ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿ ನೋಂದಣಿ ಕಗ್ಗಂಟು

ಬೆಂಬಲ ಬೆಲೆಗೆ ಮಾರಲು ರೈತರ ಆಸಕ್ತಿ: ಸರ್ಕಾರದ ‘ಮಿತಿ’ಗೆ ಬೇಸರ
Last Updated 8 ಮೇ 2022, 4:11 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಇನ್ನೂ ಕಗ್ಗಂಟಾಗಿದ್ದು, ಸರ್ಕಾರ ಪದೇ ಪದೇ ಮಿತಿ ಹೇರುತ್ತಿರುವುದಕ್ಕೆ ರೈತರಿಂದ ಅಸಮಾಧಾನ ವ್ಯಕ್ತವಾಗಿದೆ.

ಈ ವರ್ಷದ ಖರೀದಿಯನ್ನು ಸರ್ಕಾರ ಈಗಾಗಲೇ ಎರಡು ಬಾರಿ ಬಂದ್ ಮಾಡಿದ್ದು, ಮತ್ತೆ ಮೂರನೇ ಬಾರಿ ಖರೀದಿಗೆ ಮುಂದಾಗಿದೆ. ಆದರೆ, ಇನ್ನಷ್ಟೇ ಅಧಿಕೃತ ಆದೇಶ ಹೊರಬೀಳಬೇಕಿದೆ. ರೈತರು ಖರೀದಿ ಕೇಂದ್ರಗಳಿಗೆ ಅಲೆಯುವುದು ಸಾಮಾನ್ಯವಾಗಿದೆ. ರಾಜ್ಯ ಸರ್ಕಾರ ಇದೇ ವರ್ಷ ಜನವರಿಯಲ್ಲಿ ರಾಜ್ಯದ ರೈತರಿಂದ 2.10 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿ ಮಾಡಿತ್ತು. ಏಪ್ರಿಲ್‌ನಲ್ಲಿ ಮತ್ತೆ ನೋಂದಣಿ ಆರಂಭಿಸಿ 1.14 ಲಕ್ಷ ಟನ್‌ ಖರೀದಿ ನಡೆಯಿತು. ಇದೀಗ ಮತ್ತೆ 2 ಲಕ್ಷ ಟನ್‌ ಖರೀದಿ ಮಾಡುವುದಾಗಿ ಹೇಳಿದೆ. ಆದರೆ, ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ.

ರಾಮನಗರ ಜಿಲ್ಲೆ ರಾಗಿಯ ಕಣಜ ಎಂದೇ ಗುರುತಿಸಲ್ಪಟ್ಟಿದ್ದು, ಕಳೆದ ಮುಂಗಾರಿನಲ್ಲಿ ಇಲ್ಲಿ 70 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯಲಾಗಿದೆ. ಅತಿವೃಷ್ಟಿ ನಡುವೆಯೂ ತಕ್ಕಮಟ್ಟಿಗೆ ಬೆಳೆ ರೈತರ ಮನೆ ತುಂಬಿದೆ. ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಒಪ್ಪದ ರೈತರು ಮನೆಯಲ್ಲೇ ದಾಸ್ತಾನು ಇಟ್ಟುಕೊಂಡು ಉತ್ತಮ ಬೆಲೆಗೆ ಕಾಯತೊಡಗಿದ್ದಾರೆ.

‘ರಾಮನಗರ ಜಿಲ್ಲೆಯಲ್ಲಿ ರೈತರ ನೋಂದಣಿ ಕಡಿಮೆ ಆಗಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಮೂರನೇ ಹಂತದಲ್ಲಾದರೂ ಜಿಲ್ಲೆಗೆ ಆದ್ಯತೆ ಸಿಗಬೇಕು’ ಎಂಬುದುಜಿಲ್ಲಾ ರೈತ ಸಂಘದ ಅಧ್ಯಕ್ಷಚೀಲೂರು ಮುನಿರಾಜು ಅವರ ಒತ್ತಾಯ.

ಮುಕ್ತ ಮಾರುಕಟ್ಟೆ ದರ: ಸರ್ಕಾರವು ರೈತರಿಂದ ಪ್ರತಿ ಕ್ವಿಂಟಲ್‌ಗೆ ₹3,377 ದರದಲ್ಲಿ ರೈತರಿಂದ ರಾಗಿ ಖರೀದಿ ಮಾಡುತ್ತಿದೆ. ಆದರೆ, ಸದ್ಯ ಮುಕ್ತ ಮಾರುಕಟ್ಟೆಯಲ್ಲಿ ರಾಗಿಗೆ ₹2600–2,800 ದರ ಇದೆ. ಹೀಗಾಗಿ, ಬೆಂಬಲ ಬೆಲೆಯಲ್ಲಿ ಕೊಟ್ಟರೆ ಲಾಭ ಹೆಚ್ಚು. ಆದರೆ, ಸರ್ಕಾರದ ನಿರ್ಧಾರಗಳಿಂದ ಅರ್ಧದಷ್ಟು ರೈತರು ಉತ್ಪನ್ನ ಮಾರಲು ಸಾಧ್ಯವಾಗಿಲ್ಲ.

‘ಬೆಂಬಲ ಬೆಲೆ ಯೋಜನೆ ಅಡಿ ಈ ವರ್ಷ ಮೂರನೇ ಬಾರಿ ರಾಗಿ ಖರೀದಿಗೆ ಇನ್ನೂ ಅಧಿಕೃತ ಆದೇಶ ಬಂದಿಲ್ಲ. ಬಂದ ನಂತರ ನೋಂದಣಿ ಆರಂಭಿಸಲಾಗುವುದು’ ಎಂದು ಕೆಎಸ್‌ಸಿಎಫ್‌ಸಿ ಜಿಲ್ಲಾ ವ್ಯವಸ್ಥಾಪಕಜಯಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT