ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಶುಲ್ಕ ವಸೂಲಿಗೆ ಬೀಳುತ್ತಾ ಕಡಿವಾಣ?

ಆರ್‌ಟಿಇ: ವಿದ್ಯಾರ್ಥಿಗಳ ಪೋಷಕರಿಂದ ದೂರು ಸ್ವೀಕಾರಕ್ಕೆ ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ
Last Updated 28 ಮೇ 2019, 19:45 IST
ಅಕ್ಷರ ಗಾತ್ರ

ರಾಮನಗರ: ಕಡ್ಡಾಯ ಶಿಕ್ಷಣ ಹಕ್ಕಿನ ಅಡಿ (ಆರ್‌ಟಿಇ) ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಪೋಷಕರಿಂದ ಹಣ ವಸೂಲಿ ನಿರಂತರವಾಗಿ ನಡೆದಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯು ಇನ್ನಾದರೂ ಕಠಿಣ ಕ್ರಮಕ್ಕೆ ಮುಂದಾಗುತ್ತದೆಯೇ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.

ಬಡ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಸಲುವಾಗಿ ಸರ್ಕಾರವು ಕಳೆ ಸಾಲಿನವರೆಗೂ ಆರ್‌ಟಿಇ ಅಡಿ ಅನುದಾನ ರಹಿತ ಶಾಲೆಗಳಲ್ಲಿ ಶೇ 25ರ ಮೀಸಲಾತಿ ಅಡಿ ಪ್ರವೇಶಾವಕಾಶ ಕಲ್ಪಿಸಿತ್ತು. ಇದಕ್ಕೆ ತಗುಲುವ ವೆಚ್ಚವನ್ನೂ ಸರ್ಕಾರವೇ ಭರಿಸುತ್ತಿದೆ. ಆದಾಗ್ಯೂ ಇಂತಹ ವಿದ್ಯಾರ್ಥಿಗಳಿಂದಲೂ ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಹಣ ವಸೂಲಿ ಮಾಡುವುದು ನಿಂತಿಲ್ಲ.

ಸರ್ಕಾರ ಪ್ರವೇಶ ಶುಲ್ಕ ಭರಿಸಿದ್ದಾಗ್ಯೂ ವಂತಿಗೆ ರೂಪದಲ್ಲಿ ಪ್ರತಿ ಮಗುವಿನಿಂದ 8–10 ಸಾವಿರದಷ್ಟು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಇದಕ್ಕೆ ಯಾವುದೇ ರಸೀತಿ ನೀಡುವುದಿಲ್ಲ. ಇದಲ್ಲದೆ ಸ್ಮಾರ್ಟ್‌್್ ಕ್ಲಾಸ್, ಪುಸ್ತಕ ಖರೀದಿ, ಯೂನಿಫಾರ್ಮ್‌ ಮೊದಲಾದವುಗಳಿಗಾಗಿಯೂ ₨10–12 ಸಾವಿರ ಪಡೆಯಲಾಗುತ್ತಿದೆ ಎನ್ನುವ ದೂರುಗಳಿವೆ.

‘ಆರ್‌ಟಿಇ ಅಡಿ ಸರ್ಕಾರ ಸೀಟು ನೀಡಿದರೂ ನಾವು ಖಾಸಗಿ ಶಾಲೆಗೆ ಶುಲ್ಕ ಕಟ್ಟುವುದು ತಪ್ಪಿಲ್ಲ. ಇತರೆ ವಿದ್ಯಾರ್ಥಿಗಳಿಗೆ ಇರುವ ಶುಲ್ಕದ ಅರ್ಧದಷ್ಟು ಹಣವನ್ನಾದರೂ ಕಟ್ಟಲೇಬೇಕು. ಆದರೆ ಅದಕ್ಕೆ ಯಾವುದೇ ರಸೀತಿ ನೀಡುವುದಿಲ್ಲ. ಪುಸ್ತಕ ಹಾಗೂ ಸಮವಸ್ತ್ರಕ್ಕೆ ಪ್ರತ್ಯೇಕವಾಗಿ ಹಣ ಪಡೆಯಲಾಗುತ್ತದೆ’ ಎಂದು ಮಕ್ಕಳ ಪೋಷಕರು ದೂರುತ್ತಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರವು ಆರ್‌ಟಿಇ ಸೀಟುಗಳ ಸಂಖ್ಯೆಯನ್ನು ಕಡಿತಗೊಳಿಸಿದೆ. ಸರ್ಕಾರಿ ಅಥವಾ ಅನುದಾನಿತ ಶಾಲೆ ಇಲ್ಲದ ಕಡೆ ಮಾತ್ರ ಖಾಸಗಿ ಶಾಲೆಗಳಲ್ಲಿ ಪ್ರವೇಶ ಸಿಗುತ್ತದೆ. ಜಿಲ್ಲೆಯಲ್ಲಿ ಅಂತಹ ಯಾವೊಂದು ಖಾಸಗಿ ಶಾಲೆಯೂ ಇಲ್ಲ. ಹೀಗಾಗಿ ಬೇಡಿಕೆಯೇ ಇಲ್ಲದಾಗಿದೆ. ಆದರೆ ಹಿಂದಿನ ವರ್ಷಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸುತ್ತಿದೆ.

ನೀವೂ ದೂರು ನೀಡಿ

ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಹಣಕ್ಕೆ ಒತ್ತಾಯಿಸಿದಲ್ಲಿ ಪೋಷಕರು ಶಿಕ್ಷಣ ಅಧಿಕಾರಿಗೆ ದೂರು ನೀಡಬಹುದಾಗಿದೆ. ಇದಕ್ಕಾಗಿ ಇಲಾಖೆಯು ಅಭಿಯಾನ ಆರಂಭಿಸಿದೆ.

ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲ್ಲೂಕಿನ ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಟಿಇ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಕುರಿತು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಆಧರಿಸಿ ಶಿಕ್ಷಣ ಇಲಾಖೆಯು ಪ್ರತಿ ತಾಲ್ಲೂಕು ಮಟ್ಟದಲ್ಲಿ ದೂರು ಸ್ವೀಕಾರ ಅಭಿಯಾನವನ್ನೇ ಆರಂಭಿಸಿದೆ.

ಪೋಷಕರು ನಿಗದಿತ ದಿನಗಳಂದು ಅಧಿಕಾರಿಗಳನ್ನು ಭೇಟಿಯಾಗಿ ಲಿಖಿತ ರೂಪದಲ್ಲಿ ದೂರು ನೀಡಬಹುದಾಗಿದೆ. ಈ ದೂರುಗಳು ಕೇಂದ್ರ ಕಚೇರಿ ಮಟ್ಟದಲ್ಲಿ ಪರಿಶೀಲನೆಗೆ ಒಳಪಡಲಿವೆ. ಇದೇ 31ರಂದು ಬೆಳಿಗ್ಗೆ 10ಕ್ಕೆ ರಾಮನಗರದ ಬಿಇಒ ಕಚೇರಿ ಬಳಿಯ ಬಿಆರ್‌ಸಿ ಕಚೇರಿಯಲ್ಲಿ ಅಧಿಕಾರಿಗಳಿಂದ ದೂರು ಸ್ವೀಕಾರ ನಡೆಯಲಿದೆ. ಜೂನ್ 1ರಂದು ಬೆಳಿಗ್ಗೆ 10ಕ್ಕೆ ಮಾಗಡಿಯ ಬಿಇಒ ಕಚೇರಿ ಹಾಗೂ ಮಧ್ಯಾಹ್ನ 3ಕ್ಕೆ ಕನಕಪುರದ ಬಿಇಒ ಕಚೇರಿಯಲ್ಲಿಯೂ ಅಧಿಕಾರಿಗಳು ಸಾರ್ವಜನಿಕರಿಂದ ದೂರು ಸ್ವೀಕರಿಸಲಿದ್ದಾರೆ.

ಮೊದಲ ದಿನವೇ 10 ದೂರು

ದೂರು ಸ್ವೀಕಾರ ಅಭಿಯಾನದ ಮೊದಲ ಕಾರ್ಯಕ್ರಮವು ಮಂಗಳವಾರ ಚನ್ನಪಟ್ಟಣದ ಬಿಇಒ ಕಚೇರಿಯಲ್ಲಿ ನಡೆದಿದ್ದು, 10 ದೂರುಗಳು ಬಂದಿವೆ.

‘ಕೇಂದ್ರ ಕಚೇರಿ ನಿಯೋಜಿಸಿದ ಅಧಿಕಾರಿಗಳು ಬೆಳಿಗ್ಗೆ 10ರಿಂದ ಮಧ್ಯಾಹ್ನದವರೆಗೆ ದೂರು ಪಡೆದರು. ಸ್ಪ್ರಿಂಕ್‌ ಫೀಲ್ಡ್‌, ಬಾಲು ಶಾಲೆ, ಕೇಂಬ್ರಿಜ್, ಹಾರಿಜೋನ್‌ ಶಾಲೆಗಳ ವಿರುದ್ಧ ದೂರು ಬಂದಿವೆ. ನೋಡಲ್‌ ಅಧಿಕಾರಿಗಳೇ ಇದರ ಪರಿಶೀಲನೆ ನಡೆಸಲಿದ್ದಾರೆ’ ಎಂದು ಚನ್ನಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ತಿಳಿಸಿದರು.

ಹೊಸತಾಗಿ ಏಳು ಕಡೆ ಇಂಗ್ಲಿಷ್ ಮಾಧ್ಯಮ

ರಾಜ್ಯ ಸರ್ಕಾರವು ಜಿಲ್ಲೆಯ ಆಯ್ದ ಏಳು ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಆರಂಭಕ್ಕೆ ಅನುಮತಿ ನೀಡಿದೆ.

ಈ ಮೊದಲು ಜಿಲ್ಲೆಯ 17 ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಕ್ಕೆ ಹಸಿರು ನಿಶಾನೆ ದೊರೆತಿತ್ತು. ಇದರೊಟ್ಟಿಗೆ ಒಟ್ಟು 24 ಶಾಲೆಗಳಲ್ಲಿ ಈ ವರ್ಷದಿಂದಲೇ ಇಂಗ್ಲಿಷ್‌ ಮಾಧ್ಯಮ ಆರಂಭ ಆಗಲಿದೆ. ರಾಮನಗರ ತಾಲ್ಲೂಕಿನ ಶ್ಯಾನಭೋಗನಹಳ್ಳಿ, ಚನ್ನಮಾನಹಳ್ಳಿ, ಕೈಲಾಂಚ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಜಿಎಂಪಿಎಸ್ ಮಂಗಳವಾರ ಪೇಟೆ, ಜಿಪಿಎಂಎಸ್ ಕೋಡಂಬಳ್ಳಿ, ಜಿಎಚ್‌ಪಿಎಸ್‌ ಹಾರೋಕೊಪ್ಪ ಹಾಗೂ ಯುಜಿಎಚ್‌ಪಿ ಎಂ.ಎನ್‌. ಹೊಸಹಳ್ಳಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ತೆರೆಯಲಿವೆ.

*ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿಯೂ ಆರ್‌ಟಿಇ ದೂರು ಸ್ವೀಕಾರ ಸಭೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಪೋಷಕರು ನಿರ್ಭೀತಿಯಿಂದ ದೂರು ನೀಡಬಹುದು
ಗಂಗಮಾರೇಗೌಡ
ಡಿಡಿಪಿಯು, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT