ಹಾರೋಹಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ರಸ್ತೆಗಳಿಗೆ ಕಂಟಕವಾಗಿದೆ.
ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಕೆಲವು ದಿನಗಳ ಹಿಂದೆ ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸಲು ಗ್ರಾಮದ ಕಾಂಕ್ರೀಟ್ ರಸ್ತೆ ಅಗೆದು ತಿಂಗಳಾನುಗಟ್ಟಲೇ ಹಾಗೆಯೇ ಬಿಡಲಾಗಿದೆ.ಇದರಿಂದಾಗಿ ವೃದ್ಧರು, ಕುರಿ–ಮೇಕೆ, ದನ–ಕರು ಸಂಚಾರಕ್ಕೆ ತೊಂದರೆ ಆಗಿದೆ.
ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ಕೊಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಯೋಜನೆ ಕಾಮಗಾರಿಗಳನ್ನು ಗುತ್ತಿಗೆದಾರರು ಬೇಕಾದವರಿಗೆ ಹಂಚಿಕೆ ಮಾಡಿರುವುದು ವಿಳಂಬಕ್ಕೆ ಕಾರಣವಾಗಿದೆ. ರಸ್ತೆಗಳನ್ನು ಅಗೆದು ಗುಂಡಿಗಳನ್ನು ಮುಚ್ಚದೆ ಹಾಗೆ ಬಿಟ್ಟು ಸಂಪೂರ್ಣ ರಸ್ತೆಗಳನ್ನು ಹಾಳು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ದೊಡ್ದ ಗುಂಡಿ: ಕೆಲ ಕಡೆ ಆರು ತಿಂಗಳಾದರೂ ಗುಂಡಿಗಳನ್ನು ಮುಚ್ಚಿಲ್ಲ. ಐದಾರು ಅಡಿ ಪೈಪ್ ಭೂಮಿಯಿಂದ ಹೊರಗೆ ಬಿಡಲಾಗಿದೆ. ಇನ್ನೂ ಕೆಲವೆಡೆ ಗ್ರಾಮದ ಉದ್ದಗಲಕ್ಕೂ ಇರುವ ರಸ್ತೆಗಳ ಮಧ್ಯ ಭಾಗಕ್ಕೆ ಅಗೆದು ಎರಡು ಭಾಗಗಳನ್ನಾಗಿ ಮಾಡಲಾಗಿದೆ.
ಅಧಿಕಾರಿಗಳ ಅಸಡ್ಡೆ: ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ರಸ್ತೆಗಳಿಗೆ ಹಾನಿಯಾಗುತ್ತಿದ್ದರೂ ಕಾಮಗಾರಿ ವಿಳಂಬ ಮಾಡುವ ಜತೆಗೆ ಕಾಮಗಾರಿಗೆ ಬಳಸುತ್ತಿರುವ ಸಾಮಗ್ರಿ ಕೂಡ ಕಳಪೆಯಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ.
ವರ್ಷದೊಳಗೆ ಮುಗಿಯಬೇಕಿದ್ದ ಕಾಮಗಾರಿ ಅರ್ಧದಷ್ಟೂ ಮುಗಿದಿಲ್ಲ.ಕೆಲವು ಕಡೆ ಒಂದು ಟ್ಯಾಂಕ್ ನಿರ್ಮಿಸಿಲ್ಲ. ಪೈಪ್‌ಲೈನ್ ಕಾಮಗಾರಿ ಹೆಸರಿನಲ್ಲಿ ರಸ್ತೆ ಅಗೆದು ಭ್ರಷ್ಟಾಚಾರ ನಡೆದಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಜಲಜೀವನ್ ಮಿಷನ್ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ.ಆದರೆ,ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ, ಚರಂಡಿ ಹಾಳಾಗಿದೆ. ಎಲ್ಲೆಂದರಲ್ಲೇ ಕಾಂಕ್ರಿಟ್ ತ್ಯಾಜ್ಯ ಗುಡ್ಡೆ ಹಾಕಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಜಾರಿಗೆ ತಂದಿರುವ ಜಲಜೀವನ್ ಮಿಷನ್ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಕಳಪೆ ಕಾಮಗಾರಿಯಿಂದ ಕೂಡಿದೆ.
ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಗುತ್ತಿಗೆದಾರರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದುಶಿವಪ್ರಸಾದ್ ಪಿಡಿಒ ಟಿ.ಹೊಸಹಳ್ಳಿ
ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಕಾಮಗಾರಿ ಹಳ್ಳ ಹಿಡಿದಿದೆ. ಈ ಕುರಿತು ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿ ಕುರಿತು ಸಮಗ್ರ ತನಿಖೆಯಾಗಬೇಕುಮಹಾದೇವ ಚಿಕ್ಕದೇವರಹಳ್ಳಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.