ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಗಿಯದ ‘ರುಡಾ’ ನಿವೇಶನದಾರರ ಗೋಳು; ದಶಕವಾದರೂ ಕೈ ಸೇರದ ಕ್ರಯಪತ್ರ

Published : 18 ಆಗಸ್ಟ್ 2024, 4:14 IST
Last Updated : 18 ಆಗಸ್ಟ್ 2024, 4:14 IST
ಫಾಲೋ ಮಾಡಿ
Comments

ರಾಮನಗರ: ಇಲ್ಲಿನ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ (ರುಡಾ) ಹದಿನೈದು ವರ್ಷಗಳ ಹಿಂದೆ ನಿವೇಶನ ಖರೀದಿಸಿದವರಿಗೆ ಇನ್ನೂ ಕ್ರಯಪತ್ರದ ಭಾಗ್ಯ ಸಿಕ್ಕಿಲ್ಲ. ‘ಇಂದಲ್ಲ, ನಾಳೆ ಕ್ರಯಪತ್ರ ಕೈ ಸೇರಲಿದೆ’ ಎಂಬ ನಿರೀಕ್ಷೆಯಲ್ಲಿರುವ 1,830 ಖರೀದಿದಾರರಿಗೆ ಇದುವರೆಗೆ ಸಿಹಿ ಸುದ್ದಿ ಸಿಕ್ಕಿಲ್ಲ.

ಸ್ವಂತ ಸೂರಿಗಾಗಿ ರಾಮನಗರದ ಜೀಗೇನಹಳ್ಳಿ ಬಡಾವಣೆ, ಅರ್ಚಕರಹಳ್ಳಿ ಹೆಲ್ತ್ ಸಿಟಿ ಹಾಗೂ ಚನ್ನಪಟ್ಟಣದ ಸುಣ್ಣಘಟ್ಟದ ಕಣ್ವ ಬಡಾವಣೆಯಲ್ಲಿ ಪ್ರಾಧಿಕಾರದ ನಿವೇಶನಗಳನ್ನು ಖರೀದಿಸಿದವರು, ನಿವೇಶನವನ್ನು ಮಾರಲೂ ಆಗದ, ಇತ್ತ ಮನೆಯನ್ನೂ ಕಟ್ಟಲಾಗದ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಹಿಂದಿನ ಅಧಿಕಾರಿಗಳು ಮಾಡಿದ ಯಡವಟ್ಟಿಗೆ ನಿತ್ಯ ಶಾಪ ಹಾಕುತ್ತಿದ್ದಾರೆ. 

ನಕ್ಷೆಯೇ ಇಲ್ಲ: ಹಂಚಿಕೆಯಾಗಿರುವ ನಿವೇಶನಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ, ಕಣ್ವ ಬಡಾವಣೆ ಮತ್ತು ಜೀಗೇನಹಳ್ಳಿ ನಿವೇಶನಗಳಿಗೆ ನಕ್ಷೆಯೇ ಇಲ್ಲ. ಅರ್ಚಕರಹಳ್ಳಿ ಜಾಗದ ಮಾಲೀಕತ್ವ ಇಂದಿಗೂ ಮೂಲ ಖಾತೆದಾರರ ಹೆಸರಲ್ಲಿದೆ. ಫಲಾನುಭವಿಗಳ ಪಟ್ಟಿಯನ್ನು ಪ್ರಾಧಿಕಾರದ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆಯದ ಹಿಂದಿನ ಅಧಿಕಾರಿಗಳು, ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಹ ನಿರ್ವಹಣೆ ಮಾಡದೆ ನಿರ್ಲಕ್ಷ್ಯದ ಪರಮಾವಧಿ ತೋರಿದ್ದಾರೆ.

‘ಹಿಂದೆ ಇದ್ದ ಅಧಿಕಾರಿಗಳು ಮಾಡಿದ ತಪ್ಪಿಗೆ ನಾವೀಗ ಪರದಾಡುತ್ತಿದ್ದೇವೆ. ರುಡಾ ಕಚೇರಿಗೆ ಅಲೆದು ಸಾಕಾಗಿದೆ. ನಿವೇಶನಕ್ಕೆ ಸಂಬಂಧಿಸಿದ ಮೂಲ ಕಡತಗಳೇ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇಂದಿಗೂ ಖರೀದಿದಾರರಿಂದ ಕಂದಾಯ ಪಾವತಿಸಿಕೊಳ್ಳುತ್ತಿದ್ದರೂ ಬಡಾವಣೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿಲ್ಲ’ ಎಂದು ನಿವೇಶನ ಖರೀದಿದಾರ ಪದ್ಮನಾಭ ‘ಪ್ರಜಾವಾಣಿ’ಯೊಂದಿಗೆ ಅಸಮಾಧಾನ ತೋಡಿಕೊಂಡರು.

‘ಬದುಕಿಗೆ ಒಂದು ಸೂರಿರಲಿ ಎಂದು 2009ರಲ್ಲಿ ಖರೀದಿಸಿದ ನಿವೇಶನದ 10 ವರ್ಷಗಳ ಗುತ್ತಿಗೆ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಇದುವರೆಗೆ ನಮಗೆ ಸೇಲ್ ಡೀಡ್ ಮತ್ತು ಖಾತೆ ಆಗಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಭೂಮಿ ಪ್ರಾಧಿಕಾರಕ್ಕೆ ವರ್ಗಾವಣೆಯಾಗಿಲ್ಲ. ಅಲ್ಲೊಂದು ಮನೆ ನಿರ್ಮಿಸಿಕೊಳ್ಳೋಣ ಎಂದರೆ ಮೂಲಸೌಕರ್ಯ ಅಭಿವೃದ್ಧಿಪಡಿಸಿಲ್ಲ. ಹೀಗಾಗಿ, ಕಷ್ಟ ಕಾಲದಲ್ಲಿ ನಿವೇಶನ ಮಾರಾಟ ಮಾಡಲಾಗದ ಸ್ಥಿತಿ ಎದುರಾಗಿದೆ’ ಎಂದು ಹೇಳಿದರು.

ಕೆಡಿಪಿಯಲ್ಲೂ ಪ್ರತಿಧ್ವನಿಸಿತ್ತು: ನಿವೇಶನ ಖರೀದಿದಾರರ ವಿಷಯವು ಕಳೆದ ವರ್ಷ ನಡೆದಿದ್ದ ಕೆಡಿಪಿ ಸಭೆಯಲ್ಲೂ ಪ್ರತಿಧ್ವನಿಸಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಸಂಸದ ಡಿ.ಕೆ. ಸುರೇಶ್, ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರ ಕಾಳಜಿಯಿಂದಾಗಿ, ಕೆಲ ತೊಡಕುಗಳು ಸರ್ಕಾರದ ಮಟ್ಟದಲ್ಲೇ ನಿವಾರಣೆಯಾಗಿದ್ದವು.

ಅದರ ಬೆನ್ನಲ್ಲೇ, ಕ್ರಯಪತ್ರ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯು ಕಳೆದ ನವೆಂಬರ್‌ನಲ್ಲಿ ಪ್ರಾಧಿಕಾರಕ್ಕೆ ಪತ್ರ ಬರೆದಿತ್ತು. ಆದರೆ, ಇದುವರೆಗೆ ಹಂಚಿಕೆಗೆ ಕಾಲ ಕೂಡಿ ಬಂದಿಲ್ಲ.

