ರಾಮನಗರ: ನಗರದ ಹೊರವಲಯದಲ್ಲಿ ಚಿರತೆಯೊಂದರ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ವಡೇರಹಳ್ಳಿಯ ವಸುಧಾ ಲೇಔಟ್ ಮತ್ತು ಮಾಗಡಿ ರಸ್ತೆಯ ಪಾಲಾಭೋವಿದೊಡ್ಡಿ ಗ್ರಾಮದಲ್ಲಿ ಕಳೆದ ಒಂದು ವಾರದಲ್ಲಿ 6 ನಾಯಿಗಳು ಚಿರತೆಗೆ ಬಲಿಯಾಗಿವೆ. ಇದರಿಂದಾಗಿ, ಸ್ಥಳೀಯರು ಆತಂಕದಲ್ಲೇ ಬದುಕುವಂತಾಗಿದೆ.
ಮನೆ ಎದುರು ಮಲಗಿದ್ದ ನಾಯಿ ಮೇಲೆ ಮಧ್ಯರಾತ್ರಿ ಏಕಾಏಕಿ ದಾಳಿ ನಡೆಸುವ ಚಿರತೆ, ನಾಯಿ ಕೊಂದು ಹೊತ್ತೊಯ್ಯುವ ಘಟನೆ ಮನೆ ಮುಂದೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳು ಇದೀಗ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ. ಚಿರತೆ ಕಾಟಕ್ಕೆ ಬೆಚ್ಚಿ ಬಿದ್ದಿರುವ ಜನ ನಸುಕಿನಲ್ಲಿ ಮತ್ತು ಕತ್ತಲಾಗುತ್ತಿದ್ದಂತೆ ಹೊರಗೆ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ವಸುಧಾ ಲೇಔಟ್‍ನಲ್ಲಿರುವ ಮೋಹನ್ ಕುಮಾರ್ ಎಂಬುವರ ಮನೆಗೆ ಆ. 9ರಂದು ಬಂದಿರುವ ಚಿರತೆಯು ಗೇಟ್ ಒಳಗೆ ಮಲಗಿದ್ದ ಸಾಕುನಾಯಿಯನ್ನು ಸ್ಥಳದಲ್ಲೇ ಕೊಂದು ಹೊತ್ತೊಯ್ದಿದೆ. ಈ ದೃಶ್ಯ ಮನೆಯಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದೇ ರೀತಿ, ಪಾಲಾಭೋವಿದೊಡ್ಡಿಯ ಮಹೇಶ್ ಎಸ್. ಅವರ ಮನೆಯ ಗೇಟ್ ಎದುರು ಇದ್ದ ನಾಯಿಯನ್ನು ಚಿರತೆ ಎಳೆದೊಯ್ದು ತಿಂದು ಹಾಕಿದೆ.
3 ನಾಯಿ ಬಲಿ: ‘ನಮ್ಮ ಮನೆಯಲ್ಲಿ ಸಾಕಿದ್ದ ಮೂರು ನಾಯಿಗಳನ್ನು ಚಿರತೆ ಹೊತ್ತೊಯ್ದಿದೆ. ಮೊದಲ ಎರಡು ನಾಯಿಗಳು ನಾಪತ್ತೆಯಾದಾಗ ಯಾರೋ ಕದ್ದಿರಬಹುದು ಎಂದುಕೊಂಡಿದ್ದೆವು. ಮುಂಜಾಗ್ರತಾ ಕ್ರಮವಾಗಿ ಮನೆ ಎದುರು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆವು. ಮೂರನೇ ನಾಯಿಯೂ ನಾಪತ್ತೆಯಾದಾಗ ಕ್ಯಾಮೆರಾ ಪರಿಶೀಲನೆ ನಡೆಸಿದೆವು. ಆಗ, ಚಿರತೆ ದಾಳಿ ನಡೆಸಿ ಹೊತ್ತೊಯ್ದಿರುವುದು ಗೊತ್ತಾಯಿತು’ ಎಂದು ವಸುಧಾ ಲೇಔಟ್‌ನ ಮೋಹನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಲೇಔಟ್‌ನಲ್ಲಿ ಇದುವರೆಗೆ 5 ನಾಯಿಗಳು ಇದೇ ರೀತಿ ಕಣ್ಮರೆಯಾಗಿವೆ. ಸಮೀಪದಲ್ಲೇ ಅರಣ್ಯ ಪ್ರದೇಶ, ಗುಡ್ಡ ಹಾಗೂ ಕೆರೆ ಇರುವುದರಿಂದ ಚಿರತೆ ಇಲ್ಲಿಗೆ ಬಂದು ನಾಯಿ ಹೊತ್ತೊಯ್ಯುವುದನ್ನು ರೂಢಿ ಮಾಡಿಕೊಂಡಿದೆ. ಈ ಕುರಿತು ಅರಣ್ಯ ಇಲಾಖೆಯವರ ಗಮನಕ್ಕೆ ತಂದಾಗ, ಆರಂಭದಲ್ಲಿ ನಿರ್ಲಕ್ಷ್ಯ ತೋರಿದರು. ಕ್ಯಾಮೆರಾ ದೃಶ್ಯಾವಳಿ ತೋರಿಸಿದಾಗ ಚಿರತೆ ಸೆರೆಗೆ ಈಗ ಬೋನು ಇಟ್ಟಿ ಹೋಗಿದ್ದಾರೆ’ ಎಂದು ಹೇಳಿದರು.
ಬೆಳಿಗ್ಗೆ, ಸಂಜೆ ಕಾಣಿಸಿಕೊಳ್ಳುವ ಚಿರತೆ: ‘ಊರಿನಲ್ಲಿ ಒಂದು ವಾರದಿಂದ ಚಿರತೆ ಓಡಾಡುತ್ತಿದೆ. ಭಾನುವಾರ ರಾತ್ರಿ ನಮ್ಮ ಮನೆಯ ಗೇಟ್ ಬಳಿ ಮಲಗಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿ ಹೊತ್ತೊಯ್ದಿದೆ. ಇದೇ ರೀತಿ ಮೂರು ನಾಯಿಗಳು ನಮ್ಮೂರಿನಲ್ಲಿ ಚಿರತೆ ದಾಳಿಗೆ ಬಲಿಯಾಗಿವೆ’ ಎಂದು ಪಾಲಾಭೋವಿದೊಡ್ಡಿಯ ನಿವಾಸಿ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರಿನಲ್ಲಿ ಕೆಲಸ ಮಾಡುವ ನಾನು ನಸುಕಿನಲ್ಲಿ ಎದ್ದು ಬೈಕ್‌ನಲ್ಲಿ ಹೊರಡುತ್ತೇನೆ. ಆಗ, ನನ್ನ ಕಣ್ಣಿಗೆ ಎರಡು ಸಲ ಚಿರತೆ ಕಾಣಿಸಿಕೊಂಡಿದೆ. ಊರಿನ ಕೆಲವರು ನೋಡಿರುವುದಾಗಿ ಹೇಳುತ್ತಿದ್ದಾರೆ. ಈ ಕುರಿತು ಮಾಹಿತಿ ನೀಡಲು ಅರಣ್ಯ ಇಲಾಖೆಯವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೊ ಕಳಿಸಿದರೂ ಪ್ರತಿಕ್ರಿಯಿಸಲಿಲ್ಲ. ಕಡೆಗೆ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದೆ. ಅವರು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.