ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸ್ಪಂದಿಸಿ: ತುಂಗಣಿ ಉಮೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ‘ಕೊರೊನಾದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಂಘಟನೆಗಳು ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು. ಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡಬೇಕು’ ಎಂದು ದಲಿತ ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ತುಂಗಣಿ ಉಮೇಶ್‌ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿಯ ಸಿಂಧ್ಯನಗರದಲ್ಲಿ 100 ಬಡ ಕುಟುಂಬಗಳಿಗೆ ದಲಿತ ಸೇನೆಯ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ದಿನಸಿ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಕೃತಿ ವಿಕೋಪಗಳಿಂದ ಎಷ್ಟೋ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಅದೇ ರೀತಿ ಕೊರೊನಾ ಸಹ ವಿಪತ್ತು ಸೃಷ್ಟಿಸಿದೆ. ಎಲ್ಲಾ ಜಾತಿಯಲ್ಲಿನ ಬಡವರು ಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲವನ್ನು ಸರ್ಕಾರವೇ ಮಾಡಬೇಕೆಂದು ನಿರೀಕ್ಷಿಸಬಾರದು ಎಂದು ಹೇಳಿದರು.

ಯಾವುದೇ ಸಂಘಟನೆಗಳಿರಲಿ ಇಂತಹ ಸಮಯದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಎಲ್ಲಾ ಜಾತಿ, ಧರ್ಮದಲ್ಲಿರುವ ಬಡವರು, ಅಶಕ್ತರನ್ನು ಗುರುತಿಸಿ ಅವರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಮನವಿ ಮಾಡಿದರು.

ಸಿಂಧ್ಯನಗರದ ನಿವಾಸಿ ಶಂಕರ್‌ ಮಾತನಾಡಿ, ಸಿಂಧ್ಯನಗರ ಕಡುಬಡವರು ವಾಸಿಸುವ ಪ್ರದೇಶವಾಗಿದೆ. ಆಶ್ರಯ ಯೋಜನೆಯಲ್ಲಿ ನಿವೇಶನ ಪಡೆದ ಎಲ್ಲಾ ಜಾತಿಯ ಬಡವರು ಇಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಪಕ್ಷ, ಪಂಚಾಯಿತಿಯಿಂದ ಸಹಾಯ ಮಾಡಿಲ್ಲ. ನಮ್ಮ ಕಷ್ಟ ಕೇಳಿಲ್ಲ ಎಂದು ಆರೋಪಿಸಿದರು.

ದಲಿತ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಕುಮಾರ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ಬೆಟ್ಟಳ್ಳಿಕಾವಲ್‌ ಶಂಕರ್‌, ತಾಲ್ಲೂಕು ಉಪಾಧ್ಯಕ್ಷ ಸತ್ಯಮೂರ್ತಿ, ಹಾರೋಹಳ್ಳಿ ಹೋಬಳಿ ಅಧ್ಯಕ್ಷ ವೈರಮುಡಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು