ಗುರುವಾರ , ಮೇ 26, 2022
23 °C
ಅಂಬಾಡಹಳ್ಳಿ - ಎಲೆತೋಟದಹಳ್ಳಿ ಸಂಪರ್ಕ ರಸ್ತೆಗೆ ಶ್ರಮಾದಾನ

ಗ್ರಾಮಸ್ಥರಿಂದ ರಸ್ತೆ ಮರುನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಹಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಕೊಚ್ಚಿಹೋಗಿದ್ದ ರಸ್ತೆಯನ್ನು ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದು, ಇದು ಪ್ರಶಂಸೆಗೆ ಪಾತ್ರವಾಗಿದೆ.

ಮಳೆಯಿಂದಾಗಿ ಕೊಚ್ಚಿಹೋಗಿದ್ದ ತಾಲ್ಲೂಕಿನ ಅಂಬಾಡಹಳ್ಳಿ - ಎಲೆತೋಟದಹಳ್ಳಿ ಸಂಪರ್ಕ ರಸ್ತೆಯನ್ನು ಅಂಬಾಡಹಳ್ಳಿ ಹಾಗೂ ಎಲೇತೋಟದಹಳ್ಳಿ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ಮರು ನಿರ್ಮಾಣ ಮಾಡುತ್ತಿದ್ದಾರೆ. ಹಳೇ ಪೈಪುಗಳು, ಜಲ್ಲಿಕಲ್ಲು, ಮರಳು ಬಳಸಿ ರಸ್ತೆಯನ್ನು ಮರುನಿರ್ಮಾಣ ಮಾಡುವ ಕಾರ್ಯದಲ್ಲಿ ಗ್ರಾಮಸ್ಥರು ಸ್ವತಃ ತಾವೇ ದುಡಿಯಲಾರಂಭಿಸಿದ್ದಾರೆ.

ಒಂದು ತಿಂಗಳಿನಿಂದ ನಿರಂತರವಾಗಿ ಸುರಿದ ಮಳೆ ಹಿನ್ನೆಲೆಯಲ್ಲಿ ತುಂಬಿ ಹರಿಯುತ್ತಿರುವ ಕಣ್ವ ಹೊಳೆ ನೀರಿನ ಹರಿವು ಹೆಚ್ಚಾದ ಪರಿಣಾಮ ನೀರಿನಿಂದ ರಸ್ತೆ ಕೊಚ್ಚಿ ಹೋಗಿತ್ತು. ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸುಮಾರು 25 ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದ ಕಾರಣ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಎರಡೂ ಗ್ರಾಮದ ಜನರು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

‘ನಮ್ಮ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದಾಗ ವಿಧಿಯಿಲ್ಲದೆ ನಾವೇ ಸರಿಪಡಿಸಿಕೊಳ್ಳಲು ಮುಂದಾಗಿದ್ದೇವೆ. ನಮ್ಮ ಗ್ರಾಮಗಳಿಂದ ಇತರೆಡೆಗೆ ತೆರಳಲು ಬಹಳ ಅನಾನುಕೂಲವಾಗುತ್ತಿತ್ತು. ಇದನ್ನು ಮನಗಂಡು ಎರಡೂ ಗ್ರಾಮಗಳ ಮುಖಂಡರು ಚರ್ಚಿಸಿ ನಮ್ಮ ಸ್ವಂತ ಖರ್ಚಿನಲ್ಲಿಯೇ ಕೊಚ್ಚಿಹೋಗಿರುವ ರಸ್ತೆ ನಿರ್ಮಾಣ ಮಾಡಿಕೊಳ್ಳಲು ತೀರ್ಮಾನಿಸಿದೆವು. ನಂತರ ಅದನ್ನು ಕಾರ್ಯರೂಪಕ್ಕೆ ತಂದೆವು’ ಎಂದು ಗ್ರಾಮಸ್ಥರು ತಿಳಿಸಿದರು.

‘ಇಲ್ಲಿ ಒಂದು ಸೇತುವೆ ನಿರ್ಮಾಣವಾಗಬೇಕು. ಇಲ್ಲದಿದ್ದರೆ ಈ ತೊಂದರೆ ಪ್ರತಿವರ್ಷ ನಮಗೆ ತಪ್ಪುವುದಿಲ್ಲ. ಇದರ ಬಗ್ಗೆ ಶಾಸಕ ಎಚ್.ಡಿ.ಕುಮಾರಸ್ವಾಮಿ ಗಮನಹರಿಸಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು