ರಾಮನಗರ: ‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಪೂರಕ ವಾತಾವರಣ ಹಾಗೂ ಅಗತ್ಯ ಸೌಕರ್ಯಗಳಿವೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವಂತೆ ಹಾಗೂ ಇತರ ಪೂರಕ ಚಟುವಟಿಕೆಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಪ್ರವಾಸೋದ್ಯಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಅನುಮೋದನೆ ನೀಡಿರುವ ₹2.91 ಕೋಟಿಯನ್ನು ನಿವೇಶನ ಅಭಿವೃದ್ದಿ ಕಾಮಗಾರಿಗಳಡಿ, ಮಾಗಡಿ ಕೋಟೆಯ ಸಂರಕ್ಷಣಾ ಕಾಮಗಾರಿಯನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಪೂರ್ಣಗೊಳಿಸಲಾಗಿದೆ. ಎಂದು ಅವರು ತಿಳಿಸಿದರು.
‘ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ 10 ಕಿಲೋಮೀಟರ್ ದೂರದಲ್ಲಿ ಕಣ್ವ ಜಲಾಶಯ ಹಾಗೂ ಮಾಗಡಿ ಸಮೀಪವಿರುವ ಮಂಚನಬೆಲೆ ಜಲಾಶಯಗಳಲ್ಲಿ ಸೈಲ್ ಬೋಟ್ ರೈಡ್, ಸ್ಪೀಡ್ ಬೋಟ್, ರೈಡ್ ಆನ್ ಓವರ್ ಕ್ರಾಫ್ಟ್, ಬಂಪರ್ ಬೋಟ್ ರೈಡ್, ಬನಾನ ರೈಡ್ ಕ್ರಾಫ್ಟ್, ಜೆಟ್ ಸ್ಕೀ ರೈಡ್, ಸ್ಟಾಂಡ್ ಆಫ್ ಸರ್ಫಿಂಗ್‌ರೈಡ್, ಕಯಾಕಿಂಗ್, ಪ್ಯಾರಾ ಮೋಟಾರಿಂಗ್ ನಂತರ ಜಲಸಾಹಸ ಚಟುಚಟಿಕೆಗಳು ಹಾಗೂ ಮನರಂಜನಾ ಚಟುವಟಿಕೆಗಳು ಆಯೋಜಿಸಬಹುದು. ಇದರಿಂದ ಜಿಲ್ಲೆಯ ಪ್ರ‍್ರವಾಸೋದ್ಯಮಕ್ಕೆ ಲಾಭದಾಯಕವಾಗುತ್ತದೆ. ಈ ಕುರಿತು ಗಮನ ಹರಿಸಿ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
‘ರಾಮನಗರ ತಾಲ್ಲೂಕಿನಲ್ಲಿ ಅಚ್ಚಲು ಬೆಟ್ಟದಲ್ಲಿ ಹ್ಯಾಂಡ್ ರೈಲಿಂಗ್, ಹಾರೋಹಳ್ಳಿ ಚಾಮುಂಡೇಶ್ವರಿ ಬೆಟ್ಟದ ಬಳಿ ಸೋಲಾರ್ ಲೈಟ್ ಡ್ರೈನೆಜ್ ರಂಗರಾಯನದೊಡ್ಡಿಕೆರೆಯ ಪರಿಮಿತಿಯಲ್ಲಿ ಹ್ಯಾಂಡ್ ರೈಲ್, ಸೋಲಾರ್ ಲೈಟ್ ಆರ್ನೋಮೆಂಟ್‌ಗ್ರೀಲ್ ವರ್ಕ ಬೋಟಿಂಗ್, ರೇವಣ ಸಿದ್ದೇಶ್ವರ ಬೆಟ್ಟದಲ್ಲಿ ಸೋಲಾರ್ ಲೈಟ್, ಲಿಫ್ಟ್ ಹಾಗೂ ಹ್ಯಾಂಡ್ ರೈಲ್, ರಸ್ತೆ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು’ ಎಂದು ಅವರು ತಿಳಿಸಿದರು.
‘ಜಿಲ್ಲೆಯಲ್ಲಿ ರಾಕ್ ಕ್ಲೈಂಬಿಂಗ್ , ಚಾರಣ ಮತ್ತು ವಾಟರ್ ಸ್ಟೋರ್ಟ್ಸ್ ಅನ್ನು ಕಣ್ವ, ಮಂಚನಬೆಲೆ ಮತ್ತು ವೈ,ಜಿ. ಗುಡ್ಡಗಳಲ್ಲಿ ಪ್ರಾರಂಭಿಸಲು ಕಾನೂನಾತ್ಮಕವಾಗಿ ಪರಿಶೀಲಿಸಿ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಜಿಲ್ಲಾಡಳಿತ ಸಿದ್ದವಿದೆ. ಸಂಗಮ-ಮೇಕೆದಾಟು ಪ್ರವಾಸಿ ತಾಣಕ್ಕೆ ಪ್ರವಾಸಿಗರನ್ನು ಸೆಳೆಯಲು ಅನುಕೂಲ ಮಾಡಿಕೊಡಲು ಕ್ರಮ ವಹಿಸಬೇಕು’ ಎಂದು ಸೂಚಿಸಿದರು.
ಜಿಲ್ಲಾ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳ ಅಧ್ಯಕ್ಷ ವಿಜಯದೇವ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಯುವಜನ ಮತ್ತು ಸಬಲೀಕರಣ ಇಲಾಖೆಯ ಸಹ ನಿರ್ದೇಶಕಿ ಅನಿತಾ, ಕೆಎಸ್‌ಟಿಡಿಸಿ ಅಧಿಕಾರಿಗಳು, ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು, ಹೋಂ ಸ್ಟೇ ಮತ್ತು ರೆಸಾರ್ಡ್‌ಗಳ ಮಾಲೀಕರು ಸಭೆಯಲ್ಲಿದ್ದರು.
‘ಸಾಹಸ ಪ್ರವಾಸೋದ್ಯಮಕ್ಕಾಗಿ ಕಬ್ಬಾಳು ಬೆಟ್ಟ ಸಾವನದುರ್ಗ ರಾಮದೇವರ ಬೆಟ್ಟ ಹಂದಿಗುಂದಿ ಬೆಟ್ಟ ಲಕ್ಷೀ ನರಸಿಂಹಸ್ವಾಮಿ ಬೆಟ್ಟ ಅಚ್ಚಲು ಬೆಟ್ಟ ಕೂನಗಲ್ಲು ಬೆಟ್ಟ ಭೀಮನಕಿಂಡಿ ಬೆಟ್ಟ ಜಲಸಾಹಸ ಪ್ರವಾಸೋದ್ಯಮಕ್ಕಾಗಿ ಕಣ್ವ ಜಲಾಶಯ ಮಂಚಲಬೆಲೆ ಜಲಾಶಯ ವೈ.ಜಿಗುಡ್ಡ ಇಗ್ಗಲೂರು ಜಲಾಶಯ ವನ್ಯ ಜೀವಿ ಪ್ರವಾಸೋದ್ಯಮಕ್ಕಾಗಿ ರಾಮದೇವರ ಬೆಟ್ಟ ರಣಹದ್ದು ವನ್ಯ ಜೀವಿಧಾಮಗಳನ್ನು ಅಭಿವೃದ್ಧಿಪಡಿಸಲು ಯೋಜನೆ ತಯಾರಿಸಿ’ ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.