ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಬತ್ತು ಕರಗಗಳ ಮಹೋತ್ಸವ ಸಂಭ್ರಮ

23ರಂದು ಉತ್ಸವ; ಮರುದಿನ ಮುಂಜಾನೆ ಅಗ್ನಿಕೊಂಡಕ್ಕೆ ಸಿದ್ಧತೆ
Last Updated 20 ಜುಲೈ 2019, 19:31 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿ ನಡೆಯುವ ಐತಿಹಾಸಿಕ ಕರಗಗಳ ಮಹೋತ್ಸವದಲ್ಲಿ ಈ ಬಾರಿ ವಿಶೇಷತೆ ಇರಲಿದೆ. ಐತಿಹಾಸಿಕ ನೆಲೆಯಲ್ಲಿ ಸಪ್ತ ಮಾತೃಕೆಯರ ಕರಗಗಳು ಪ್ರತಿ ವರ್ಷ ನಡೆಯುತ್ತಿದ್ದವು. ಈ ಬಾರಿ ಒಂಬತ್ತು ಕರಗಗಳು ಇದೇ 23ರಂದು ನಡೆಯಲಿವೆ. ಅಗ್ನಿಕೊಂಡ ಮಹೋತ್ಸವ ಇದೇ 24 ರಂದು ಬೆಳಿಗ್ಗೆ ಆಯಾ ದೇವಾಲಯಗಳ ಆವರಣದಲ್ಲಿ ನಡೆಯಲಿವೆ.

ಕಳೆದ ವರ್ಷ ಎಂಟು ಕರಗಗಳು ನಡೆದಿದ್ದವು. ಕಳೆದ ಬಾರಿ ಇಲ್ಲಿನ ಅರ್ಕೇಶ್ವರ ಕಾಲೊನಿಯಲ್ಲಿ ಚೌಡೇಶ್ವರಿ ಅಮ್ಮನವರ ಕರಗ ನಡೆದಿರಲಿಲ್ಲ. ಈ ಬಾರಿ ನಡೆಯುತ್ತಿದೆ. ಒಂಬತ್ತು ಕರಗಗಳಲ್ಲಿ ನಾಲ್ಕು ಕರಗಗಳು ಅಗ್ನಿಕೊಂಡವನ್ನು ಪ್ರವೇಶಿಸಲಿವೆ. ಎಲ್ಲಾ ದೇವಾಲಯಗಳಲ್ಲೂ ಭರದ ಸಿದ್ಧತೆ ನಡೆದಿದ್ದು, ತಳಿರು ತೋರಣಗಳಿಂದ ಕಂಗೊಳಿಸಲಾರಂಭಿಸಿವೆ.

ಚಾಮುಂಡೇಶ್ವರಿ ಕರಗ: ‘ಇಲ್ಲಿನ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೇಲು ಕೋಟೆಯ ಪ್ರತಾಪ್ ಸಿಂಗ್ ಎಂಬುವರ ಸ್ಥಾಪಿಸಿದರು ಎನ್ನುವ ಇತಿಹಾಸವಿದೆ. ಪ್ರತಾಪ್‍ ಸಿಂಗ್‌ ಮೈಸೂರು ಮಹಾರಾಜರ ಕಾಲದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಮಕ್ಕಳಿರಲಿಲ್ಲ. ಒಮ್ಮೆ ಇವರ ಕನಸಿನಲ್ಲಿ ಚಾಮುಂಡೇಶ್ವರಿಯು ಬಂದು ನಗರದ ಸಮೀಪದಲ್ಲಿರುವ ಗುಹೆಯೊಂದರಲ್ಲಿ ನನ್ನನ್ನು ಕಳ್ಳಕಾಕರು ಬಂಧಿಸಿ ಪೂಜಿಸುತ್ತಿದ್ದಾರೆ. ಇದನ್ನು ತಂದು ದೇವರ ಗುಡಿ ಕಟ್ಟಿಸಿ ಪ್ರತಿಷ್ಠಾಪಿಸಿದರೆ ನಿನ್ನ ಇಷ್ಟಾರ್ಥ ಪೂರೈಸುತ್ತದೆ ಎಂದು ಹೇಳಿದರಂತೆ.’

‘ಇದರಂತೆ ಪ್ರತಾಪ್‌ ಸಿಂಗ್‌ ಬುಡಬುಡಕೆ ದಾಸಯ್ಯನ ವೇಷದಲ್ಲಿ ಕಾಡಿಗೆ ಹೋಗಿ ಗುಹೆಯಲ್ಲಿದ್ದ ಕಳ್ಳರನ್ನು ಹಿಡಿದು ಅಲ್ಲಿದ್ದ ಚಾಮುಂಡಿ ದೇವಿಯ ವಿಗ್ರಹವನ್ನು ತಂದು ನಗರದಲ್ಲಿ ಗುಡಿ ಕಟ್ಟಿಸಿ ಪ್ರತಿಷ್ಠಾಪನೆ ಮಾಡಿದರು. ನಂತರ ಇವರಿಗೆ ಗುಂಡು ಮಕ್ಕಳು ಜನಿಸಿದವು. ಕಳ್ಳರನ್ನು ಹಿಡಿದ ಕಾರಣಕ್ಕೆ ಪ್ರತಾಪ್‌ ಸಿಂಗ್‌ ಅವರಿಗೆ ಮೈಸೂರು ಮಹಾರಾಜರು ಬಹುಮಾನವನ್ನು ನೀಡಿ ಗೌರವಿಸಿದರು’ ಎಂದು ಹಿರಿಯರು ಹೇಳುತ್ತಾರೆ. ಅಂದಿನಿಂದ ಇವರ ಕುಟುಂಬ ಚಾಮುಂಡೇಶ್ವರಿ ಅಮ್ಮನವರನ್ನು ಪೂಜಿಸುತ್ತಾ ಬಂದಿದ್ದಾರೆ.

ಪ್ರತಾಪ್‌ ಸಿಂಗ್ ಅವರ ನಂತರ ಇವರ ಮಗ ಗಿರಿಧರ್ ಸಿಂಗ್‌, ಇವರ ನಂತರ ಪದ್ಮನಾಭ ಸಿಂಗ್, ಇವರ ನಂತರ ಪಿ. ದೇವಿ ಪ್ರಸಾದ್ ಸಿಂಗ್‌ (ಬಾಬು) 19ನೇ ಬಾರಿಗೆ ಕರಗಧಾರಣೆ ಮಾಡಿಕೊಂಡು ಬರುತ್ತಿದ್ದಾರೆ.

‘ರಾಮನಗರ ಜಿಲ್ಲೆಯಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಪುರಾತನವಾದುದಾಗಿದೆ. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ನಮ್ಮ ಕುಟುಂಬ ಐದನೆ ತಲೆಮಾರಿನಿಂದ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದೆ’ ಎಂದು ಪಿ. ದೇವಿಪ್ರಸಾದ್ ಸಿಂಗ್ ಮಾಹಿತಿ ನೀಡಿದರು.

ಐಜೂರು ಆದಿಶಕ್ತಿ ಕರಗ: ಇಲ್ಲಿನ ಐಜೂರಿನ ಮಾಗಡಿ ರಸ್ತೆಯಲ್ಲಿರುವ ಆದಿಶಕ್ತಿ ಅಮ್ಮನವರ ಕರಗ ಅದ್ದೂರಿಯಿಂದ ನಡೆಯಲಿದೆ. ಪುರಾತನ ದೇವಾಲಯವಾಗಿದ್ದು, ಸುಮಾರು 75 ವರ್ಷಗಳಿಂದ ಇಲ್ಲಿ ಕರಗ ನಡೆಯುತ್ತಿದೆ. ವಿಜಿ ಅವರು 11 ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದು, ಅಗ್ನಿಕೊಂಡ ಪ್ರವೇಶಿಸಲಿದ್ದಾರೆ.

ಬಿಸಿಲು ಮಾರಮ್ಮ ಕರಗ: ಇಲ್ಲಿನ ಬಾಲಗೇರಿಯಲ್ಲಿ ಬಿಸಿಲು ಮಾರಮ್ಮ ಅಮ್ಮನವರ ಕರಗ 18ನೇ ವರ್ಷದ ಮಹೋತ್ಸವ ನಡೆಯಲಿದೆ. ಇದು ಪುರಾತನ ದೇವಾಲಯವಾಗಿದ್ದು, ಪಿ. ಮಹೇಂದ್ರ ಅವರು 13 ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದು, ಅಗ್ನಿಕೊಂಡ ಪ್ರವೇಶಿಸಲಿದ್ದಾರೆ.

ಮಗ್ಗದ ಕೇರಿ ಮಾರಮ್ಮ ಕರಗ: ಇಲ್ಲಿನ ಬಾಲಗೇರಿಯಲ್ಲಿ ಮಗ್ಗದ ಕೇರಿ ಮಾರಮ್ಮನವರ 21 ನೇ ವರ್ಷದ ಕರಗ ಮಹೋತ್ಸವ ನಡೆಯಲಿದೆ. ಪಿ. ಚೇತನ್‌ಕುಮಾರ್ ಅವರು 21ನೇ ಬಾರಿಗೆ ಕರಗಧಾರಣೆ ಮಾಡಲಿದ್ದು, ಅಗ್ನಿಕೊಂಡ ಪ್ರವೇಶಿಸಲಿದ್ದಾರೆ.

ಭಂಡಾರಮ್ಮ ದೇವಿ ಕರಗ: ನಗರದ ಬಾಲಗೇರಿಯಲ್ಲಿ ಭಂಡಾರಮ್ಮ ದೇವಿಯವರ ಕರಗ ಮಹೋತ್ಸವ ನಡೆಯಲಿದೆ. ಸಾಗರ್ ಅವರು ಮೊದಲನೆ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.

ಮುತ್ತುಮಾರಮ್ಮ ಕರಗ: ನಗರದ ತೋಪ್ ಖಾನ್‌ ಮೊಹಲ್ಲಾದಲ್ಲಿರುವ ಮುತ್ತುಮಾರಮ್ಮ ಅಮ್ಮನವರ ಕರಗ ಮಹೋತ್ಸವ ನಡೆಯಲಿದೆ. ಇದು ಪುರಾತನ ದೇವಾಲಯವಾಗಿದೆ. ಎನ್. ಪ್ರಶಾಂತ್ ಅವರು ಮೊದಲನೆ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.

ಶೆಟ್ಟಿಹಳ್ಳಿ ಆದಿಶಕ್ತಿ ಕರಗ: ನಗರದ ಶೆಟ್ಟಿಹಳ್ಳಿ ಬೀದಿಯ ಆದಿಶಕ್ತಿ ಕರಗ ಹಾಗೂ ಪ್ಲೇಗ್ ಮಾರಮ್ಮನವರ ಗಿಂಡಿ ಉತ್ಸವ ನಡೆಯಲಿದೆ. ಅನಿಲ್‌ಕುಮಾರ್‌ ಅವರು 10ನೇ ಬಾರಿಗೆ ಕರಗಧಾರಣೆ ಮಾಡುತ್ತಿದ್ದಾರೆ.

ಕೊಂಕಾಣಿದೊಡ್ಡಿ ಆದಿಶಕ್ತಿ ಕರಗ: ನಗರದ ಕೊಂಕಾಣಿದೊಡ್ಡಿಯಲ್ಲಿರುವ ಆದಿಶಕ್ತಿ ಅಮ್ಮನವರ ಕರಗ ಮಹೋತ್ಸವ ನಡೆಯಲಿದೆ. ‘ರಾಮನಗರದಲ್ಲಿ ಮೊದಲು ಇಲ್ಲಿ ಆದಿಶಕ್ತಿ ಪ್ರತಿಷ್ಠಾಪನೆಯಾಗಿದ್ದು, ನಂತರ ನಗರದ ಇತರೆ ಭಾಗಗಳಲ್ಲಿ ಆದಿಶಕ್ತಿ ದೇವಸ್ಥಾನಗಳನ್ನು ಪ್ರತಿಷ್ಠಾಪಿಸಲಾಗಿದೆ’ ಎಂದು ಸ್ಥಳೀಯ ನಿವಾಸಿ ಭಾಗ್ಯಮ್ಮ ತಿಳಿಸಿದರು. ಎಚ್. ಮುನೀಂದ್ರ ಅವರು ಮೂರನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.

ಚೌಡೇಶ್ವರಿ ಅಮ್ಮನವರ ಕರಗ: ಇಲ್ಲಿನ ಅರ್ಕೇಶ್ವರ ಕಾಲೋನಿಯಲ್ಲಿರುವ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ನಡೆಯಲಿದೆ. ವಿ. ಸುರೇಶ್ ಅವರು ಮೂರನೇ ಬಾರಿಗೆ ಕರಗಧಾರಣೆ ಮಾಡಲಿದ್ದಾರೆ.

ಏಳುಮಂದಮ್ಮ ದೇವಸ್ಥಾನ: ಚಾಮುಂಡೇಶ್ವರಿ ದೇವಸ್ಥಾನವನ್ನು ಮೊದಲು ‘ಏಳುಮಂದಮ್ಮನ ದೇವಸ್ಥಾನ’ವೆಂದು ಕರೆಯಲಾಗುತ್ತಿತ್ತು. ಇಲ್ಲಿ ಸಪ್ತ ಮಾತೃಕೆಯರಾದ ಚಾಮುಂಡಿ, ಚಂಡಿ, ವಾರಾಯಿಣಿ, ಇಂದ್ರಾಯಿಣಿ, ಕೌಮಾರಿ, ವೈಷ್ಣವಿ, ನಾರಾಯಣಿ ಅವರುಗಳು ನೆಲಸಿದ್ದಾರೆ. ಆದರೆ ಈಚಿನ ವರ್ಷಗಳಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಎಂದು ಕರೆಯಲಾಗುತ್ತಿದೆ ಎಂದು ಚಾಮುಂಡೇಶ್ವರಿ ಬಡಾವಣೆಯ ದಾಕ್ಷಾಯಿಣಿ ತಿಳಿಸಿದರು.

ಇಂದು ರಾಜ್ಯವೇ ಗಮನ ಸೆಳೆಯುವಂತಹ ದಸರಾ ಮಾದರಿಯ ಜನೋತ್ಸವದ ಕರಗವಾಗಲು ಪ್ರಮುಖ ಆಕರ್ಷಣೆ ಎಂದರೆ ಮನರಂಜನಾ ಕಾರ್ಯಕ್ರಮಗಳು ಹಾಗೂ ಮನರಂಜನಾ ಆಟಗಳು. ಇದರಿಂದ ಇಡೀ ರಾತ್ರಿ ಜನ ಸೇರಲು ಕಾರಣವಾಯಿತು ಎಂದರು.

ಬಾಲಗೇರಿಯಲ್ಲಿ ಕೊಲ್ಲಾಪುರದಮ್ಮ ಕರಗವು ನಡೆಯುತ್ತಿತ್ತು. ಆದರೆ ಕೆಲವು ವರ್ಷಗಳಿಂದ ನಡೆಯುತ್ತಿಲ್ಲ. ಕಳೆದ ವಾರ ಬನ್ನಿಮಹಾಂಕಾಳಿ ಕರಗ, ಇದೇ 23 ರಂದು ಒಂಬತ್ತು ಕರಗಗಳು, ಇದೇ 30 ರಂದು ಉದ್ಗೇರಮ್ಮ ಕರಗ ನಡಯಲಿದೆ. ಶಕ್ತಿ ದೇವತೆಗಳ ಹೆಸರಿನಲ್ಲಿ ಕರಗಗಳನ್ನು ಆಚರಿಸಲಾಗುತ್ತಿದೆ ಎಂದು ತೋಪ್ ಖಾನ್ ಮೊಹಲ್ಲಾದ ಸುಬ್ರಹ್ಮಣ್ಯ ತಿಳಿಸಿದರು.

ಮನರಂಜನಾ ಕಾರ್ಯಕ್ರಮಗಳು

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಶ್ರೀರಾಮ ಚಿತ್ರಮಂದಿರದ ಬಳಿ ಇರುವ ಅರಳಿಮರ ವೃತ್ತದಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಜತೆಗೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಾನಾ ಬಗೆಯ ಮನರಂಜನಾ ಆಟಗಳು ನಡೆಯಲಿದ್ದು, ಇವು ಒಂದು ದಿನಕ್ಕೆ ಸೀಮಿತವಾಗದೇ ಒಂದು ವಾರ ಇರುತ್ತವೆ.


ಕರಗಗಳು; ಕರಗಧಾರಕರು; ಅಗ್ನಿಕೊಂಡ

ಚಾಮುಂಡೇಶ್ವರಿ; ಪಿ. ದೇವಿಪ್ರಸಾದ್‌ಸಿಂಗ್‌(ಬಾಬು); ಇದೆ
ಐಜೂರು ಆದಿಶಕ್ತಿ; ವಿಜಿ; ಇದೆ
ಬಿಸಿಲು ಮಾರಮ್ಮ; ಪಿ. ಮಹೇಂದ್ರ; ಇದೆ
ಮಗ್ಗದ ಕೇರಿ ಮಾರಮ್ಮ; ಪಿ. ಚೇತನ್‌ಕುಮಾರ್ ; ಇದೆ
ಭಂಡಾರಮ್ಮ; ಸಾಗರ್; ಇಲ್ಲ
ಮುತ್ತುಮಾರಮ್ಮ; ಎನ್. ಪ್ರಶಾಂತ್; ಇಲ್ಲ
ಶೆಟ್ಟಿಹಳ್ಳಿ ಆದಿಶಕ್ತಿ; ಅನಿಲ್‌ಕುಮಾರ್; ಇಲ್ಲ
ಕೊಂಕಾಣಿದೊಡ್ಡಿ ಆದಿಶಕ್ತಿ; ಎಚ್. ಮುನೀಂದ್ರ; ಇಲ್ಲ
ಚೌಡೇಶ್ವರಿ ಕರಗ; ವಿ. ಸುರೇಶ್; ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT