ಶುಕ್ರವಾರ, ಆಗಸ್ಟ್ 19, 2022
22 °C
ರೇಷ್ಮೆ ಮೊಟ್ಟೆಗಳಿಗೆ ಕೀಟಬಾಧೆ; ಉತ್ಪಾದನೆ ಕುಸಿತದ ಆತಂಕ

ರಾಮನಗರ | ಫೆಬ್ರಿನ್‌ ಸೋಂಕು ನಿಯಂತ್ರಣಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಹರಡುತ್ತಿರುವ ಗಂಟು ರೋಗ ನಿಯಂತ್ರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಜುಲೈ ಮೊದಲ ವಾರದಿಂದ ರೇಷ್ಮೆ ಮೊಟ್ಟೆ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ನೋಂದಾಯಿತ ರೇಷ್ಮೆ ಮೊಟ್ಟೆ ಉತ್ಪಾದಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಿ.ಮಹೇಂದ್ರ ಹೇಳಿದರು.

‘ರೇಷ್ಮೆ ಮೊಟ್ಟೆಗಳಿಗೆ ಮಾರಕವಾದ ಫೆಬ್ರಿನ್ ಸೋಂಕು ಹರಡುತ್ತಿದೆ. ಈ ಬಗ್ಗೆ ನಮ್ಮ ಸಂಘ ಹಾಗೂ ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಹಲವಾರು ಬಾರಿ ಪತ್ರ ಬರೆದು ಗಮನ ಸೆಳೆಯಲಾಗಿದೆ. ಆದರೆ ಸ್ಥಳೀಯ ಅಧಿಕಾರಿಗಳು ಕೊಟ್ಟಿರುವ ಸುಳ್ಳು ಮಾಹಿತಿಯನ್ನು ಆಧರಿಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನು 8-9 ತಿಂಗಳಲ್ಲಿ ರೇಷ್ಮೆ ಕೃಷಿ ಉದ್ಯಮ ಸಂಪೂರ್ಣ ಕುಸಿಯಲಿದೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಕಳೆದ ವರ್ಷ ಆಗಸ್ಟ್ ನಲ್ಲಿ ರೇಷ್ಮೆ ಉತ್ಪಾದನಾ ಕ್ಷೇತ್ರಗಳಲ್ಲಿ ಈ ಸೋಂಕು ಪತ್ತೆಯಾಗಿತ್ತು. ನವೆಂಬರ್, ಡಿಸೆಂಬರ್‌ನಲ್ಲಿ ಸೋಂಕು ಹೆಚ್ಚು ವ್ಯಾಪಿಸಿತ್ತು. ಬಿತ್ತನೆ ಪ್ರದೇಶಗಳಲ್ಲಿ ಚಿಟ್ಟೆ ಪರೀಕ್ಷೆ, ಸೋಂಕು ನಿವಾರಣಾ ಕ್ರಮಗಳನ್ನು ಅನುಸರಿಸುವುದು, ನೂಲು ಬಿಚ್ಚಾಣಿಕೆಗೆ ಹೋಗುವ ಗೂಡಿಗೆ ಹಬೆ ನೀಡುವ ಕ್ರಮ, ಸೋಂಕು ಹತ್ತಿರುವ ಮೊಟ್ಟೆಗಳ ನಿರ್ಮೂಲನೆ ಕ್ರಮಗಳನ್ನು ಅನುಸರಿಸಬೇಕಾಗಿತ್ತು. ವಿಜ್ಞಾನಿಗಳು ಮತ್ತು ತಜ್ಞರ ನೇತೃತ್ವದಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿತ್ತು. ಆದರೆ ಅಧಿಕಾರಿಗಳು ಇದ್ಯಾವುದರ ಬಗ್ಗೆ ಗಂಭೀರವಾಗಿ ಚಿಂತಿಸಲೇ ಇಲ್ಲ’ ಎಂದು ಅವರು ಆರೋಪಿಸಿದರು.

‘ಈ ಸೋಂಕು ಈಗಾಗಲೇ ಚೀನಾ, ಇಟಲಿ, ಫ್ರಾನ್ಸ್ ಮೊದಲಾದ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡಿ ಆ ರಾಷ್ಟ್ರಗಳಲ್ಲಿ ರೇಷ್ಮೆ ಉದ್ಯಮ ನಾಶವಾಗಿದೆ. ಚೀನಾದಿಂದ ಭಾರತಕ್ಕೆ ರೇಷ್ಮೆ ಆಮದಾಗುತ್ತಿಲ್ಲ. ಇದೇ ಕಾರಣಕ್ಕೆ ಸ್ಥಳೀಯವಾಗಿ ರೇಷ್ಮೆ ಗೂಡು ಪ್ರತಿ ಕೆ.ಜಿ.ಗೆ ₹800ರವರೆಗೆ ಬೆಲೆ ದೊರೆಯುತ್ತಿದೆ. ಆದರೆ ಇದೀಗ ಫೆಬ್ರಿನ್ ಸೋಂಕು ಹರಡುತ್ತಿದ್ದು, ನಿಯಂತ್ರಿಸದಿದ್ದರೆ ಇನ್ನು ಇಡೀ ಉದ್ಯಮ ನಾಶವಾಗಲಿದೆ’ ಎಂದು ಅವರು ಎಚ್ಚರಿಸಿದರು.

ನಾಗರಾಜು, ಸಯ್ಯದ್‌ ಇಮ್ರಾನ್, ಶಿವಕುಮಾರ್, ಕೃಷ್ಣಪ್ಪ, ಗಣೇಶ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.