ಕನಕಪುರ: ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಖಾತೆ ಪರಿಷ್ಕರಣೆ ಮಾಡಿದ ದೂರಿನ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರೂ ಕ್ರಮ ಕೈಗೊಳ್ಳದ ಕನಕಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಏಳು ದಿನದ ಒಳಗಾಗಿ ಸಮಜಾಯಿಸಿ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮವಾರ ನೋಟಿಸ್ ನೀಡಿದ್ದಾರೆ.
ಉಯ್ಯಂಬಳ್ಳಿ ಹೋಬಳಿ ಅಡಿಕೆಹಳ್ಳ ಗ್ರಾಮದ ಶಿವಮ್ಮ ಶಿವಣ್ಣ ಅವರು ನಿವೇಶನದ ಇ–ಖಾತೆ ತಿದ್ದುಪಡಿ ಮಾಡದಂತೆ ನ್ಯಾಯಾಲಯ ಮೊರೆ ಹೋಗಿದ್ದರು. ಈ ಸಂಬಂಧ ನ್ಯಾಯಾಲಯ ಆದೇಶವನ್ನೂ ನೀಡಿತ್ತು. ಇದರ ಹೊರತಾಗಿಯೂ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಕಾರ್ಯದರ್ಶಿ ಸೇರಿಕೊಂಡು ಇ–ಖಾತೆ ತಿದ್ದುಪಡಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ನೋಟಿಸ್ ನೀಡಿದ್ದಾರೆ.
ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇ–ಖಾತೆ ತಿದ್ದುಪಡಿ ಮಾಡಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿವಮ್ಮ ಅವರ ಮಗ ಪವನ್ ಕುಮಾರ್ 2024ರ ಏಪ್ರಿಲ್ 23 ರಂದು ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ನೀಡಿದ್ದರು.
ಖಾತೆ ತಿದ್ದುಪಡಿ ಮಾಡಿರುವ ದೂರಿನ ಸಂಬಂಧ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ದೂರುದಾರರಿಗೆ ಮತ್ತು ಕಚೇರಿಗೆ ಮಾಹಿತಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಎರಡು ಬಾರಿ ಕನಕಪುರ ತಾಲ್ಲೂಕು ಪಂಚಾಯಿತಿ ಇಒಗೆ ಸೂಚನೆ ನೀಡಿದ್ದರು.
ಆದರೂ ತಾಲ್ಲೂಕು ಪಂಚಾಯಿತಿ ಇಒ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇ–ಖಾತೆ ತಿದ್ದುಪಡಿ ಸಂಬಂಧ ಕಚೇರಿಗೆ ಸ್ಪಷ್ಟವಾದ ಮಾಹಿತಿ ಸಲ್ಲಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರು ಸಹ ಇದುವರೆಗೂ ಯಾವುದೇ ಮಾಹಿತಿ ಸಲ್ಲಿಸದಿರುವುದು ಬೇಜವಾಬ್ದಾರಿತನ ಮತ್ತು ಕರ್ತವ್ಯ ನಿರ್ಲಕ್ಷತೆ ತೋರುತ್ತದೆ. ನಿಮ್ಮ ವರ್ತನೆ ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗಿರುತ್ತದೆ ಎಂದು ನೋಟಿಸ್‌ನಲ್ಲಿ ಹೇಳಿದ್ದಾರೆ.
ನೋಟಿಸ್ ತಲುಪಿದ ಏಳು ದಿನದ ಒಳಗಾಗಿ ಲಿಖಿತ ಸಮಜಾಯಿಷಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.