ರಾಮನಗರ: ಬಡ್ತಿ, ವರ್ಗಾವಣೆ ಹಾಗೂ ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್ ನಿಯಮ) ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಜಿಲ್ಲೆಯ ಶಿಕ್ಷಕರು ತೆರಳಿದ್ದರಿಂದ, ಜಿಲ್ಲೆಯ ಸುಮಾರು 413 ಶಾಲೆಗಳಲ್ಲಿ ತರಗತಿಗಳು
ನಡೆಯಲಿಲ್ಲ.
ಜಿಲ್ಲೆಯ ರಾಮನಗರ, ಮಾಗಡಿ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲ್ಲೂಕು ಒಳಗೊಂಡಂತೆ ಸುಮಾರು ಒಂದೂವರೆ ಸಾವಿರ ಶಿಕ್ಷಕರು ಬಸ್ಸುಗಳಲ್ಲಿ ಬೆಳಿಗ್ಗೆಯೇ ಬೆಂಗಳೂರಿಗೆ ತೆರಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸಾಂದರ್ಭಿಕ ರಜೆ ಪಡೆದಿದ್ದ ಬಹುತೇಕ ಪ್ರಾಥಮಿಕ ಶಾಲಾ ಶಿಕ್ಷಕರು(ಪಿಎಸ್‌ಟಿ) ಶಾಲೆಗೆ ಗೈರಾಗಿದ್ದರು.
ಚನ್ನಪಟ್ಟಣ
ತಾಲ್ಲೂಕಿನಲ್ಲಿ 170 ಶಾಲೆಗಳು, ರಾಮನಗರದಲ್ಲಿ 99, ಮಾಗಡಿಯಲ್ಲಿ 67 ಹಾಗೂ ಕನಕಪುರದಲ್ಲಿ 77 ಶಾಲೆಗಳ ಶಿಕ್ಷಕರ ರಜೆ ಇದ್ದಿದ್ದರಿಂದ ತರಗತಿಗಳು ನಡೆಯಲಿಲ್ಲ. ಬಹುತೇಕ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇದ್ದಿದ್ದರಿಂದಾಗಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿತ್ತು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.