ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ನೋಟಿಸ್

ಸಚಿವ ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಕೆಡಿಪಿ ತ್ರೈಮಾಸಿಕ ಸಭೆ
Last Updated 29 ಸೆಪ್ಟೆಂಬರ್ 2022, 2:34 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಿಸಿ ಮುಟ್ಟಿಸಿದ್ದು, ಮಾಗಡಿ ತಹಶೀಲ್ದಾರ್ ಸೇರಿದಂತೆ ಏಳು ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ತ್ರೈಮಾಸಿಕ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಗಡಿ ತಹಶೀಲ್ದಾರ್‌, ಕನಕಪುರ ನಗರಸಭೆ ಆಯುಕ್ತ, ಮೀನುಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ವಲಯ ವಿಭಾಗದ ಡಿಸಿಎಫ್‌, ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸೇರಿದಂತೆ ಹಿರಿಯ ಅಧಿಕಾರಿಗಳು ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಹಲವು ಎಚ್ಚರಿಕೆಗಳ ನಡುವೆಯೂ ಅಧಿಕಾರಿಗಳು ತಮ್ಮ ಕಾರ್ಯವೈಖರಿಯನ್ನು ತಿದ್ದಿಕೊಂಡಿಲ್ಲ. ಇನ್ನು ಮುಂದಾದರೂ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದು ನಿರ್ದೇಶಕ ನೀಡಿದರು.

ರಸ್ತೆ ದುರಸ್ತಿಗೆ ಕ್ರಮ: ಜಿಲ್ಲೆಯಲ್ಲಿ ಹಾಳಾದ ರಸ್ತೆಗಳ ದುರಸ್ತಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಜಿಲ್ಲೆಯಲ್ಲಿ ಈ ಬಾರಿ ಸುರಿದ ವಿಪರೀತ ಮಳೆಯಿಂದಾಗಿ ಜಿಲ್ಲೆಯಲ್ಲಿ ರಸ್ತೆಗಳು ಹಾಳಾಗಿದ್ದು ಲೋಕೋಪಯೋಗಿ ಇಲಾಖೆಯು ಈ ರಸ್ತೆಗಳನ್ನು ದುರಸ್ಥಿಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕ್ರಮ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬಾಕಿ ಉಳಿದಿರುವ ಕಡತವನ್ನು ಆದಷ್ಟು ಬೇಗ ವಿಲೇವಾರಿಗೊಳಿಸಿ. ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ಕುರಿತು ಕ್ರಮ ವಹಿಸಿ. ಜಿಲ್ಲೆಯಲ್ಲಿ ನಿವೇಶನಗಳನ್ನು ವ್ಯವಸ್ಥಿತವಾಗಿ ಹೋಬಳಿವಾರು ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಇಲಾಖೆಗಳಿಂದ ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ತಲುಪಿಸಬೇಕು. ಯಾವುದೇ ಲೋಪದೋಷಗಳು ಕಂಡು ಬಂದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಿಕೊಳ್ಳಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಈಗಾಗಲೇ 5 ಅರ್ಜಿಗಳು ಸ್ವೀಕೃತವಾಗಿದ್ದು ಇನ್ನು ಹೆಚ್ಚಿನ ಅರ್ಜಿಗಳನ್ನು ಸ್ವೀಕರಿಸಿ ಪಲಾನುಭವಿಗಳಿಗೆ ಈ ಸೌಲಭ್ಯ ಸರಿಯಾದ ರೀತಿಯಲ್ಲಿ ತಲುಪಲು ಕ್ರಮ ವಹಿಸಿ ಎಂದರು.

ಮಾಗಡಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್.ಪಿ ಸಂತೋಷ್ ಬಾಬು, ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗೌತಮ್ ಗೌಡ, ರಾಮನಗರ ನಗರಾಭಿವೃದ್ಧಿ ಅಧ್ಯಕ್ಷ ಶಿವಮಾಧು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT