ಲವನ್ನೂ ಹಂತ ಹಂತವಾಗಿ ನಿರ್ಮಾಣ ಮಾಡಲಾಗಿದೆ. ಪ್ರವೇಶ ದ್ವಾರದ ಗೋಪುರ ನಿರ್ಮಾಣ ಕಾಮಗಾರಿ ನಡೆದಿದೆ’ ಎಂದು ಅವರು ವಿವರಿಸುತ್ತಾರೆ.

ಉದ್ಯಾನಕ್ಕಾಗಿ ನರೇಗಾ ಅಡಿ

₹ 30 ಲಕ್ಷ ಅನುದಾನ ವ್ಯಯಿಸಲಾಗುತ್ತಿದೆ. ಮೂರು ಸೋಲಾರ್ ದೀಪಗಳನ್ನು ಅಳವಡಿಸಲಾಗಿದ್ದು, ರಾತ್ರಿ ಹೊತ್ತು ಈ ದೀಪಗಳ ಬೆಳಕಿನಲ್ಲಿ ಉದ್ಯಾನ ಇನ್ನಷ್ಟು ಸುಂದರವಾಗಿ ಕಾಣುತ್ತಿದೆ. ಆಕರ್ಷಕವಾದ ಬುದ್ಧನ ಮೂರ್ತಿಯೂ ಇದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಈ ಉದ್ಯಾನವಿದ್ದು, ಪಕ್ಕದಲ್ಲೇ ದೇಗುಲವೂ ಇದೆ. ಅಲ್ಲಿಗೆ ಬಂದವರು ಉದ್ಯಾನದ ಒಳಗೂ ಹೆಜ್ಜೆ ಇಡತೊಡಗಿದ್ದಾರೆ.

ಮುಂದೆ ಇದೇ ಉದ್ಯಾನದಲ್ಲಿ ಜಿಮ್‌ ಸಾಮಗ್ರಿಗಳನ್ನು ಅಳವಡಿಸಲು ಸಹ ಯೋಜಿಸಲಾಗಿದೆ. ಹಕ್ಕಿಗಳು ನೀರು ಕುಡಿಯಲು ವ್ಯವಸ್ಥೆ ಸಹ ಮಾಡಲಾಗಿದೆ.

ಪಾಳುಬಿದ್ದ ಗುಂಡುತೋಪು ಈ ಪರಿ ಬದಲಾಗಿದ್ದನ್ನು ಕಂಡು ಸ್ಥಳೀಯರು ಸಂತಸ ವ್ಯಕ್ತಪಡಿಸುತ್ತಾರೆ. ಸದ್ಯ ಮುಂದಿನ ಒಂದು ವರ್ಗ ನರೇಗಾ ಯೋಜನೆಯ ಅಡಿಯಲ್ಲೇ ಇದನ್ನು ನಿರ್ವಹಣೆ ಮಾಡಲು ಯೋಜಿಸಲಾಗಿದೆ. ನಂತರ ಗ್ರಾ.ಪಂ. ಸಿಬ್ಬಂದಿ ಸಹಕಾರದೊಂದಿಗೆ ನಿರ್ವಹಣೆ ಮಾಡಲು ಚಿಂತನೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು