ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿ ವ್ಯಾಪಾರಿಗಳ ಪ್ರತಿಭಟನೆ

Last Updated 12 ಮೇ 2019, 13:31 IST
ಅಕ್ಷರ ಗಾತ್ರ

ಚನ್ನಪಟ್ಟಣ: ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು ಎಂದು ನಗರಸಭಾ ಅಧಿಕಾರಿಗಳನ್ನು ಒತ್ತಾಯಿಸಿ ಪಟ್ಟಣದ ರಸ್ತೆಬದಿ ವ್ಯಾಪಾರಿಗಳು ಶನಿವಾರ ಸಂಜೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಹಲವಾರ ವರ್ಷಗಳಿಂದ ರಸ್ತೆ ಬದಿ ವ್ಯಾಪಾರವನ್ನೆ ನಂಬಿ ಬದುಕುತ್ತಿರುವ ನಮಗೆ ನಗರಸಭೆ ಅಧಿಕಾರಿಗಳು ನಮ್ಮ ವ್ಯಾಪಾರವನ್ನು ತೆರವುಗೊಳಿಸಿ ಕಿರುಕುಳ ನೀಡುತ್ತಿದ್ದಾರೆ. ಇದಲ್ಲದೆ ತಳ್ಳುಗಾಡಿಗಳಿಂದ ಹಣ್ಣು ತರಕಾರಿ, ಸೊಪ್ಪು ಮಾರಾಟ ಮಾಡುವವರಿಂದ ಏಕಾಏಕಿ ಹಣ್ಣು ತರಕಾರಿ ಸೊಪ್ಪು ಮತ್ತು ತೂಕದ ತಕ್ಕಡಿಗಳನ್ನು ಮುಟ್ಟುಗೋಲು ಹಾಕಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ. ನಮ್ಮ ನೋವನ್ನು ಆಲಿಸುವವರು ಯಾರೂ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ರಸ್ತೆಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ್ ಮಾತನಾಡಿ, ‘ರಸ್ತೆ ಬದಿ ವ್ಯಾಪಾರಿಗಳು ಅತ್ಯಂತ ಕಡುಬಡವರು. ಅದನ್ನೇ ನಂಬಿ ಜೀವನ ಸಾಗಿಸುತ್ತಿರುವವರು. ಸಾಲ ಮಾಡಿಕೊಂಡು ಪಟ್ಟಣದಲ್ಲಿ ಹಣ್ಣು, ತರಕಾರಿ, ಸೊಪ್ಪು ಇತರ ಜನ ಬಳಕೆಯ ವಸ್ತುಗಳನ್ನು ಮಾರಾಟ ಮಾಡಿಕೊಂಡು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ನಗರಸಭಾ ಅಧಿಕಾರಿಗಳು ಪೊಲೀಸರ ಸಹಕಾರ ಪಡೆದುಕೊಂಡು ಸ್ವಚ್ಛತೆ ನೆಪದಲ್ಲಿ ರಸ್ತೆ ಬದಿ ವ್ಯಾಪಾರವನ್ನು ಮತ್ತು ತಳ್ಳುಗಾಡಿ ವ್ಯಾಪಾರಿಗಳನ್ನು ತೆರವುಗೊಳಿಸಿ, ಮಾಲು ಸಮೇತ ಗಾಡಿಗಳನ್ನು ಮುಟ್ಟುಗೋಲು ಹಾಕಿಕೊಂಡು ತೊಂದರೆ ಕೊಡುತ್ತಿದ್ದಾರೆ’ ಎಂದು ದೂರಿದರು.

ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನಮ್ಮ ಸಂಘದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಭೇಟಿ ಮಾಡಿ ರಸ್ತೆ ಬದಿ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೆವು. ಅದಕ್ಕೆ ಅವರು ಒಪ್ಪಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಆದರೆ ನಗರಸಭೆ ಅಧಿಕಾರಿಗಳು ಅವರ ಮಾತಿಗೂ ಗೌರವ ಕೊಡದೆ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT