ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಗುಂಡು ತೋಪಲ್ಲಿ 'ಹಸಿರು ಕ್ರಾಂತಿ’

ರಾಂಪುರದ ಈ ಯುವಕನ ನಡೆ ಎಲ್ಲರಿಗೂ ಮಾದರಿ
Last Updated 5 ಜೂನ್ 2020, 4:24 IST
ಅಕ್ಷರ ಗಾತ್ರ

ರಾಮನಗರ: ಹೈಸ್ಕೂಲಿನ ಮೆಟ್ಟಿಲನ್ನೇ ಹತ್ತದ ಈ ಯುವಕ ತಮ್ಮೂರಿನ ಮಂದಿಗೆಲ್ಲ ಪರಿಸರದ ಪಾಠ ಹೇಳುತ್ತಿದ್ದಾರೆ. ಸರ್ಕಾರಿ ಗುಂಡು ತೋಪಿನಲ್ಲಿ ಸಸಿ ನೆಟ್ಟು ಬೆಳೆಸಿ ಇತರರಿಗೆ ಮಾದರಿ ಆಗಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಇರುವ ಗುಂಡುತೋಪನ್ನು ಹೊಕ್ಕರೆ ಕುರುಚಲು ಕಾಡೊಂದಕ್ಕೆ ಹೊಕ್ಕ ಅನುಭವ ಆಗುತ್ತದೆ. ಬೆರಳೆಣಿಕೆಯಷ್ಟಿರುವ ಬೃಹತ್‌ ಆದ ಮರಗಳ ಜೊತೆಜೊತೆಗೇ ನಾಲ್ಕಾರು ವರ್ಷದ ಹಿಂದೆ ನೆಟ್ಟ ಸಸಿಗಳೂ ಈಗ ಆಳೆತ್ತರಕ್ಕೆ ಬೆಳೆದು ನಿಂತಿವೆ. ಇದರಲ್ಲಿ ಗ್ರಾಮದ ಯುವಕ ರಘು ಅವರ ಪರಿಶ್ರಮ ದೊಡ್ಡದಿದೆ.

ರಾಂಪುರ ಸುತ್ತಮುತ್ತ ಈತ ಗಾಡಿ ರಘು ಎಂದೇ ಪ್ರಸಿದ್ಧಿ. ಅಷ್ಟೇನೂ ಸ್ಥಿತಿವಂತರಲ್ಲದ ಕಾರಣಕ್ಕೆ ದಿನವಿಡೀ ದುಡಿಮೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ನಡುವೆಯೂ ಇವರು ಮಾತ್ರ ಪರಿಸರದ ಮೇಲಿನ ತಮ್ಮ ಪ್ರೀತಿಯನ್ನು ಕಿಂಚಿತ್ತು ಕಡಿಮೆ ಮಾಡಿಲ್ಲ. ದುಡಿಮೆಯ ಒಂದು ಭಾಗವನ್ನೂ ಗಿಡಮರಗಳನ್ನು ಬೆಳೆಸಲೆಂದೇ ವ್ಯಯಿಸಿದ್ದಾರೆ. ರಾಂಪುರದ ಗುಂಡು ತೋಪು ಪುರಾತನವಾದುದು. ಇಲ್ಲಿ ನೂರಾರು ವರ್ಷಗಳ ಕಾಲದ 180ಕ್ಕೂ ಹೆಚ್ಚು ಮರಗಳ ಪೈಕಿ ಬಹುತೇಕ ವೃಕ್ಷಗಳು ನೆಲ ಕಚ್ಚಿವೆ. ಇನ್ನು20 ಮರಗಳಷ್ಟೇ ಉಳಿದುಕೊಂಡಿದೆ. ಹೀಗಾಗಿ ಪಾಳು ಬಿದ್ದ ಜಾಗದಲ್ಲಿ ಕುಮಾರ ಸಸಿಗಳನ್ನು ನೆಟ್ಟು ಗ್ರಾಮಸ್ಥರ ಸಹಕಾರದಿಂದ ಅವುಗಳನ್ನು ಪೋಷಿಸುತ್ತಾ ಬಂದಿದ್ದಾರೆ.

ಈ ಜಾಗದಲ್ಲಿ ಒಟ್ಟು1050 ಸಸಿಗಳನ್ನು ನೆಟ್ಟಿದ್ದು, ಇದರಲ್ಲಿ810 ಸಸಿಗಳು ಮರವಾಗಿ ಬೆಳೆಯುತ್ತಿವೆ. ಬೇವು, ಹೊಂಗೆ, ಮಾವು, ಆಲ, ನೇರಳೆ, ಹಿಪ್ಪೆ, ಗೋಣಿ, ಅರಳಿ... ಹೀಗೆ ನಾನಾ ಜಾತಿಯ ಸಸಿಗಳು ವೃಕ್ಷವಾಗುವ ಹಂತದಲ್ಲಿವೆ. ಇಡೀ ಗುಂಡು ತೋಪು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ತಮ್ಮದೇ ಗಾಡಿಯಲ್ಲಿ ನೀರಿನ ಡ್ರಮ್‌ಗಳನ್ನು ಕಟ್ಟಿಕೊಂಡು ಈ ಸಸಿಗಳಿಗೆ ನೀರು ಉಣಿಸಿ ಬೆಳೆಸಿದ್ದಾಗಿ, ಸಸಿಗಳ ಸುತ್ತ ಮುಳ್ಳಿನ ಬೇಲಿ ಕಟ್ಟಿ ದನಕರು ಮೇಯದಂತೆ ಎಚ್ಚರ ವಹಿಸಿದ್ದಾಗಿ ರಘು ಹೇಳುತ್ತಾರೆ. ಕೆಲವೊಮ್ಮೆ ರಾತ್ರಿವರೆಗೂ ಇದೇ ತೋಪಿನಲ್ಲಿ ಉಳಿದು ಸಸಿಗಳ ಪೋಷಣೆ ಮಾಡಿದ್ದಾರೆ. ಆಗೆಲ್ಲ ಗ್ರಾಮಸ್ಥರು ಇವರಿಗೆ ಸಹಕಾರ ನೀಡಿದ್ದಾರೆ.

ಈ ಗುಂಡು ತೋಪಿನ ಒಂದು ಭಾಗದಲ್ಲಿಯೇ ಗ್ರಾಮಸ್ಥರು ಶವಸಂಸ್ಕಾರವನ್ನೂ ನಡೆಸುತ್ತಾ ಬಂದಿದ್ದಾರೆ. ಒಮ್ಮೆ ಶವಕ್ಕೆ ಹಾಕಿದ್ದ ಬೆಂಕಿ ಆಕಸ್ಮಿಕವಾಗಿ ಸುತ್ತಲಿನ ಮರಗಿಡಗಳಿಗೂ ವ್ಯಾಪಿಸಿತ್ತು. ಹೀಗೆ ಸುಟ್ಟ ಸಸಿಗಳೂ ಇವರ ಆರೈಕೆಯಿಂದ ಮತ್ತೆ ನಳನಳಿಸುತ್ತಿವೆ."ಕೇವಲ ಆರನೇ ತರಗತಿ ಓದಿರುವ ರಘು ಅವರ ಪರಿಸರ ಪ್ರೇಮ ಯಾವ ಪದವೀಧರರಿಗೂ ಕಡಿಮೆ ಇಲ್ಲದ್ದಾಗಿದೆ. ಅವರ ಕಾಳಜಿಯಿಂದ ಇಂದು ನಮ್ಮೂರಿನ ಗುಂಡು ತೋಪು ಹಸಿರು ಹೊದ್ದು ನಿಂತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ರಾಂಪುರದವರಾದ ಉಪನ್ಯಾಸಕ ವಿಜಯ್‌ ರಾಂಪುರ.

'ಎಷ್ಟೋ ದಿನ ಆತ ರಾತ್ರಿ 12ರವರೆಗೂ ತೋಫಿನಲ್ಲಿ ಉಳಿದು ಕೆಲಸ ಮಾಡಿದ್ದನ್ನು ಕಂಡಿದ್ದೇವೆ. ಗಾಡಿಯಲ್ಲಿ ನೀರು ತಂದು ಸಸಿಗೆ ಉಣಿಸಿದ್ದನ್ನು ನೋಡಿದ್ದೇವೆ. ಅವರಿವರ ಸಹಾಯ ಪಡೆದು ತೋಪಿಗೆ ದನಕರುಗಳನ್ನು ಬಿಡದಂತೆ ಡಂಗೂರ ಹೊಡೆಸಿದ್ದಾನೆ. ಪ್ರತಿ ಬೇಸಿಗೆ ಸಂದರ್ಭ ಅಲ್ಲಿನ ಕಳೆ ತೆಗೆದು ಬೆಂಕಿ ಹರಡದಂತೆ ಎಚ್ಚರ ವಹಿಸುತ್ತಾನೆ. ಸದ್ಯ ಗ್ರಾಮಸ್ಥರೆಲ್ಲ ಸೇರಿ ತೋಪಿನಲ್ಲಿನ ಒಂದು ಹಳೆಯ ಕೊಳವೆ ಬಾವಿಗೆ ಮೋಟಾರ್‌ ಬಿಡಿಸಿದ್ದಾರೆ. ಇದರಿಂದ ಗಿಡಗಳಿಗೆ ನೀರು ಪೂರೈಕೆಗೆ ಅನುಕೂಲ ಆಗಿದೆ’ ಎಂದು ಅವರು ವಿವರಿಸುತ್ತಾರೆ.

ರಘು ಸಸ್ಯ ಕೃಷಿ ಕೇವಲ ಗುಂಡು ತೋಪಿಗೆ ಸೀಮಿತ ಆಗಿಲ್ಲ. ಸುತ್ತಲಿನ ಕೆರೆ, ರಸ್ತೆ ಬದಿ ಹಾಗೂ ಸರ್ಕಾರಿ ಜಾಗಗಳಲ್ಲೂ ಅವರು ನೆಟ್ಟ ಸಸಿಗಳು ಎತ್ತರಕ್ಕೆ ಬೆಳೆಯತೊಡಗಿವೆ.

ರಘು ಅವರ ಶ್ರಮದಿಂದ ಇಂದು ನಮ್ಮೂರಿನ ಗುಂಡುತೋಪು ಹಸಿರಾಗಿ ಕಂಗೊಳಿಸುತ್ತಿದೆ. ಅವರ ಪರಿಸರ ಪ್ರೇಮ ನಮ್ಮೆಲ್ಲರಿಗೆ ಮಾದರಿ ಎಂದು ಉಪನ್ಯಾಸಕ ವಿಜಯ್‌ ರಾಂಪುರ ಸಂತಸ ವ್ಯಕ್ತಪಡಿಸಿದರು.

ನವಿಲು ಮೊಟ್ಟೆ ಮರಿಯಾದಾಗ: ಹೊಲಗಳಿಗೆ ಲಗ್ಗೆ ಇಡುವ ನವಿಲುಗಳು ಒಮ್ಮೊಮ್ಮೆ ಅಲ್ಲಿಯೇ ಮೊಟ್ಟೆ ಇಟ್ಟು ಬಿಟ್ಟು ಹೋಗುತ್ತವೆ. ಹೀಗೆ ಬಿಟ್ಟುಹೋದ ಮೊಟ್ಟೆಗಳನ್ನು ರಘು ಹೊಲದಿಂದ ತಂದು ಮನೆಯಲ್ಲಿನ ಕೋಳಿಗಳ ಜೊತೆ ಕಾವು ಕೊಡಿಸಿ ಮರಿ ಮಾಡಿಸಿದ್ದಾರೆ. ಹೀಗೆ ಮೂರ್ನಾಲ್ಕು ಬಾರಿ ನವಿಲು ಮರಿಗಳು ಜನ್ಮ ಪಡೆದಿವೆ. ದೊಡ್ಡದಾದ ಬಳಿಕ ಅವುಗಳು ತಾವಾಗಿಯೇ ಕಾಡಿನತ್ತ ಮುಖ ಮಾಡಿ ಓಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT