ಶುಕ್ರವಾರ, ಮೇ 14, 2021
31 °C
ನಗರಸಭೆ ಚುನಾವಣಾ ಪ್ರಚಾರಕ್ಕೆ ಹಿನ್ನಡೆ

ಎಚ್‌ಡಿಕೆಗೆ ಕೊರೊನಾ: ಕಾರ್ಯಕರ್ತರ ಆತಂಕ, ಒಗ್ಗಟ್ಟು ಪ್ರದರ್ಶನದ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್‌ಗೆ ಕೋವಿಡ್ ಸೋಂಕು ತಗುಲಿರುವುದು ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ. ಈ ಇಬ್ಬರ ಆರೋಗ್ಯ ಚೇತರಿಕೆಗೆ ಪ್ರಾರ್ಥನೆ ನಡೆದಿದೆ.

ಇದೇ 27ರಂದು ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆಗೆ ಚುನಾವಣೆ ನಡೆಯಲಿದೆ. ಈ ಎರಡೂ ಕಡೆ ಪ್ರಚಾರದ ಸಾರಥ್ಯವನ್ನು ತಾವೇ ವಹಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಕಳೆದ ಉಪ ಚುನಾವಣೆ ಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಕೆಲವರು ಜೆಡಿಎಸ್ ನಾಯಕರ ವಿರುದ್ಧ ಮುನಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈಚೆಗಷ್ಟೇ ಅಲ್ಪಸಂಖ್ಯಾತ ಸಮುದಾಯದ ಜನರೊಂದಿಗೆ ಎಚ್‌ಡಿಕೆ ಬಹಿರಂಗ ಸಭೆ ನಡೆಸಿದ್ದರು. ಮುಂದಿನ ಹತ್ತು ದಿನ ಇಲ್ಲೇ ಉಳಿದು ಪ್ರತಿ ವಾರ್ಡಿನಲ್ಲೂ ಮತಯಾಚನೆ ಮಾಡುವ ಭರವಸೆ ನೀಡಿದ್ದರು. ಹೀಗಿರುವಾಗ ಚುನಾವಣೆ ಹೊಸ್ತಿಲಲ್ಲೇ ಕುಮಾರಸ್ವಾಮಿ ಅವರಿಗೆ ಕೋವಿಡ್‌ ದೃಢಪಟ್ಟಿರುವುದು ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿರುವ ನಿಖಿಲ್‌ ಈಚೆಗೆ ರಾಮನಗರದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಅವರು ಸಹ ನಗರಸಭೆ ಚುನಾವಣೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಭರವಸೆ ನೀಡಿದ್ದರು. ಇದೀಗ ಅವ ರಿಗೂ ಕೋವಿಡ್ ಸೋಂಕು ತಗುಲಿದೆ.

ಈ ಇಬ್ಬರೂ ನಾಯಕರು ಇನ್ನೂ ಕನಿಷ್ಠ 10 ದಿನ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ಅಷ್ಟರಲ್ಲಿ ಚುನಾವಣೆ ಮುಗಿಯಲಿದೆ. ರಾಮನಗರ ಶಾಸಕಿ ಅನಿತಾ ಸದ್ಯ ಆರೋಗ್ಯದಿಂದ ಇದ್ದಾರೆ. ಆದರೆ ಅವರಿಗೂ ಹೋಮ್‌ ಕ್ವಾರಂಟೈನ್‌ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮೂವರು ನಾಯಕರ ನೇರ ಭಾಗಿತ್ವ ಇಲ್ಲದೆಯೇ ಕಾರ್ಯಕರ್ತರು ಚುನಾವಣೆ ಎದುರಿಸಬೇಕಿದೆ.

ನಾಯಕತ್ವದ ಕೊರತೆ: ರಾಮನಗರದಲ್ಲಿ ಎಚ್‌ಡಿಕೆ ಕುಟುಂಬ ಹೊರತುಪಡಿಸಿ ಎರಡನೇ ಹಂತದ ನಾಯಕತ್ವದ ಕೊರತೆ ಇದೆ. ಇದೇ ಕಾರಣಕ್ಕೆ ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಪಕ್ಷ ಮುಗ್ಗರಿಸಿದ್ದು, ಸ್ಥಳೀಯ ಮುಖಂಡರ ವಿರುದ್ಧ ಸಾಕಷ್ಟು ಅಸಮಾಧಾನ ವ್ಯಕ್ತವಾಗಿತ್ತು. ನಂತರದಲ್ಲಿ ಕುಮಾರಸ್ವಾಮಿ ಮಧ್ಯ ಪ್ರವೇಶದಿಂದ ಸಮಸ್ಯೆ ಬಗೆಹರಿದಿತ್ತು.

‘ರಾಮನಗರದಲ್ಲಿ ಕೆಲವು ಮುಖಂಡರು ಕೇವಲ ಕುಮಾರಸ್ವಾಮಿ ಬಂದಾಗ ಮಾತ್ರ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಾರೆ. ನಂತರದಲ್ಲಿ ಪ್ರಚಾರ ಮತ್ತಿತರ ಕಾರ್ಯಕ್ರಮಗಳಿಗೆ ಬರುವುದಿಲ್ಲ’ ಎಂಬ ಆರೋಪಗಳಿವೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಬಣಗಳಾಗಿ ಹೋಗಿದ್ದು, ಅಲ್ಲಿಯೂ ಎಚ್‌ಡಿಕೆ ಅನುಪಸ್ಥಿತಿಯಲ್ಲಿ ಯಾರು ನೇತೃತ್ವವಹಿಸಬೇಕು ಎಂಬ ಗೊಂದಲ ಇದೆ. ಈ ಎಲ್ಲವನ್ನೂ ಬಗೆಹರಿಸಿಕೊಂಡು ಜೆಡಿಎಸ್ ಇರುವ ಒಂದು ವಾರದ ಅವಧಿಯಲ್ಲೇ ಚುನಾವಣೆ ಪ್ರಚಾರ ನಡೆಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು