ಮಂಗಳವಾರ, ಮಾರ್ಚ್ 21, 2023
29 °C

ಸಮಾಜ ಪರಿವರ್ತನೆಗೆ ಕ್ರಾಂತಿಕಾರಿ ಹೋರಾಟ: ಡಾ. ಮುಮ್ಮಡಿ ಶಿವರುದ್ರಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಬಸವಣ್ಣನವರು ಒಬ್ಬ ವ್ಯಕ್ತಿಯಾಗಿರಲಿಲ್ಲ, ಸಮಾಜದ ಶಕ್ತಿಯಾಗಿದ್ದರು, 12ನೇ ಶತಮಾನದಲ್ಲಿಯೇ ಸೃಷ್ಟಿಯಲ್ಲಿನ ಎಲ್ಲರೂ ಸಮಾನರು, ಪ್ರತಿಯೊಬ್ಬರಿಗೂ ಸಮಾನವಾದ ಅವಕಾಶ, ಸಮಾನತೆ ಸಿಗಬೇಕೆಂದು ಸಮಾಜದ ಪರಿವರ್ತನೆಗೆ ಹೋರಾಡಿದ ಮಹಾಪುರುಷರೆಂದು ಮರಳೇಗವಿ ಮಠದ ಡಾ. ಮುಮ್ಮಡಿ ಶಿವರುದ್ರಸ್ವಾಮೀಜಿ ಹೇಳಿದರು.

ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮಂಗಳವಾರ ಆಯೋಜನೆ ಮಾಡಿದ್ದ ಜಗಜ್ಯೋತಿ ಬಸವಣ್ಣನವರ 885ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಮಹಾಪುರುಷರ ಜಯಂತಿಯ ಆಚರಣೆ ಮೂಲಕ ಅವರ ತತ್ವ ಆದರ್ಶಗಳನ್ನು ನಾವು ಜಗತ್ತಿಗೆ ತೋರಿಸಬೇಕಿದೆ. ಬಸವಣ್ಣನವರು ಕೃಪ ಆಶೀರ್ವಾದ ಸದಾ ಸಮಾಜದ ಮೇಲಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಟಿ.ಎಸ್‌. ಶಿವರಾಮ್‌ ಮಾತನಾಡಿ, ಬಸವಣ್ಣನವರು ಬ್ರಹ್ಮಣರಾಗಿ ಹುಟ್ಟಿ ಬೆಳೆಯುತ್ತ ಸಮಾಜದಲ್ಲಿದ್ದ ಕಟ್ಟುಪಾಡುಗಳು, ಧಾರ್ಮಿಕ ಮೌಡ್ಯತೆ, ಅಸಮಾನತೆ, ಜಾತಿ ವ್ಯವಸ್ಥೆ, ಮೇಲು ಕೀಳನ್ನು ನೋಡಿ ಬದಲಾವಣೆಗಾಗಿ ಲಿಂಗಾಯತ ಧರ್ಮವನ್ನು ಪ್ರಾರಂಭಿಸಿದರು ಎಂದರು.

ಕೂಡಲಸಂಗಮ ದೇವರು ಅವರ ಆರಾಧ್ಯ ದೈವವಾಗಿದ್ದು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ವಚನವನ್ನು ಬರೆದು ಸಮಾಜವನ್ನು ಜಾಗೃತಿಗೊಳಿಸಿದರು. ವಿಶ್ವಮಟ್ಟದಲ್ಲಿ ಬಸವಣ್ಣನವರ ಪ್ರತಿಮೆಯಿಟ್ಟು ಪೂಜಿಸಿ ಗೌರವಿಸುವ ಮಟ್ಟಕ್ಕೆ ಬಸವಣ್ಣನವರು ಸಮಾಜದ ಪರಿವರ್ತಕರಾಗಿದ್ದಾರೆ ಎಂದರು.

ಆಡುವ ಮಾತಿನಂತೆ ನಡೆಯಬೇಕೆಂಬುದು ಬಸವಣ್ಣನವರ ತತ್ವ ಸಿದ್ದಾಂತವಾಗಿತ್ತು. ಸಮಾಜ ಅಂಕುಡೊಂಕುಗಳನ್ನು ನೇರ ನಿಷ್ಠುರವಾಗಿ ಹೇಳುತ್ತಿದ್ದರು. ಕೆಟ್ಟ ಜನ, ಕೆಟ್ಟ ವ್ಯವಸ್ಥೆ ಬಸವಣ್ಣನವರ ಕಾಲದಲ್ಲೂ ಇತ್ತು. ಇಂದಿಗೂ ಅದೇ ಸಂಸ್ಕೃತಿಯ ಜನ ಇದ್ದಾರೆ. ಮನುಷ್ಯನನ್ನು ಹೊಡೆಯುವುದರಿಂದ ಅವರಲ್ಲಿರುವ ಕೆಟ್ಟತನ ಹೋಗುವುದಿಲ್ಲ, ಅವರಲ್ಲಿರುವ ಕೆಟ್ಟ ಮನಸ್ಸನ್ನೇ ಬದಲಾಯಿಸಬೇಕು ಎಂದಿದ್ದರು ಎಂದರು.

ಬಸವಣ್ಣನವರ ಕಾಲಘಟ್ಟದಲ್ಲಿ ಇದ್ದಂತ ಪರಿಸ್ಥಿತಿ ಇನ್ನು ಸಮಾಜದಲ್ಲಿದೆ. ಅವರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರಬೇಕಾದರೆ ಅವರ ಅದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ತಹಶೀಲ್ದಾರ್‌ ಕೆ.ಕುನಾಲ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಮಾಜದ ಬದಲಾವಣೆಗಾಗಿ ಶ್ರಮಿಸಿದ ಮಹಾತ್ಮರು, ಮಹಾಪುರುಷರ ಜಯಂತಿಗಳನ್ನು ನಾವು ಆಚರಣೆ ಮಾಡುತ್ತೇವೆ. ನಿಜವಾಗಿಯೂ ಅಂತಹ ಜಯಂತಿಗಳಿಗೆ ಅರ್ಥ ಬರಬೇಕಾದರೆ ಅವರ ವಿಚಾರಧಾರೆಗಳು, ಚಿಂತನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಕನಿಷ್ಠ ಅವರ ಆದರ್ಶಗಳಲ್ಲಿ ಒಂದಂಶವನ್ನಾದರೂ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ದೇಗುಲಮಠದ ಕಿರಿಯ ಶ್ರೀ ಚನ್ನಬಸವಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಆಯುಕ್ತೆ ವಿ.ಕೆ.ರಮಾಮಣಿ, ತಾಲ್ಲೂಕು ಕಚೇರಿ ಶಿರಸ್ತೇದಾರ ಕೆ.ಎಸ್‌.ಶಿವನಾಂದ, ಶಿಕ್ಷಣ ಇಲಾಖೆ ಸಿ.ಗಂಗಾಧರ ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಸಂಘ ಸಂಸ್ಥೆಯ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು