ಬುಧವಾರ, ಆಗಸ್ಟ್ 4, 2021
26 °C
ಬೀನ್ಸ್‌, ದಪ್ಪ ಮೆಣಸಿನಕಾಯಿ ಬೆಲೆ ಕೇಳಿಯೇ ಗ್ರಾಹಕರು ಕಂಗಾಲು; ಈರುಳ್ಳಿ ಇನ್ನಷ್ಟು ಅಗ್ಗ

ರಾಮನಗರ: ನಾಟಿ ಕೊತ್ತಂಬರಿ ಬಲು ದುಬಾರಿ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ಲಾಕ್‌ಡೌನ್ ಸಡಿಲವಾಗುತ್ತಿದ್ದಂತೆಯೇ ತರಕಾರಿಗಳ ಬೆಲೆಯೂ ಏರತೊಡಗಿದ್ದು, ಹುರುಳಿಕಾಯಿ ಮತ್ತು ದಪ್ಪ ಮೆಣಸಿನಕಾಯಿಗಳು ಅರ್ಧ ಶತಕದ ಗಡಿ ದಾಟಿ ಮುನ್ನಡೆದಿವೆ. ನಾಟಿ ಕೊತ್ತಂಬರಿ ಬೆಲೆ ಕೇಳಿಯೇ ಜನರು ಹೌಹಾರುವಂತೆ ಆಗಿದೆ.

ಸದ್ಯ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಗತ್ಯದಷ್ಟು ಪ್ರಮಾಣದ ತರಕಾರಿ ಆವಕ ಆಗುತ್ತಿದೆ. ಆದರೆ ಕಳೆದೆರಡು ವಾರಕ್ಕೆ ಹೋಲಿಸಿದರೆ ಕೆಲವು ತರಕಾರಿ ಬೆಲೆ ಏರಿಸಿಕೊಂಡಿವೆ. ಅದರಲ್ಲೂ ಹುರುಳಿಕಾಯಿ ಅರ್ಥಾತ್‌ ಬೀನ್ಸ್‌ನ ಬೆಲೆ ಏರುಗತಿಯಲ್ಲಿಯೇ ಮುಂದುವರಿದಿದೆ. ಮಳೆಯ ಕಾರಣ ಮಾರುಕಟ್ಟೆಗೆ ಗುಣಮಟ್ಟದ ಬೀನ್ಸ್‌ ಸರಬರಾಜು ಆಗುತ್ತಿಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ದಪ್ಪ ಮೆಣಸಿನಕಾಯಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಪರಿಣಾಮವಾಗಿ ಇದರ ಬೆಲೆಯೂ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 20ಕ್ಕೆ ಕುಸಿದಿತ್ತು. ಇದರಿಂದಾಗಿ ಅನೇಕರು ಕ್ಯಾಪ್ಸಿಕಂ ಕೃಷಿಯಿಂದ ವಿಮುಖರಾಗಿದ್ದರು. ಪರಿಣಾಮವಾಗಿ ಈಗ ಇದರ ಬೆಲೆ ದಿಡೀರ್‍ ಏರಿಕೆ ಕಾಣತೊಡಗಿದ್ದು, ತಿಂಗಳ ಅವಧಿಯಲ್ಲಿಯೇ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ನಿರೀಕ್ಷೆಯಷ್ಟು ಉತ್ಪನ್ನ ಮಾರುಕಟ್ಟೆಗೆ ಬರುತ್ತಿಲ್ಲ.

ಮಾರುಕಟ್ಟೆಗೆ ಟೊಮ್ಯಾಟೊ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದು, ಬೆಲೆಯೂ ಏರುತ್ತಿರುವುದು ವಿಶೇಷ. ವಾರದ ಅವಧಿಯಲ್ಲೇ ಈ ತರಕಾರಿ ಪ್ರತಿ ಕೆ.ಜಿ.ಗೆ 10ರಿಂದ 15ಕ್ಕೆ ಏರಿಕೆ ಕಂಡಿದೆ. ಇನ್ನೂ ಲಾಕ್‌ಡೌನ್‌ ನಡುವೆಯೂ ಅಲ್ಲಲ್ಲಿ ಶುಭ ಸಮಾರಂಭಗಳು ನಡೆಯುತ್ತಿರುವ ಕಾರಣ ನುಗ್ಗೆಕಾಯಿಗೂ ಬೆಲೆ ಕುದುರಿದೆ. ಮಾರುಕಟ್ಟೆಯಲ್ಲಿ ಕಡಿಮೆ ಕಾಣಸಿಗುವ ಈ ತರಕಾರಿಯ ಬೆಲೆಯೂ ಹೆಚ್ಚುತ್ತಲೇ ಇದೆ. ಈರುಳ್ಳಿ ಮಾತ್ರ ಗ್ರಾಹಕರಿಗೆ ಇನ್ನಷ್ಟು ಅಗ್ಗ ಆಗತೊಡಗಿದೆ.100ಕ್ಕೆ 6-7 ಕೆ.ಜಿ. ಈರುಳ್ಳಿ ಸಿಗುತ್ತಿದ್ದು, ಜನರು ಬುಟ್ಟಿ ತುಂಬಿಸಿಕೊಂಡು ಹೋಗತೊಡಗಿದ್ದಾರೆ. ಕ್ಯಾರೆಟ್‌, ಬದನೆ, ಹಸಿ ಮೆಣಸಿನಕಾಯಿ, ಮೂಲಂಗಿ, ಬೆಂಡೆ ಮೊದಲಾದ ದಿನಬಳಕೆ ತರಕಾರಿಗಳ ದರವು ಸ್ಥಿರವಾಗಿದೆ.

ಮಾರುಕಟ್ಟೆಯಲ್ಲಿ ನಾಟಿ ಕೊತ್ತಂಬರಿಗೆ ಬೇಡಿಕೆ ದುಪ್ಪಟ್ಟಾಗಿದೆ. ಆದರೆ ಅಗತ್ಯ ಪ್ರಮಾಣದಷ್ಟು ಸೊಪ್ಪು ಮಾರುಕಟ್ಟೆಗೆ ಬರದ ಕಾರಣ ಬೆಲೆ ಅನೇಕ ಪಟ್ಟು ಹೆಚ್ಚಾಗಿದೆ. ಘಮ್ಮೆನ್ನುವ ನಾಟಿ ಸೊಪ್ಪಿನ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ದಪ್ಪ ಕಟ್ಟಿನ ಬೆಲೆ ₨80-100ರವರೆಗೆ ತಲುಪಿದ್ದು ಗ್ರಾಹಕರು ಬೆಲೆ ಕೇಳಿಯೇ ದೂರ ಸರಿಯುತ್ತಿದ್ದಾರೆ. ಫಾರ್ಮ್‌ ಕೊತ್ತಂಬರಿ ಅಗ್ಗದ ದರದಲ್ಲಿ ಸಿಗುತ್ತಿದೆ. ಕೀರೆ, ಕಿಲ್‌ಕೀರೆ, ದಂಟು, ಸಬ್ಬಸ್ಸಿಗೆ, ಮೆಂತ್ಯ ದಪ್ಪನೆಯ ಕಟ್ಟಿಗೆ 15 ಬೆಲೆ ಇದೆ. ಪಾಲಕ್‌, ಪುದೀನ ಅಗ್ಗವಾಗಿವೆ.

ನಾಟಿ ಕೊತ್ತಂಬರಿ ಬೆಲೆ ಜಾಸ್ತಿ

ನಾಟಿ ಕೊತ್ತಂಬರಿ ಬೆಲೆ ಕೇಳಿದರೆ ಕೊಳ್ಳಲು ಮನಸ್ಸು ಬರುತ್ತಿಲ್ಲ. ಈ ಸೊಪ್ಪಿಲ್ಲದೆ ಅಡುಗೆ ಮಾಡುವುದು ಲೇಸು ಅನಿಸುತ್ತಿದೆ
ಎಂದು ರಾಮನಗರದ ಗೃಹಿಣಿ ನಮ್ರತಾ ಹೇಳುತ್ತಾರೆ.

ದಪ್ಪ ಮೆಣಸಿನಕಾಯಿ ದುಬಾರಿ

ಲಾಕ್‌ಡೌನ್‌ ಅವಧಿಯಲ್ಲಿ ಕೇಳುವವರೇ ಇಲ್ಲದಿದ್ದ ದಪ್ಪ ಮೆಣಸಿನಕಾಯಿ ಈಗ ದುಬಾರಿಯಾಗಿದೆ. ಮಾರುಕಟ್ಟೆಗೆ ಉತ್ಪನ್ನ ಬರುತ್ತಲೇ ಇಲ್ಲ ಎಂದು ರಾಮನಗರ ಎಪಿಎಂಸಿ ತರಕಾರಿ ವ್ಯಾಪಾರಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ತರಕಾರಿ ದರ (ಪ್ರತಿ ಕೆ.ಜಿ.ಗೆ- ಗಳಲ್ಲಿ)

ಹುರುಳಿಕಾಯಿ: 60-70
ಕ್ಯಾರೆಟ್: 40
ಆಲೂಗಡ್ಡೆ: 30
ಈರುಳ್ಳಿ: 15-20
ಟೊಮ್ಯಾಟೊ: 15-20
ದಪ್ಪ ಮೆಣಸಿನಕಾಯಿ: 60
ಮೂಲಂಗಿ: 30
ಬೆಂಡೆ: 30
ಹಾಗಲಕಾಯಿ: 50
ನುಗ್ಗೆಕಾಯಿ: 60
ತೊಂಡೆ: 40
ಗೋರಿಕಾಯಿ: 25
ಹಸಿ ಬಟಾಣಿಕಾಯಿ: 160
ಹಸಿ ಮೆಣಸಿನಕಾಯಿ: 40
ಶುಂಠಿ-60
ಬೆಳ್ಳುಳ್ಳಿ: 60-80
ಬೀಟ್‌ರೂಟ್‌-40
ಪಚ್ಚೆ ಬಾಳೆ: 30
ಏಲಕ್ಕಿ ಬಾಳೆ: 50
ಬದನೆ: 30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು