ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ಪಾಳು ಬಿದ್ದ ಬಹುಕೋಟಿ ವೆಚ್ಚದ ಈಜುಕೊಳ

ಕೋವಿಡ್‌ ಮುಗಿದರೂ ಬಾಗಿಲು ಬಂದ್‌; ಕ್ರೀಡಾಸಕ್ತರಿಗೆ ನಿರಾಸೆ
Last Updated 1 ಆಗಸ್ಟ್ 2022, 3:15 IST
ಅಕ್ಷರ ಗಾತ್ರ

ರಾಮನಗರ: ನಗರದ ಕುಮಾರಸ್ವಾಮಿ ಬಡಾವಣೆ ಬಳಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈಜುಕೊಳಕ್ಕೆ ಗ್ರಹಣ ಹಿಡಿದಿದ್ದು, ಸಾರ್ವಜನಿಕರ ಉಪಯೋಗಕ್ಕೆ ಬಾರದಂತೆ ಆಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರ್ಮಾಣ ಮಾಡಿರುವ ಈಜುಕೊಳವು 2019ರಲ್ಲಿ ಉದ್ಘಾಟನೆ ಆಗಿತ್ತು. ನಂತರದಲ್ಲಿ ಸ್ವಿಮ್‌ಲೈಫ್‌ ಸಿಮ್ಮಿಂಗ್‌ ಅಕಾಡೆಮಿಯು ಇದರ ಹೊರಗುತ್ತಿಗೆ ಪಡೆದಿದ್ದು, ಆಸಕ್ತರಿಗೆ ಈಜಿನ ತರಬೇತಿಯನ್ನೂ ನೀಡುತ್ತಿತ್ತು. ಆದರೆ ಕೋವಿಡ್ ಕಾರಣಕ್ಕೆ ಕೊಳವನ್ನು ಮುಚ್ಚಲಾಗಿತ್ತು.

ಇದೀಗ ಕೋವಿಡ್ ಭೀತಿ ದೂರವಾಗಿ ತಿಂಗಳುಗಳೇ ಕಳೆದಿದ್ದರೂ ಇನ್ನೂ ಇದರ ಬಾಗಿಲು ತೆರೆದಿಲ್ಲ. ಇದರಿಂದಾಗಿ ಸಾರ್ವಜನಿಕರ ಪಾಲಿಗೆ ಈ ಸೌಲಭ್ಯ ಇದ್ದೂ ಇಲ್ಲದಂತೆ ಆಗಿದೆ. ಬೇಸಿಗೆ ಹಾಗೂ ಬಿಡುವಿನ ಅವಧಿಯಲ್ಲಿ ಈಜು ಕಲಿಯುವ, ಕ್ರೀಡಾಭ್ಯಾಸ ಮಾಡುವ ಆಸಕ್ತರ ಕನಸಿಗೆ ಇದರಿಂದ ಅಡ್ಡಿಯಾಗಿದೆ.

ನಿರ್ವಹಣೆಯದ್ದೇ ಸಮಸ್ಯೆ: ಜಿಲ್ಲಾ ಈಜುಕೊಳವು ಕ್ರೀಡಾ ಇಲಾಖೆ ಪಾಲಿಗೆ ಬಿಳಿಆನೆಯಾಗಿದ್ದು, ಇದರ ನಿರ್ವಹಣೆಯೇ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಈಜುಕೊಳಗಳಿಗೆ ಬೇಡಿಕೆ ಹೆಚ್ಚು. ಉಳಿದ ದಿನಗಳಲ್ಲಿ ಜನ ಬರುವುದು ಕಡಿಮೆ. ಒಳಾಂಗಣದಲ್ಲಿದ್ದು, 25 ಮೀಟರ್‌ ವಿಸ್ತೀರ್ಣದಲ್ಲಿ ಇರುವ ಕೊಳಗಳನ್ನು ನಿರ್ವಹಣೆ ಮಾಡಬಹುದು. ಆದರೆ ಇದು ವಿಸ್ತೀರ್ಣದಲ್ಲಿ ಅದರ ದುಪ್ಪಟ್ಟು ಇದೆ. ಕೊಳವನ್ನು ನಿರ್ವಹಣೆ ಮಾಡಿದ್ದೇ ಆದಲ್ಲಿ ತಿಂಗಳಿಗೆ ₹30–35 ಸಾವಿರ ವಿದ್ಯುತ್‌ ಬಿಲ್ ಬರುತ್ತದೆ. ಇದಲ್ಲದೆ ಇಬ್ಬರು ಜೀವರಕ್ಷಕರು, ಒಬ್ಬ ತರಬೇತುದಾರರು, ಭದ್ರತಾ ಸಿಬ್ಬಂದಿ ಆದಿಯಾಗಿ ಅನೇಕ ಮಂದಿ ಬೇಕಾಗುತ್ತದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಅಂತರರಾಷ್ಟ್ರೀಯ ಗುಣಮಟ್ಟ: ಈ ಈಜುಕೊಳವು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿದ್ದು, ತರಬೇತಿಗೆ ಸೂಕ್ತವಾಗಿದೆ. ಸ್ಪರ್ಧೆಗಳನ್ನೂ ನಡೆಸುವ ಸಾಮರ್ಥ್ಯ ಹೊಂದಿದೆ. 25 ಮೀಟರ್‌ನಷ್ಟು ಅಗಲ ಹಾಗೂ 50 ಮೀಟರ್‌ನಷ್ಟು ಉದ್ದವಿದೆ. ಏಳು ಅಡಿಗಳಷ್ಟು ಆಳವಾಗಿರುವ ಕೊಳಕ್ಕೆ ನೀರು ಒಳ ಬರುವ ಮತ್ತು ಹೊರಹೋಗುವ ವ್ಯವಸ್ಥೆ ಇದೆ. ಇದರೊಟ್ಟಿಗೆ ನೀರು ಶುದ್ಧೀಕರಣ ಯಂತ್ರವನ್ನು ಅಳವಡಿಸಲಾಗಿದೆ. ಕೊಳಕ್ಕೆ ಹೊಂದಿಕೊಂಡಂತೆ ಸುತ್ತ ಪ್ರೇಕ್ಷಕರ ಗ್ಯಾಲರಿ, ಕಂಪೌಂಡ್ ಸೌಲಭ್ಯವೂ ಇದೆ.

ಬಹುದಿನಗಳ ಕನಸು: ಜಿಲ್ಲಾ ಕೇಂದ್ರದಲ್ಲಿ ಉತ್ತಮವಾದ ಈಜುಕೊಳ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಕ್ರೀಡಾಪ್ರೇಮಿಗಳ ಬಹುದಿನದ ಕನಸು. ರಾಮನಗರವು ಜಿಲ್ಲಾ ಕೇಂದ್ರವಾಗಿ ನಿರ್ಮಾಣವಾದ ಖುಷಿಯಲ್ಲಿಯೇ 2007ರಲ್ಲಿ ಈ ಕೊಳದ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ನಗರಾಭಿವೃದ್ಧಿ ಪ್ರಾಧಿಕಾರವು ಇದಕ್ಕಾಗಿ ಕುಮಾರಸ್ವಾಮಿ ಬಡಾವಣೆಯಲ್ಲಿ 1.5 ಎಕರೆ ಜಾಗ ನೀಡಿತ್ತು. ಆರಂಭದಲ್ಲಿ ನಿರ್ಮಾಣದ ವೆಚ್ಚ ₹1.5 ಕೋಟಿ ಆಗಿದ್ದು, ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ನಂತರ ಮತ್ತೆ ಆರಂಭಗೊಂಡು ಕುಂಟುತ್ತಾ
ಸಾಗಿತ್ತು.

ವರ್ಷಗಳ ಹಿಂದೆ ಕ್ರೀಡಾ ಇಲಾಖೆಯು ಮತ್ತೆ ₹99.9 ಲಕ್ಷ ವೆಚ್ಚದಲ್ಲಿ ಕೊಳದ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿತ್ತು. ಕಡೆಗೂ ಕಾಮಗಾರಿ ಮುಗಿದು 2019ರ ಮಾರ್ಚ್‌ನಿಂದ ಇದು ಬಳಕೆಗೆ ಮುಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT