ಶುಕ್ರವಾರ, ಫೆಬ್ರವರಿ 21, 2020
18 °C
ಬೃಹತ್‌ ಪಥ ಸಂಚಲನ: ಡಿಕೆಶಿ–ಎಚ್‌ಡಿಕೆಗೆ ಟಾಂಗ್‌ ನೀಡುವ ಪ್ರಯತ್ನ

ರಾಮನಗರ: ಶಕ್ತಿ ಪ್ರದರ್ಶನಕ್ಕೆ ಆರ್‌ಎಸ್‌ಎಸ್‌ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ಭಾನುವಾರ ನಗರದಲ್ಲಿ ಬೃಹತ್ ಪಥ ಸಂಚಲನ ನಡೆಯಲಿದೆ. ಸಂಘಟನೆ ಮೂಲಕವೇ ಎದುರಾಳಿಗಳಿಗೆ ತಿರುಗೇಟು ನೀಡುವ ಯತ್ನ ಇದಾಗಿದೆ.

ನಗರದ ಬೀದಿಗಳನ್ನು ಕೇಸರಿ ಬಾವುಟಗಳಿಂದ ಸಿಂಗರಿಸಲಾಗಿದ್ದು, ಸಾಕಷ್ಟು ಅಬ್ಬರದ ಪ್ರಚಾರ ಮಾಡಲಾಗಿದೆ. ಮನೆಮನೆಗೆ ಕರಪತ್ರಗಳನ್ನು ಹಂಚಲಾಗಿದೆ. ಆಟೊ ಪ್ರಚಾರವೂ ನಡೆದಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರಚಾರ ನಡೆದಿದೆ. ಐದು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಸಂಘಟಕರದ್ದು.

ಕಾರ್ಯಕ್ರಮದಲ್ಲಿ ಮೊದಲಿಗೆ ಎರಡು ಕಡೆಯಿಂದ ಮೆರವಣಿಗೆ ಆರಂಭಗೊಳ್ಳಲಿದೆ. ಮಧ್ಯಾಹ್ನ 2ಕ್ಕೆ ನಗರದ ಬಾಲಗೇರಿ ಸರ್ಕಾರಿ ಶಾಲೆ ಆವರಣ ಹಾಗೂ ಕೆಂಪೇಗೌಡ ವೃತ್ತದಿಂದ ಪ್ರತ್ಯೇಕ ಮೆರವಣಿಗೆಗಳು ಹೊರಡಲಿದ್ದು, ಬಂಡಿಕಾಳಮ್ಮ ವೃತ್ತದಲ್ಲಿ ಸಮಾವೇಶಗೊಳ್ಳಲಿವೆ. ಸಂಜೆ 4.30ಕ್ಕೆ ಜೂನಿಯರ್‌ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್‌ ಮಾತನಾಡಲಿದ್ದಾರೆ.

ಸಂಘಟನೆ ಬಲವರ್ಧನೆ: ರಾಮನಗರ ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಡೆದಿರುವುದು ಅಪರೂಪ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ತರುವಾಯ ಜಿಲ್ಲೆಯಲ್ಲಿ ಬಲಪಂಥೀಯ ಸಂಘಟನೆಗಳು ಹೆಚ್ಚು ಚುರುಕಾಗಿವೆ. ತಿಂಗಳುಗಳ ಅಂತರದಲ್ಲಿ ನಡೆದಿರುವ ಬೃಹತ್‌ ಮೆರವಣಿಗೆ ಇದಾಗಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕಳೆದ ಜನವರಿ 4ರಂದು ರಾಮನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಜನವರಿ 13ರಂದು ಕನಕಪುರದಲ್ಲಿ ಯೇಸು ಪ್ರತಿಮೆ ವಿರೋಧಿಸಿ ನಡೆದ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ನಡೆದ ಜಾಥಾ ಬಲಪಂಥೀಯ ಸಂಘಟನೆಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿತ್ತು.

ಬಾಕ್ಸ್‌
ಬಿಜೆಪಿಗೆ ಶಕ್ತಿ
ಹಿಂದುತ್ವದ ಹೆಸರಿನಲ್ಲಿ ಸಂಘಟನೆ ಮಾಡುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿಯನ್ನು ಬಲವರ್ಧನೆ ಮಾಡುವುದು ಈ ಕಾರ್ಯಕ್ರಮಗಳ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ. ಇದರ ಮುಂಚೂಣಿಯಲ್ಲಿ ಕಮಲ ಪಾಳಯದ ನಾಯಕರೇ ಇರುವುದು ಈ ಅಂಶವನ್ನು ಪುಷ್ಟೀಕರಿಸುವಂತೆ ಇದೆ.

ಕಾಂಗ್ರೆಸ್‌–ಜೆಡಿಎಸ್‌ನ ಭದ್ರಕೋಟೆಯಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಹಿಂದೂ ಸಂಘಟನೆ ಬಲವಾದಷ್ಟು ಪಕ್ಷದ ಶಕ್ತಿ ಹೆಚ್ಚಲಿದೆ. ಈ ಮೂಲಕ ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ ಅವರಂಥ ಘಟಾನುಘಟಿ ನಾಯಕರಿಗೆ ಟಾಂಗ್ ನೀಡಲು ತೆರೆಮರೆಯಲ್ಲಿ ಪ್ರಯತ್ನ ನಡೆದಿದೆ.

 ಬಾಕ್ಸ್‌–2

 ಭದ್ರತೆ

ಕಾರ್ಯಕ್ರಮದ ಭದ್ರತೆಗಾಗಿ 5 ಸರ್ಕಲ್ ಇನ್‌ಸ್ಪೆಕ್ಟರ್‌, 7 ಸಬ್ ಇನ್‌ಸ್ಟೆಕ್ಟರ್‌, 22 ಎಎಸ್‌ಐ, 162 ಕಾನ್‌ಸ್ಟೆಬಲ್‌ ಹಾಗೂ 40 ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ 5 ಡಿಎಆರ್‌ ತುಕಡಿಗಳು ಕಾವಲು ಕಾಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)