ಭಾನುವಾರ, ಏಪ್ರಿಲ್ 11, 2021
33 °C
'ಮಾಧ್ಯಮಕ್ಕೂ ನಿರ್ಬಂಧ'

ಅಧ್ಯಕ್ಷರನ್ನೇ ಹೊರಗಿಟ್ಟು ಕೆಡಿಪಿ ಸಭೆ! : ಶಾಸಕಿ ಅನಿತಾ ನಡೆಗೆ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕಿ ಅನಿತಾ ಕುಮಾರಸ್ವಾಮಿ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಆದರೆ ಸಭೆಯಲ್ಲಿ ತಾ.ಪಂ. ಅಧ್ಯಕ್ಷರೇ ಇರಲಿಲ್ಲ!

ಸಭೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಎನ್. ನಟರಾಜು ಸೇರಿದಂತೆ ಹಲವರು ಗೈರಾಗಿದ್ದರು. ಕೆಲವು ಸ್ಥಾಯಿ ಸಮಿತಿಗಳ ಅಧ್ಯಕ್ಷರೂ ಕಾಣಿಸಿಕೊಳ್ಳಲಿಲ್ಲ. ಅಧಿಕಾರಿಗಳು ಮಾತ್ರ ಹಾಜರಿದ್ದರು. ಮಾಧ್ಯಮದವರನ್ನೂ ಸಭೆಗೆ ನಿರ್ಬಂಧಿಸಲಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ತಾ.ಪಂ. ಅಧ್ಯಕ್ಷ ಗಾಣಕಲ್‌ ನಟರಾಜು ‘ಶಿಷ್ಟಾಚಾರದ ಪ್ರಕಾರ ನನ್ನನ್ನು ಕೆಡಿಪಿ ಸಭೆಗೆ ಆಹ್ವಾನಿಸಿಲ್ಲ’ ಎಂದು ದೂರಿದರು. ‘ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಇಒ ಅವರನ್ನು ಆಹ್ವಾನಿಸಬೇಕಾಗಿದೆ. ಆದರೆ ಕೆಡಿಪಿ ಸಭೆಯ ಬಗ್ಗೆ ನಮಗೆ ಮಾಹಿತಿಯೇ ಇಲ್ಲ’ ಎಂದು ಸ್ಪಷ್ಟನೆ ನೀಡಿದರು.

‘ಅಭಿವೃದ್ಧಿ ವಿಷಯದಲ್ಲಿ ಹಾಗೂ ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ತಾರತಮ್ಯ ಮಾಡಬಾರದು. ಶಾಸಕರಿಗೆ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ರೈತರು ಪ್ರತಿನಿತ್ಯವೂ ಕಷ್ಟ ಅನುಭವಿಸುತ್ತಿದ್ದಾರೆ. ಅರ್ಹ ರೈತರಿಗೆ ಹಕ್ಕು ಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ತಾಲ್ಲೂಕಿನ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಕಷ್ಟ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕಜ್ಜಿ ಕಾಣಿಸಿಕೊಂಡಿರುವ ಪ್ರಕರಣ ರಾಷ್ಟ್ರಮಟ್ಟದಲ್ಲಿ ಪ್ರಚಾರವಾದರೂ ಶಾಸಕರು ವಸತಿ ನಿಲಯಗಳ ನಿಲಯ ಪಾಲಕರ, ಪ್ರಾಚಾರ್ಯರ ಸಭೆ ಕರೆದು ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲಿಲ್ಲ, ಹಾಸ್ಟೆಲ್ ಗಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿ ಮಕ್ಕಳ ಆರೋಗ್ಯವನ್ನು ಹಾಳು ಮಾಡಲಾಗುತ್ತಿದೆ ಎಂದು ನಾನು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ದಾಖಲೆ ಸಮೇತ ಸಾಬೀತು ಪಡಿಸಿದರೂ ಅವ್ಯವಸ್ಥೆ ಬದಲಾಗಲಿಲ್ಲ’ ಎಂದು ದೂರಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ ‘ಕೆಡಿಪಿ ಸಭೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ ನಡೆಸಬೇಕು. ಆದರೆ ತಾಲ್ಲೂಕಿನಲ್ಲಿರುವ ಕೆಲವು ಅಧಿಕಾರಿಗಳು ಹೇಡಿಗಳಂತೆ ವರ್ತಿಸುತ್ತಿದ್ದಾರೆ. ಯಾರದ್ದೋ ಮಾತು ಕಟ್ಟಿಕೊಂಡು ಶಿಷ್ಟಾಚಾರವನ್ನೇ ಉಲ್ಲಂಘಿಸುತ್ತಿದ್ದಾರೆ’ ಎಂದು ಹರಿಹಾಯ್ದರು.

‘ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಗಾಣಕಲ್ ನಟರಾಜ್ 3863 ಇ-ಖಾತೆಗಳನ್ನು ಮಾಡಿಸಿಕೊಟ್ಟಿದ್ದಾರೆ. ಇಂತಹ ಕೆಲಸಗಳನ್ನು ಶಾಸಕರಾದವರು ಮಾಡಬೇಕು. ಕೆಲವು ದಿನಗಳಿಂದ ಶಾಸಕರು ನಡೆಸುತ್ತಿರುವ ಭೂಮಿ ಪೂಜೆ, ಉದ್ಘಾಟನಾ ಕಾಮಗಾರಿಗಳಿಗೆ ವಾಡಿಕೆಯಂತೆ ಹಾಕಬೇಕಾದ ಕಲ್ಲಿನ ಫಲಕಗಳನ್ನು ಅಳವಡಿಸುತ್ತಿಲ್ಲ. ಕಾರಣ ಅಲ್ಲಿಯೂ ಶಿಷ್ಟಾಚಾರದಂತೆ ತಮ್ಮನ್ನು ಸೇರಿದಂತೆ ಚುನಾಯಿತ ಪ್ರತಿನಿಧಿಗಳ ಹೆಸರುಗಳನ್ನು ನಮೂದಿಸಬೇಕಾಗಿದೆ. ಇದನ್ನು ತಪ್ಪಿಸಲೆಂದೇ ಫಲಕ ಅಳವಡಿಸುತ್ತಿಲ್ಲ’ ಎಂದರು.

* ಜಿಲ್ಲೆಯ ಅಧಿಕಾರಿಗಳು ಹೇಡಿಗಳಂತೆ ವರ್ತಿಸುತ್ತಿದ್ದಾರೆ. ಯಾರದ್ದೋ ಮಾತು ಕೇಳಿಕೊಂಡು ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ

-ಸಿ.ಎಂ. ಲಿಂಗಪ್ಪ
ವಿಧಾನ ಪರಿಷತ್‌ ಸದಸ್ಯ

* ಶಿಷ್ಟಾಚಾರದ ಪ್ರಕಾರ ನನ್ನನ್ನು ಕೆಡಿಪಿ ಸಭೆಗೆ ಆಹ್ವಾನಿಸಿಲ್ಲ. ಶಾಸಕರು ತಾಲ್ಲೂಕಿನ ಸಮಸ್ಯೆಗಳಿಗೆ ಸ್ಪಂದಿಸುತ್ತಲೂ ಇಲ್ಲ

-ಜಿ.ಎನ್‌. ನಟರಾಜು
ತಾ.ಪಂ. ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು