ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇಷ್ಮೆಗೂಡು ಮಾರುಕಟ್ಟೆ ಕಾಮಗಾರಿ ಶೀಘ್ರ ಆರಂಭ’

ಗಣರಾಜ್ಯೋತ್ಸವ ಸಂಭ್ರಮ; ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸಿಎಂ ಅಶ್ವತ್ಥನಾರಾಯಣರಿಂದ ಧ್ವಜಾರೋಹಣ
Last Updated 26 ಜನವರಿ 2021, 13:17 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣದ ಪೊಲೀಸ್ ತರಬೇತಿ ಕೇಂದ್ರದ ಹತ್ತಿರವಿರುವ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ರೇಷ್ಮೆಗೂಡು ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ₨75 ಕೋಟಿ ವ್ಯಯಿಸಲಾಗುತ್ತಿದ್ದು, ಶೀಘ್ರ ಮಾರುಕಟ್ಟೆ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ 72ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಕಳೆದ ಒಂದೂವರೆ ವರ್ಷಗಳ ಆಡಳಿತದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ನೀರಾವರಿ ಸೇರಿದಂತೆ ಅನೇಕ ವಲಯಗಳಲ್ಲಿ ರಾಜ್ಯವು ಮಹತ್ವದ ಸಾಧನೆ ಮಾಡಿದೆ. ಪ್ರಧಾನ ಮಂತ್ರಿಗಳ ಆಶಯದಂತೆ ರಾಜ್ಯದಲ್ಲೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯ ಒಟ್ಟು 1.16 ಲಕ್ಷ ರೈತರಿಗೆ ಆರು ಕಂತುಗಳಲ್ಲಿ ₹ 130.59 ಕೋಟಿ ಮತ್ತು ರಾಜ್ಯ ಸರ್ಕಾರದ ಪಾಲಾದ ₹ 44.20 ಕೋಟಿ ಸೇರಿದಂತೆ ಒಟ್ಟಾರೆ ₹ 174.79 ಕೋಟಿ ವರ್ಗಾವಣೆ ಮಾಡಲಾಗಿದೆ. ಹಣ ವರ್ಗಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೇಷ್ಮೆ ಬೆಲೆಯಲ್ಲಿ ಇಳಿಕೆಯಾದರೂ ಸಹ ಜಿಲ್ಲೆಯಲ್ಲಿ 2020ರ ಡಿಸೆಂಬರ್ ಅಂತ್ಯಕ್ಕೆ 193.277 ಲಕ್ಷ ಮಿಶ್ರತಳಿ ಮತ್ತು 10.68 ಲಕ್ಷಗಳ ದ್ವಿತಳಿ ಮೊಟ್ಟೆಗಳನ್ನು ಚಾಕಿ ಮಾಡಿ 14,146 ಮೆಟ್ರಿಕ್‌ ಟನ್ ಮಿಶ್ರತಳಿ ರೇಷ್ಮೆ ಗೂಡು ಮತ್ತು 748.132 ಮೆಟ್ರಿಕ್‌ ಟನ್ ದ್ವಿತಳಿ ರೇಷ್ಮೆ ಗೂಡನ್ನು ಉತ್ಪಾದಿಸಲಾಗಿದೆ. ಜಿಲ್ಲೆಯಲ್ಲಿ ಪ್ರತಿ ದಿನ ಸುಮಾರು 60ರಿಂದ 70 ಟನ್‌ನಷ್ಟು ಕಚ್ಚಾ ರೇಷ್ಮೆ ಉತ್ಪಾದನೆಯಾಗುತ್ತಿದೆ ಎಂದು ವಿವರಿಸಿದರು.

ನೀಲನಕ್ಷೆ ಸಿದ್ಧ: ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದಲ್ಲಿ ಮಾವು ಸೇರಿದಂತೆ ವಿವಿಧ ಹಣ್ಣುಗಳ ಸಂಸ್ಕರಣ ಘಟಕದ ನೀಲನಕ್ಷೆ ಸಿದ್ಧವಾಗಿದ್ದು, ಆಸಕ್ತರಿಂದ ಅರ್ಜಿ ಕರೆಯಲಾಗಿದೆ. ಆರ್.ಕೆ.ವಿ.ಕೆ-ರಫ್ತಾರ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ₹ 10 ಕೋಟಿ ಅನುದಾನ ಸಿಗಲಿದೆ. ಮಾವು ಸಂಸ್ಕರಣ ಘಟಕದ ಕೆಲಸವನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದರು.

ಉತ್ಕೃಷ್ಟ ಕೇಂದ್ರ ಸ್ಥಾಪನೆ: ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ರೇಷ್ಮೆ ಕೃಷಿ ಕ್ಷೇತ್ರದಲ್ಲಿ ರೈತ ಸಮಗ್ರ ಹಿತದೃಷ್ಟಿಯಿಂದ 30 ಎಕರೆ ಪ್ರದೇಶದಲ್ಲಿ ಸಮಗ್ರ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ ಸ್ಥಾಪನೆಗೆ ಯೋಜನೆ ಹಮ್ಮಿಕೊಳ್ಳಲಾಗಿದೆ. ಆತ್ಮ ನಿರ್ಭರ ಭಾರತ ಕಾರ್ಯಕ್ರಮದಡಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯಡಿ ಒಂದು ಜಿಲ್ಲೆ, ಒಂದು ಉತ್ಪನ್ನದಡಿ ರಾಮನಗರ ಜಿಲ್ಲೆಯಲ್ಲಿ ಮೊದಲನೇ ಅದ್ಯತೆಯಲ್ಲಿ ತೆಂಗು ಬೆಳೆಯನ್ನು ಆಯ್ಕೆಮಾಡಿದೆ. ಪ್ರತಿ ವೈಯಕ್ತಿಕ ಕಿರು ಆಹಾರ ಸಂಸ್ಕರಣಾ ಘಟಕಕ್ಕೆ ₹10 ಲಕ್ಷ ಗರಿಷ್ಠ ಮಿತಿಯೊಂದಿಗೆ ಅರ್ಹ ಯೋಜನಾ ವೆಚ್ಚದ ಶೇ 35 ರಷ್ಟು ಮೌಲ್ಯದ ಸಾಲ-ಸಂಪರ್ಕವಿರುವ ಬಂಡವಾಳಕ್ಕೆ ಸಹಾಯಧನ ಒದಗಿಸಲಾಗುತ್ತಿದೆ ಎಂದರು.

ಕುಡಿಯುವ ನೀರು: ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆಯಡಿ ₹ 210 ಕೋಟಿ ವೆಚ್ಚದಲ್ಲಿ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹಾಗೂ ಇತರೆ 298 ಹಳ್ಳಿಗಳಿಗೆ, ₹ 4 ಕೋಟಿ ವೆಚ್ಚದಲ್ಲಿ ಸಾತನೂರು ಹಾಗೂ ಇತರೆ 29 ಹಳ್ಳಿಗಳಿಗೆ ಹಾಗೂ ₹ 2 ಕೋಟಿ ವೆಚ್ಚದಲ್ಲಿ ಹಾರೋಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೆರೆಗಳಿಗೆ ನೀರು: ಕನಕಪುರ ತಾಲ್ಲೂಕಿನ ಗರಳಾಪುರ ಹಾಗೂ ಇನ್ನಿತರ 12 ಕೆರೆಗಳಿಗೆ ₹ 70 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಇದ್ದ ಭೂಸ್ವಾಧೀನದ ತೊಡಕನ್ನು ನಿವಾರಣೆ ಮಾಡಲಾಗಿದೆ. ಮಾಗಡಿ ತಾಲ್ಲೂಕಿನ 66 ಕೆರೆಗಳನ್ನು ತುಂಬಿಸಿ 211 ಗ್ರಾಮಗಳಿಗೆ ನೀರು ಪೂರೈಸುವ ಶ್ರೀರಂಗ ಏತ ನೀರಾವರಿ ಯೋಜನೆಗೆ ಒಟ್ಟು ₹ 450 ಕೋಟಿ ವೆಚ್ಚ ಆಗಲಿದೆ. ಈಗಾಗಲೇ ₹ 277 ಕೋಟಿ ಬಿಡುಗಡೆಯಾಗಿದೆ. ಇದುವರೆಗೆ ₹ 175 ಕೋಟಿ ವೆಚ್ಚ ಮಾಡಲಾಗಿದ್ದು, ಪ್ರಸಕ್ತ ವರ್ಷದ ಅಂತ್ಯದೊಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಚನ್ನಪಟ್ಟಣ ತಾಲ್ಲೂಕಿನಲ್ಲಿ ಗರಕಹಳ್ಳಿ, ಕಣ್ವ ಕುಡಿಯುವ ನೀರಿನ ಯೋಜನೆ ಮೂಲಕ 120 ಕೆರೆ ತುಂಬಿಸಲಾಗುತ್ತಿದೆ. ಜೊತೆಗೆ ₹ 40 ಕೋಟಿ ವೆಚ್ಚದಲ್ಲಿ ಕಣ್ವ ನಾಲೆ ದುರಸ್ತಿ ನಡೆದಿದೆ. ₹ 110 ಕೋಟಿ ವೆಚ್ಚದಲ್ಲಿ ಬೈರಮಂಗಲ ಕೆರೆಯ ಪುನಶ್ಚೇತನ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು ಈ ಪೈಕಿ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ₹ 252 ಕೋಟಿ ವೆಚ್ಚದಲ್ಲಿ ನಾರಾಯಣಪುರ, ಗರಳಪುರ ಮತ್ತು ಸಾತನೂರು ಏತ ನೀರವಾರಿ ಯೋಜನೆಗಳಿಂದ ಕೆರೆ ತುಂಬಿಸುವ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ಉಪಮುಖ್ಯಮಂತ್ರಿ ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಎನ್‌. ಅಶೋಕ್, ಉಪಾಧ್ಯಕ್ಷೆ ಡಿ.ಎಚ್. ಜಯರತ್ನಾ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮುರಳೀಧರ್, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿ.ಪಂ. ಸಿಇಒ ಇಕ್ರಂ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಸ್. ಗಿರೀಶ್‌ ಇದ್ದರು.

ಮೇಕೆದಾಟು: ಶೀಘ್ರ ಕೇಂದ್ರದ ಅನುಮೋದನೆ

ಜಿಲ್ಲೆಯಲ್ಲಿ ಮೇಕೆದಾಟು ಯೋಜನೆಯನ್ನು ಶೀಘ್ರವೇ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಪ್ರಾರಂಭಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿ ಲಭ್ಯವಿರುವ ವಿವಿಧ ಜಲ ಮೂಲಗಳಿಂದ ಶಾಶ್ವತ ಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೂ ಪೂರೈಸಲು ಒತ್ತು ನೀಡಲಾಗಿದೆ. ಇದಕ್ಕಾಗಿ ₹ 250 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳು ನಡೆದಿವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ನಾಲ್ಕು ತಾಲ್ಲೂಕಿಗೆ ನೀರು: ಕಾವೇರಿ ನದಿಯ ಸತ್ತೇಗಾಲ ಅಣೆಕಟ್ಟೆಯಿಂದ ಗುರುತ್ವಾಕರ್ಷಣೆ ತಂತ್ರಜ್ಞಾನದ ಮೂಲಕ ಇಗ್ಗಲೂರು ಬ್ಯಾರೇಜಿಗೆ ನೀರು ಹರಿಸಿ, ಅಲ್ಲಿಂದ ಮೊಗೇನಹಳ್ಳಿ ಕೆರೆ, ಕಣ್ವ ಮತ್ತು ಮಂಚನಬೆಲೆ ಜಲಾಶಯಗಳಿಗೆ ಹಾಗೂ ವೈ.ಜಿ.ಗುಡ್ಡ ಕೆರೆಗೆ ನೀರನ್ನು ತುಂಬಿಸಲಾಗುವುದು. ನಾಲ್ಕು ತಾಲ್ಲೂಕುಗಳಿಗೆ ನೀರೊದಗಿಸುವ ಈ ಯೋಜನೆಯನ್ನು ₹ 540 ಕೋಟಿ ವೆಚ್ಚದಲ್ಲಿ ಕಾರ್ಯಗತ ಮಾಡಲಾಗುತ್ತಿದೆ. ಈಗಾಗಲೇ ಶೇ. 50ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು ಪ್ರಸಕ್ತ ವರ್ಷದ ಅಂತ್ಯಕ್ಕೆ ಈ ಯೋಜನೆ ಪೂರ್ಣಗೊಳ್ಳಲಿದೆ. ಈ ಮೂಲಕ ಜಿಲ್ಲೆಯ ಎಲ್ಲ ಮನೆಗಳಿಗೂ ಶಾಶ್ವತವಾಗಿ ನದಿ ನೀರನ್ನು ಪೂರೈಕೆ ಮಾಡಲಾಗುವುದು ಎಂದರು.

ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಸಜ್ಜು

250 ಹಾಸಿಗೆ ಸಾಮರ್ಥ್ಯದ ಹೊಸ ಜಿಲ್ಲಾ ಆಸ್ಪತ್ರೆ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಅದಕ್ಕೆ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಆದ್ಯತೆ ಮೇರೆಗೆ ಒದಗಿಸಲು ಕ್ರಮ ವಹಿಸಲಾಗಿದೆ. ಈಗಿನ 100 ಹಾಸಿಗೆಗಳ ಜಿಲ್ಲಾಸ್ಪತ್ರೆಯನ್ನು ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗುವುದು. ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕಿನಲ್ಲಿ 50 ಹಾಸಿಗೆಯುಳ್ಳ ತಾಲ್ಲೂಕು ಆಸ್ಪತ್ರೆಗಳನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿಸಿ ಉನ್ನತೀಕರಿಸಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

ರಾಮನಗರ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 8,405 ಕೋವಿಡ್ ಯೋಧರಿಗೆ ಇದೇ 16 ರಿಂದ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಇದುವರೆಗೆ ಜಿಲ್ಲೆಯಲ್ಲಿರುವ 87 ಕೇಂದ್ರಗಳಲ್ಲಿ ಒಟ್ಟು 5649 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು. ಶೇ. 67 ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,60,456 ಗಂಟಲು ದ್ರವವನ್ನು ಪರೀಕ್ಷೆ ಮಾಡಿದ್ದು, ಈ ಪೈಕಿ 7,745 ಪ್ರಕರಣಗಳು ಕೋವಿಡ್-19 ಪಾಸಿಟಿವ್ ಆಗಿದೆ. ಈ ಪೈಕಿ ಚಿಕಿತ್ಸೆಯಿಂದ 7658 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 10 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಪಥ ಸಂಚಲನಕ್ಕೆ ಸೀಮಿತ

ಕೋವಿಡ್‌ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವವು ಸರಳವಾಗಿ ನಡೆಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಇರಲಿಲ್ಲ. ವಿವಿಧ ಸಲವತ್ತುಗಳ ವಿತರಣೆ, ಗೌರವ ಕಾರ್ಯಕ್ರಮವೂ ಇರಲಿಲ್ಲ. ಪೊಲೀಸ್ ಮತ್ತು ಗೃಹರಕ್ಷಕ ತಂಡಗಳು ಪಥ ಸಂಚಲನ ನಡೆಸಿ ಅತಿಥಿಗಳಿಗೆ ಗೌರವ ಸಮರ್ಪಣೆ ಮಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT