ರಾಮನಗರ: ಪದೋನ್ನತಿ, ಕಾರ್ಯೋತ್ತಡ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಕಂದಾಯ ಇಲಾಖೆ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಕೈಗೆ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರು. ಬೇಡಿಕೆಗಳ ಕುರಿತು ಘೋಷಣೆ ಕೂಗಿದ ನೌಕರರು, ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಹರ್ಷ, ‘ಗ್ರಾಮ ಆಡಳಿತಾಧಿಕಾರಿಗಳು 30 ವರ್ಷಗಳಿಂದ ಪದೋನ್ನತಿಯಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ 1,196 ಗ್ರೇಡ್-1 ಗ್ರಾ.ಪಂ. ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್-1 ಗ್ರಾಮ ಆಡಳಿತಾಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜಸ್ವ ನಿರೀಕ್ಷಕರು, ಎಫ್‌ಡಿಎ, ಗ್ರೇಡ್ -1 ಗ್ರಾಮ ಆಡಳಿತಾಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿ ನೀಡಬೇಕಿದೆ’ ಎಂದು ಹೇಳಿದರು.
‘ಇಲಾಖೆಯಲ್ಲಿರುವ ದಂಪತಿಯ ಅಂತರ ಜಿಲ್ಲಾ ಪ್ರಕರಣಗಳ ವರ್ಗಾವಣೆಗೆ ಕೂಡಲೇ ಚಾಲನೆ ನೀಡಿ, ಅಂತಿಮ ಆದೇಶಕ್ಕೆ ಬಾಕಿ ಇರುವ ಪ್ರಕರಣಗಳಿಗೂ ಆದೇಶ ನೀಡಬೇಕು. ಕೆಸಿಎಸ್‍ಆರ್ ನಿಯಮಾವಳಿಗಳಂತೆ, ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೊ ಹಾಕಬಾರದು. ನಿಯಮ ಮೀರಿ ಹಾಕುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ನಮ್ಮದು ತಾಂತ್ರಿಕ ಹುದ್ದೆಯಲ್ಲದಿದ್ದರೂ 21ಕ್ಕೂ ಅಧಿಕ ಮೊಬೈಲ್-ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುವ ಒತ್ತಡವಿದೆ. ತಂತ್ರಾಂಶಗಳ ನಿರ್ವಹಣೆಗೆ ಅಗತ್ಯವಿರುವ ಮೊಬೈಲ್ ಫೋನ್, ಲ್ಯಾಪ್‍ಟಾಪ್, ಇಂಟರ್‌ನೆಟ್, ಸ್ಕ್ಯಾನರ್ ಸೇರಿದಂತೆ ಯಾವುದೇ ಸೌಕರ್ಯವಿಲ್ಲದೆ ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಇದೇ ಕಾರಣಕ್ಕಾಗಿ ನೌಕರರು ಮತ್ತು ಸಾರ್ವಜನಿಕರೊಂದಿಗೆ ಜಗಳವಾಗುವುದು ಸಾಮಾನ್ಯವಾಗಿದೆ’ ಎಂದರು.
ಸಂಘದ ಗೌರವಾಧ್ಯಕ್ಷ ಎನ್. ರಮೇಶ್, ‘ಕಂದಾಯ ಇಲಾಖೆಯ ಕೆಲಸದ ಜೊತೆಗೆ ಇತರ ಕೆಲಸಗಳಿಗೆ ನೌಕರರನ್ನು ನಿಯೋಜಿಸುತ್ತಿರುವುದು ಕಾರ್ಯೋತ್ತಡ ಹೆಚ್ಚಿಸಿದೆ. ಇದರಿಂದಾಗಿ, ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗದ ಸ್ಥಿತಿ ಎದುರಾಗಿದೆ. ಕಂದಾಯ ಸಚಿವರು ನೌಕರರ ಅಳಲು ಆಲಿಸಿ ಬೇಡಿಕೆಗಳಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ. ರಾಜಶೇಖರಮೂರ್ತಿ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಸ್ವಾಮಿ, ಖಜಾಂಚಿ ಎ.ಎಸ್. ಧರೇಶ್‍ಗೌಡ, ಉಪಾಧ್ಯಕ್ಷ ಪುಟ್ಟಸ್ವಾಮಿಗೌಡ, ಕಾರ್ಯಾಧ್ಯಕ್ಷ ಯತೀಶ್, ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.
ಕಾರ್ಯೋತ್ತಡ ನಿವಾರಣೆ ಪದೋನ್ನತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಂದಾಯ ಇಲಾಖೆ ನೌಕರರು ನಡೆಸುತ್ತಿರುವ ಧರಣಿಗೆ ನಮ್ಮ ಬೆಂಬಲವಿದೆ.–ಕೆ. ಸತೀಶ್, ಅಧ್ಯಕ್ಷ ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.