ಗುರುವಾರ , ನವೆಂಬರ್ 14, 2019
19 °C

‘ನಡೆ ನುಡಿಗಳೇ ಧರ್ಮದ ಸಂಕೇತ’

Published:
Updated:
Prajavani

ಚನ್ನಪಟ್ಟಣ: ‘ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ಮೀಸಲಿಡಬೇಕು’ ಎಂದು ಬೇವೂರು ಮಲ್ಲಿಕಾರ್ಜುನ ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ವಿರುಪಾಕ್ಷಿಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದ.

‘ಸದಾ ಉತ್ತಮ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು. ಧಾರ್ಮಿಕ ಆಚರಣೆಗಳು ಉತ್ತಮ ಸಂಸ್ಕಾರ ಕಲಿಸುತ್ತವೆ. ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯ ಹಾಗೂ ಧರ್ಮ ಸಭೆಯು ಸಮಯೋಚಿತವಾಗಿದೆ. ಗ್ರಾಮಾಭಿವೃದ್ಧಿ ಸಂಸ್ಥೆಯು ಕೇವಲ ಪೂಜೆ ಪುನಸ್ಕಾರಗಳಿಗೆ ಸೀಮಿತವಾಗಿಲ್ಲ. ಮದ್ಯವರ್ಜನ ಶಿಬಿರ, ಮಹಿಳಾ ಸ್ವಸಹಾಯ ಸಂಘಗಳ ಬಲವರ್ಧನೆ, ಆರ್ಥಿಕ ನೆರವು, ತರಬೇತಿ ಕಾರ್ಯಾಗಾರ ಮೊದಲಾದ ಜನಪರ ಕಾರ್ಯಗಳನ್ನು ಹಾಕಿಕೊಳ್ಳುತ್ತಿದೆ. ಇದು ಪ್ರಶಂಸನೀಯ’ ಎಂದರು.

ಯೋಜನೆಯ ಪ್ರಾದೇಶಿಕ ನಿರ್ದೇಶಕ ಗಂಗಾಧರ ಪೈ ಮಾತನಾಡಿ, ‘ನಡೆ ನುಡಿಗಳೇ ಧರ್ಮದ ಸಂಕೇತ. ಅದನ್ನು ಅರ್ಥ ಮಾಡಿಕೊಂಡು ಸಮಾಜದಲ್ಲಿ ನಡೆ, ನುಡಿ ಶುದ್ಧವಾಗಿಟ್ಟುಕೊಳ್ಳಬೇಕು. ಧರ್ಮಾಚರಣೆಯಿಂದ ಸುಖ ಸಂಪತ್ತು ಲಭಿಸುತ್ತದೆ. ಸತ್ಯ ನಾರಾಯಣ ಪೂಜೆ ಮಾಡುವುದರಿಂದ ಇಷ್ಟಾರ್ಥಗಳು ಈಡೇರುತ್ತವೆ’ ಎಂದರು.

‘ಜೀವನದಲ್ಲಿ ಧಾರ್ಮಿಕತೆ ರೂಢಿಸಿಕೊಂಡರೆ ಆಚಾರ ವಿಚಾರ, ನಡೆ ನುಡಿಗಳು ಉತ್ತಮವಾಗಿರುತ್ತವೆ. ಸಂಸ್ಕೃತಿ ಸಂಸ್ಕಾರ ಬೆಳೆಸುತ್ತವೆ. ಶಾಂತಿ, ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಪ್ರತಿಯೊಬ್ಬರೂ ಸಮಾನತೆಯಿಂದ ಇದ್ದಲ್ಲಿ ಎಲ್ಲ ಕುಟುಂಬ, ಎಲ್ಲ ಗ್ರಾಮಗಳು ಸಹ ಉತ್ತಮ ರೀತಿಯಿಂದ ಇರುತ್ತವೆ. ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳಿಗೆ ಸದಸ್ಯರಾಗುವ ಮೂಲಕ ಮಹಿಳೆಯರು ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕು’ ಎಂದರು.

ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆಯಲ್ಲಿ 86 ವೃತಧಾರಿಗಳು ಪಾಲ್ಗೊಂಡಿದ್ದರು. ಜಿಲ್ಲಾ ಯೋಜನಾಧಿಕಾರಿ ಬಾಬುನಾಯ್ಕ, ತಾಲ್ಲೂಕು ಯೋಜನಾಧಿಕಾರಿ ಪಿ.ಹರೀಶ್, ವಲಯದ ಮೇಲ್ವಿಚಾರಕ ನವೀನ್ ಶೆಟ್ಟಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)