ರಾಮಲಿಂಗಾ ರೆಡ್ಡಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ
ರಾಮಲಿಂಗಾ ರೆಡ್ಡಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ
ನಿವೇಶನ ಖರೀದಿಸಿರುವವರಿಗೆ ಸರ್ಕಾರದ ಆದೇಶದ ಪ್ರಕಾರ ಕ್ರಯಪತ್ರ ವಿತರಣೆ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ವಿತರಣೆ ಮಾಡಿಲ್ಲವಾದರೆ ಇದೇ ತಿಂಗಳು ನಡೆಯುವ ಕೆಡಿಪಿ ಸಭೆಯಲ್ಲಿ ಆ ಕುರಿತು ಪರಿಶೀಲನೆ ನಡೆಸಿ ತೊಡಕು ನಿವಾರಿಸಲಾಗುವುದು
– ರಾಮಲಿಂಗಾ ರೆಡ್ಡಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ
ಎ.ಬಿ. ಚೇತನ್‌ಕುಮಾರ್ ಅಧ್ಯಕ್ಷ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ
ಎ.ಬಿ. ಚೇತನ್‌ಕುಮಾರ್ ಅಧ್ಯಕ್ಷ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ
ಪ್ರಾಧಿಕಾರವೇ 3 ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕಾದರೆ ನಿವೇಶನದಾರರಿಂದ ಪ್ರತಿ ಚದರ ಅಡಿಗೆ ಅಂದಾಜು ₹408 ಮೊತ್ತ ಪಡೆಯಬೇಕಾಗುತ್ತದೆ. ಅದು ಕಷ್ಟಕರ. ಹಾಗಾಗಿ ಆರ್ಥಿಕ ನೆರವು ನೀಡುವಂತೆ ಬಿಎಂಆರ್‌ಡಿಎಗೆ ಪತ್ರ ಬರೆಯಲಾಗಿದೆ
– ಎ.ಬಿ. ಚೇತನ್‌ಕುಮಾರ್ ಅಧ್ಯಕ್ಷ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ
ನಿವೇಶನ ಖರೀದಿಸಿರುವವರಿಗೆ ಕ್ರಯಪತ್ರ ಹಂಚಿಕೆ ಕುರಿತು ಈಗಾಗಲೇ ಪ್ರಾಧಿಕಾರದಲ್ಲಿ ಸಭೆ ನಡೆದಿದೆ. ಸಂಬಂಧಿಸಿದ ಗ್ರಾಮ ಪಂಚಾಯಿತಿ ಜೊತೆಗೂ ಚರ್ಚಿಸಿ ಆ ನಿಟ್ಟಿನಲ್ಲಿ ಅಗತ್ಯ ಪ್ರಯತ್ನ ಮಾಡಲಾಗುತ್ತಿದೆ
– ಶಿವನಂಕಾರಿ ಗೌಡ ಆಯುಕ್ತ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ

‘ಹಂಚಿಕೆಗೆ ಎರಡು ಸಲ ಆದೇಶವಾಗಿತ್ತು’

‘ರುಡಾ ಆಯುಕ್ತರಿಂದಿಡಿದು ಶಾಸಕರು ಸಂಸದರು ಉಸ್ತುವಾರಿ ಸಚಿವರು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ) ನಗರಾಭಿವೃದ್ಧಿ ಇಲಾಖೆ ಆಯುಕ್ತರ ಕಚೇರಿವರೆಗೆ ನಿವೇಶನದಾರರು ಅಲೆದು ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಬೇಡಿಕೊಂಡೆವು. ಅದರ ಪರಿಣಾಮವಾಗಿ 2022ರಲ್ಲಿ ಇಲಾಖೆಯು ಕ್ರಯಪತ್ರ ವಿತರಿಸುವಂತೆ ಆದೇಶಿಸಿತು. ಆಗ ತಾಂತ್ರಿಕ ಕಾರಣಗಳ ನೆಪವೊಡ್ಡಿ ವಿಳಂಬ ಮಾಡಿದರು. ಮತ್ತೆ ಕಚೇರಿಗಳಿಗೆ ಓಡಾಡದಿದಾಗ 2023ರ ನವೆಂಬರ್‌ನಲ್ಲಿ ಮತ್ತೊಂದು ಆದೇಶವಾಯಿತು. ಆಗಲೂ ಕೆಲ ಕಾರಣಗಳಿಂದಾಗಿ ಆಗಲಿಲ್ಲ. ಕಡೆಗೆ ಸರ್ಕಾರದ ಮಟ್ಟದಲ್ಲೇ ಚರ್ಚೆಗೆ ಬಂದು ನಿವೇಶನ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಲಾಗಿದೆ. ಅದಾಗಿ ತಿಂಗಳುಗಳಾದರೂ ಕ್ರಯಪತ್ರ ಸಿಗುವ ಸೂಚನೆಗಳು ಕಾಣುತ್ತಿಲ್ಲ’ ಎಂದು ನಿವೇಶನ ಖರೀದಿದಾರ ಪದ್ಮನಾಭ ಅಳಲು ತೋಡಿಕೊಂಡರು.

ಸಚಿವರು ಅಧಿಕಾರಿಗಳಿಗೆ ಪತ್ರ ನಿವೇಶನ ಖರೀದಿಸಿರುವರಿಗೆ ಕ್ರಯಪತ್ರ ವಿತರಿಸಿ ಬಡಾವಣೆಯಲ್ಲೂ ಮೂಲಸೌಕರ್ಯ ಒದಗಿಸುವಂತೆ ನಿವೇಶನದಾರ ಪರವಾಗಿ ಹೋರಾಡುತ್ತಿರುವ ಎ.ವಿ. ಶಾಮ ರಾವ್ ಅವರು ಸಚಿವರಿಂದಿಡಿದು ಅಧಿಕಾರಿಗಳಿಗೆ ಪತ್ರ ಬರೆದು ಗಮನ ಸೆಳೆಯುತ್ತಲೇ ಇದ್ದಾರೆ. ‘ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಜಿಲ್ಲಾ ಉಸ್ತುವಾರಿ ಸಚಿವರು ನಗರಾಭಿವೃದ್ಧಿ ಇಲಾಖೆ ಆಯುಕ್ತರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ನಿವೇಶನದಾರರ ಸಮಸ್ಯೆ ಕುರಿತು ಗಮನ ಸೆಳೆದಿದ್ದೇನೆ. ಎಲ್ಲರೂ ಕ್ರಮಕ್ಕೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆಯೇ ಹೊರತು ಇದುವರೆಗೆ ನಿವೇಶನದಾರರಿಗೆ ಕ್ರಯಪತ್ರ ಸಿಗುವಂತೆ ಮಾಡಿಲ್ಲ. ಈಗಲಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸಲಿ’ ಎಂದು ಶಾಮ ರಾವ್ ಒತ್ತಾಯಿಸಿದರು.

‘ಮೂಲಸೌಕರ್ಯಕ್ಕಿಲ್ಲ ಹಣ; ನೆರವಿಗೆ ಪತ್ರ’
‘ಬಡಾವಣೆಗಳಲ್ಲಿ ಮೂಲಸೌಕರ್ಯ ಕಲ್ಪಿಸದ ಹೊರತು ಸೇಲ್ ಡೀಡ್ ಮಾಡಿಕೊಡುವುದಿಲ್ಲ ಎಂದು ಸಂಬಂಧಿಸಿದ ಗ್ರಾಮ ಪಂಚಾಯಿತಿಯವರು ತಿಳಿಸಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಪ್ರಾಧಿಕಾರದಲ್ಲಿ ಹಣವಿಲ್ಲ. ಕ್ರಯಪತ್ರ ಹಂಚಿಕೆಗಿದ್ದ ತೊಡಕು ನಿವಾರಿಸಿರುವ ಸರ್ಕಾರ ಅನುದಾನ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಎಂಆರ್‌ಡಿಎ) ಪತ್ರ ಬರೆದು ಆರ್ಥಿಕ ನೆರವು ಕೋರಿದ್ದೇವೆ. ಅಲ್ಲಿನ ಪ್ರತಿಕ್ರಿಯೆ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT