ಶನಿವಾರ, ಸೆಪ್ಟೆಂಬರ್ 18, 2021
21 °C
ರಂಜಾನ್‌ ಉಪವಾಸದ ಬಳಿಕ ಹಬ್ಬ ಆಚರಣೆ: ಶುಭಾಶಯಗಳ ವಿನಿಮಯ

ಈದ್ ಉಲ್‌ ಫಿತ್ರ್‌ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಂಜಾನ್ ಉಪವಾಸದ ಮುಕ್ತಾಯದ ಬಳಿಕ ಈದ್‌ ಉಲ್‌ ಫಿತ್ರ್‌ ಅನ್ನು ಮುಸ್ಲಿಮರು ಬುಧವಾರ ಸಂಭ್ರಮದಿಂದ ಆಚರಿಸಿದರು.

ಇಲ್ಲಿನ ಈದ್ಗಾ ಮೈದಾನದಲ್ಲಿ ಬೆಳಿಗ್ಗೆ 11ರ ಸುಮಾರಿಗೆ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಐಜೂರು, ಯಾರಬ್ ನಗರ, ಕುಮುಂದನ್ ಮೊಹಲ್ಲಾ, ಟಿಪ್ಪು ನಗರ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಈದ್ಗಾ ಮೈದಾನದತ್ತ ಹೆಜ್ಜೆ ಇಟ್ಟರು. ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಮೈದಾನವು ಭರ್ತಿಯಾಗಿ ಹೆದ್ದಾರಿಯ ಮೇಲೂ ಜನರು ಪ್ರಾರ್ಥನೆಗೆ ಕುಳಿತರು. ಅಲ್ಲಿಯೂ ಜಾಗ ಸಾಲದಾದಾಗ ಮಿನಿ ವಿಧಾನಸೌಧದ ಮುಂಭಾಗದಲ್ಲಿಯೂ ಕೆಲವರು ಪ್ರಾರ್ಥನೆ ಸಲ್ಲಿಸಿದರು.

ಜಗತ್ತಿನ ಒಳಿತಿಗೆ, ಶಾಂತಿಗೆ ಭಗವಂತ ಪ್ರತಿಯೊಬ್ಬರನ್ನೂ ಕರುಣಿಸಲಿ ಎಂದು ಎಲ್ಲರ ಸಮ್ಮುಖದಲ್ಲಿ ಧರ್ಮಗುರುಗಳು ಪ್ರಾರ್ಥಿಸಿದರು. ನಂತರ ಕುರಾನ್‌ ಪಠಣ ನಡೆಯಿತು. ನೂರಾರು ಸಂಖ್ಯೆಯಲ್ಲಿ ಮಕ್ಕಳೂ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರ್ಥನೆಯ ಸಂದರ್ಭ ಬೆಂಗಳೂರು–ಮೈಸೂರು ಹೆದ್ದಾರಿಯೂ ಸೇರಿದಂತೆ ವಿವಿಧೆಡೆ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು.

ಶುಭಾಶಯ ವಿನಿಮಯ: ಪ್ರತಿ ಮುಸಲ್ಮಾನರ ಮನೆಯಲ್ಲಿಯೂ ಹಬ್ಬದ ಸಂಭ್ರಮವು ಮನೆ ಮಾಡಿತ್ತು. ಬಡವ–ಶ್ರೀಮಂತರೆನ್ನದೇ ಎಲ್ಲರೂ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಹಬ್ಬ ಆಚರಣೆಯ ನಿಯಮದಂತೆ ಮನೆಯ ಪ್ರತಿ ಸದಸ್ಯನ ಹೆಸರಿನಲ್ಲಿಯೂ ಬಡವರಿಗೆ ಫಿತ್ರ್‌ ಝಕಾತ್ ಹೆಸರಿನ ದಾನ ವಿತರಿಸಲಾಯಿತು.

ಪ್ರತಿಯೊಬ್ಬರು ಇನ್ನೊಬ್ಬರ ಮನೆಗಳಿಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು. ನೆರೆಹೊರೆಯವರು, ಬಂಧುಗಳು, ಗೆಳೆಯರಿಗೂ ಶುಭಾಶಯ ಹೇಳಿದರು. ಮನೆಗಳಲ್ಲಿ ಮಧ್ಯಾಹ್ನ ಹಬ್ಬದೂಟದ ವ್ಯವಸ್ಥೆ ಇತ್ತು. ಬಿಡದಿಯ ಈದ್ಗಾ ಮೈದಾನದಲ್ಲಿಯೂ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು