ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಶು ಮರಣ ತಡೆಗೆ ಜಾಗೃತಿ ಅಗತ್ಯ’

ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭೇದಿ ನಿಯಂತ್ರಣ ಪಾಕ್ಷಿಕಕ್ಕೆ ಚಾಲನೆ
Last Updated 5 ಜೂನ್ 2019, 15:25 IST
ಅಕ್ಷರ ಗಾತ್ರ

ಕನಕಪುರ: ‘ಶಿಶುಮರಣ ಪ್ರಮಾಣ ತಡೆಗಟ್ಟುವ ಸಲುವಾಗಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕವನ್ನು ಅಂಗನವಾಡಿಗಳಲ್ಲಿ ಇದೇ 17 ರವರೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಆರ್.ಎನ್. ಲಕ್ಷ್ಮೀಪತಿ ಹೇಳಿದರು.

ಇಲ್ಲಿನ ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಲ್ಲಿ ಭೇದಿಯಿಂದಾಗಿ ಸಾವು ಸಂಭವಿಸಬಹುದು. ಇದರ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಇಂತಹ ಸಮಸ್ಯೆಗಳು ಕಂಡು ಬಂದಾಗ ಕೂಡಲೇ ವೈದ್ಯರ ಬಳಿ ತೋರಿಸಬೇಕು ಎಂದರು.

ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಈ ರೀತಿಯ ದುಷ್ಪರಿಣಾಮಗಳು ಬೀರಿದಾಗ ಶೇ 66 ಮಂದಿಯನ್ನು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಿಸಲಾಗುತ್ತಿದೆ. ಇದನ್ನು ಶೇ 100 ರಷ್ಟು ತರಬೇಕಾದ ಅವಶ್ಯಕತೆ ಇದೆ. ಈ ಅತಿಸಾರ ಭೇದಿಯಿಂದ ದೇಶದಲ್ಲಿ ಪ್ರತಿವರ್ಷ ಸುಮಾರು 1.2 ಲಕ್ಷ ಶಿಶುಗಳು ಮರಣ ಹೊಂದುತ್ತಿವೆ. ಈ ಮರಣ ಪ್ರಮಾಣ ಕಡಿಮೆ ಮಾಡಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾತ್ರ ಇಂತಹ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಿಲ್ಲ. ಇದರ ಜತೆಗೆ ಶಿಕ್ಷ ಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಸಹ ಕೈ ಜೋಡಿಸಬೇಕು. ಶುಚಿತ್ವ ಕಾಪಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ತಿಳಿಸಿದರು.

‘ಸ್ವಚ್ಛತೆ ಕಾಪಾಡಿಕೊಳ್ಳದೇ ಇರುವುದು ಸರಿಯಾಗಿ ಕೈ ತೊಳೆಯದೇ ಇರುವುದರಿಂದಲೇ ಶೇ 60ಕ್ಕೂ ಹೆಚ್ಚು ಕಾಯಿಲೆಗಳು ಬರುತ್ತವೆ. ಹಾಗಾಗಿ ಕೈ ತೊಳೆಯುವ ಕೆಲಸ ಮೊದಲು ನಮ್ಮಿಂದಲೇ ಪ್ರಾರಂಭವಾಗಬೇಕು. ಅದು ನಮ್ಮ ಕುಟುಂಬದ ಮೇಲೆ ನಂತರ ಸಮಾಜದಲ್ಲಿ ಎಲ್ಲರೂ ಅದನ್ನು ಅಳವಡಿಸಿಕೊಳ್ಳುವಂತಾಗುತ್ತದೆ’ ಎಂದರು.

ಜಿಲ್ಲೆಯಲ್ಲಿ ಐದು ವರ್ಷದ ಒಳಗಿನ 82,583 ಮಕ್ಕಳಿದ್ದಾರೆ. ಮುಖ್ಯವಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕೈ ತೊಳೆಯುವ ಅಭ್ಯಾಸ ಮಾಡಿಸಬೇಕು. ಜತೆಗೆ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಅಷ್ಟೇ ಅಲ್ಲದೆ ಅಡುಗೆ ಸಿಬ್ಬಂದಿ ಮುಖ್ಯವಾಗಿ ಕೈ ತೊಳೆದುಕೊಂಡು ಅಡುಗೆ ಕಾರ್ಯಗಳನ್ನು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಮಾತನಾಡಿ, ಮಕ್ಕಳು ಆರೋಗ್ಯವಂತರಾಗಿದ್ದಾಗ ಮಾತ್ರ ಹೆಚ್ಚು ಜ್ಞಾನ ಪಡೆಯಲು ಸಾಧ್ಯ. ಈ ಔಚಿತ್ಯವನ್ನು ಅರಿತು ಶಿಕ್ಷಕರು ಕೆಲಸ ಮಾಡಬೇಕು. ಶಿಕ್ಷಕರು ಮಕ್ಕಳ ಶಿಕ್ಷಣದ ಜತೆಗೆ ಆರೋಗ್ಯದ ಮೇಲೂ ಹೆಚ್ಚು ಕಾಳಜಿ ವಹಿಸಬೇಕು ಎಂದರು.

ಕನಕಪುರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT