ಭಾನುವಾರ, ಜನವರಿ 26, 2020
31 °C
ದೊಡ್ಡಗಂಗವಾಡಿ ಹಾಸ್ಟೆಲ್‌ ಅವ್ಯವಸ್ಥೆ: ತಾ.ಪಂ. ಸಭೆಯಲ್ಲಿ ಕಾವೇರಿದ ಚರ್ಚೆ

ನಿರ್ಮಾಣಕ್ಕೆ ₨24 ಲಕ್ಷ: ದುರಸ್ತಿಗೆ ₨27 ಲಕ್ಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಆಗಿರುವ ಹಾಸ್ಟೆಲ್‌ ಕಟ್ಟಡಕ್ಕೆ ನಿರ್ಮಾಣಕ್ಕಿಂತ ದುರಸ್ತಿಗೇ ಹೆಚ್ಚು ಹಣ ವ್ಯಯಿಸುತ್ತಿರುವುದಕ್ಕೆ ಬುಧವಾರ ನಡೆದ ರಾಮನಗರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು

ಅಧ್ಯಕ್ಷ ಗಾಣಗಲ್‌ ನಟರಾಜು ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸದಸ್ಯ ಮಹದೇವಯ್ಯ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಆರು ವರ್ಷಗಳ ಹಿಂದೆ 13 ಚದರ ಮೀಟರ್‌ನಲ್ಲಿ ₨24 ಲಕ್ಷ ವೆಚ್ಚದಲ್ಲಿ ಈ ವಿದ್ಯಾರ್ಥಿನಿಲಯ ನಿರ್ಮಿಸಲಗಿದೆ. ಆದರೆ ಇದರ ದುರಸ್ತಿಗೆ ಕೆಆರ್‌ಐಡಿಎಲ್‌ ಸಂಸ್ಥೆ ಮೂಲಕ ₨27.5 ಲಕ್ಷ ವೆಚ್ಚದ ಯೋಜನೆ ರೂಪಿಸಲಾಗಿದೆ. ಹಾಸ್ಟೆಲ್‌ಗೆ ಹೋಗಲು ಸರಿಯಾದ ದಾರಿ ಇಲ್ಲ. ಈಬಗ್ಗೆ ಸಂಸದರು, ಶಾಸಕರು, ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ, ಕ್ಯಾರೆ ಎನ್ನುತ್ತಿಲ್ಲ, ಹಾಸ್ಟೆಲ್ ಕಟ್ಟಡ ಗುಣಮಟ್ಟದಿಂದ ಕೂಡಿದ್ದರೂ ದುರಸ್ತಿಗಾಗಿ ಹಣ ಬಿಡುಗಡೆ ಮಾಡಿಸಿ ಜಿಲ್ಲಾಧಿಕಾರಿಯಿಂದ ಆಡಳಿತಾತ್ಮಕ ಅನುಮೋದನೆ ಮಾಡಿಸಿದ್ದಾರೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಕಮಿಷನ್ ಆಸೆಗಾಗಿ ಸರ್ಕಾರದ ಬೊಕ್ಕಸದ ಹಣ ದುರುಪಯೋಗವಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕ ಅಧ್ಯಕ್ಷರು ಹಾಗೂ ಸದಸ್ಯರು ಧ್ವನಿಗೂಡಿಸಿದರು. ಕಳೆದ ಆರು ತಿಂಗಳಿಂದ ಹಲವು ಸಭೆಗಳಲ್ಲಿ ಈ ವಿಷಯ ಪ್ರಸ್ತಾಪ ಆಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಮೇಲಧಿಕಾರಿಗೆ ಪತ್ರ ಬರೆದು ಈ ಕ್ರಿಯಾ ಯೋಜನೆಯನ್ನು ಮರು ಪರಿಶೀಲಿಸುವಂತೆ ಕೋರಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಪಶುಪಾಲನಾ ಇಲಾಖೆ ವತಿಯಿಂದ ಕೋಳಿ ಮರಿ ಖರೀದಿ ಮತ್ತು ವಿತರಣೆ ಮಾಡಿರುವ ಫಲಾನುಭವಿಗಳ ಪಟ್ಟಿಯನ್ನು ನೀಡುವಂತೆ ಎಂದು ಸದಸ್ಯರಾದ ಲಕ್ಷ್ಮೀಕಾಂತ ಮತ್ತು ಭದ್ರಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವರದರಾಜ್‌ ಗೌಡ ಮಾಹಿತಿ ನೀಡಿ 15 ಬರಡು ರಾಸು ತಪಾಸಣಾ ಶಿಬಿರಕ್ಕೆ ₨3.80 ಲಕ್ಷ ಮತ್ತು 29 ಸಂಸ್ಥೆಗಳಿಗೆ ₨3 ಲಕ್ಷ ಅನುದಾನ ನಿಗದಿಯಾಗಿದೆ ಎಂದರು. ಆಯಾಯ ಭಾಗದ ಎಲ್ಲಾ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದು ಅವರನ್ನು ಆಹ್ವಾನಿಸುವಂತೆ ಅಧ್ಯಕ್ಷರು ಸೂಚಿಸಿದರು.

ಸದಸ್ಯ ರೇಣುಕಾಪ್ರಸಾದ್ ಮಾತನಾಡಿ, ಗ್ರಾಮೀಣ ಪ್ರದೇಶದ ಹಾಸ್ಟೆಲ್‌ಗಳು ಅವ್ಯವಸ್ಥೆಯಿಂದ ಕೂಡಿವೆ. ಕೈಲಾಂಚ ವಿದ್ಯಾರ್ಥಿನಿಲಯದಲ್ಲಿ ಕಿಟಕಿ ಗಾಜು ಒಡೆದಿವೆ. ಚಳಿಗಾಲದಲ್ಲಿ ಮಕ್ಕಳು ಮಲಗಲು ತೊಂದರೆಯಾಗಿದೆ. ಅವ್ವೇರಹಳ್ಳಿ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಮಲಗಲು ಹಾಸಿಗೆ ಮತ್ತು ಹೊದಿಕೆಗಳಿಲ್ಲ ಎಂದು ದೂರಿದರು.

ಬೈರಮಂಗಲ ತಾ.ಪಂ. ಸದಸ್ಯ ಪ್ರಕಾಶ್ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುತ್ತಿರುವ ಸೈಕಲ್‌ಗಳು ಗುಣಮಟ್ಟದಿಂದ ಕೂಡಿಲ್ಲ. ವಿತರಣೆ ಸಮಯದಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಆಹ್ವಾನಿಸದೇ ಕಡೆಗಣಿಸಲಾಗುತ್ತಿದೆ. ಅಂತಹವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಉಪಾಧ್ಯಕ್ಷೆ ರಮಾಮಣಿ, ಸದಸ್ಯರಾದ ಜಗದೀಶ್, ಲಕ್ಷಮ್ಮ, ನೀಲಾ, ಚಂದ್ರಕಲಾ, ಕಾರ್ಯ ನಿರ್ವಹಣಾಧಿಕಾರಿ ಶಿವಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು