ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಲ ಕುಸಿತದಿಂದ ಬತ್ತಿದ ಕೊಳವೆಬಾವಿಗಳು: ಹಳ್ಳಿಗಳಲ್ಲಿ ತಪ್ಪಿಲ್ಲ ನೀರಿನ ಬವಣೆ

ಪರಿಸ್ಥಿತಿ ನಿರ್ವಹಣೆಗೆ ₨4.5 ಕೋಟಿ ಅನುದಾನ ಬಿಡುಗಡೆ
Last Updated 26 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ರಾಮನಗರ: ಬೇಸಿಗೆಯ ತೀವ್ರತೆಯು ಹೆಚ್ಚಿದಂತೆಲ್ಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗಿದ್ದು, ಜನರು ಜೀವಜಲಕ್ಕಾಗಿ ಪರಿತಪಿಸುವಂತೆ ಆಗಿದೆ.

ನಗರಕ್ಕೆ ಹೊಂದಿಕೊಂಡಂತೆ ಇರುವ, ಪಟ್ಟಣಗಳಿಗೆ ನೀರು ಪೂರೈಕೆ ಮಾಡುವ ಮಾರ್ಗದಲ್ಲಿ ಬರುವ ಗ್ರಾಮಗಳು ಮಾತ್ರ ಪೈಪ್‌ಲೈನ್‌ ಮೂಲಕ ನೀರು ಪಡೆಯುತ್ತಿವೆ. ಸಾಕಷ್ಟು ಹಳ್ಳಿಗಳ ಜನರು ಇಂದಿಗೂ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಅವಲಂಬಿಸಿದ್ದಾರೆ. ಆದರೆ ಅಲ್ಲಲ್ಲಿ ಬೋರ್‌ವೆಲ್‌ಗಳು ಬತ್ತುತ್ತಿರುವುದು ಗ್ರಾಮೀಣ ನೀರು ಪೂರೈಕೆಗೆ ಸವಾಲಾಗಿ ಪರಿಣಮಿಸಿದೆ.

ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಏಳೆಂಟು ವರ್ಷ ಬರಗಾಲದ ಪರಿಸ್ಥಿತಿ ಇದೆ. ಅದರಲ್ಲಿಯೂ 2013ರಿಂದ 2016ರವರೆಗೆ ನಾಲ್ಕು ವರ್ಷ ಕಾಲ ಸತತವಾಗಿ ಬರಗಾಲವು ಕೃಷಿಕರ ಬದುಕನ್ನು ಅಲುಗಾಡಿಸಿದೆ. ಪರಿಣಾಮವಾಗಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. ಇದರಿಂದಾಗಿ ಜಿಲ್ಲೆಯ ಸುಮಾರು 30–40 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.

ರಾಮನಗರ ತಾಲ್ಲೂಕಿನ ಜಾಲಮಂಗಲ ರಸ್ತೆಯಲ್ಲಿ ಇರುವ ವಡ್ಡರದೊಡ್ಡಿಯಲ್ಲಿ ಅನೇಕ ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಜನರು ಬೆಳಗ್ಗಾದರೆ ಸಾರ್ವಜನಿಕ ನಲ್ಲಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಕೊಳವೆ ಬಾವಿಯಲ್ಲಿನ ಅಲ್ಪ ಪ್ರಮಾಣದ ನೀರೇ ಜನರಿಗೆ ಆಧಾರವಾಗಿದೆ. ಸಾಕಷ್ಟು ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೆಲವು ಕಡೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ಬತ್ತುತ್ತಿದ್ದರೆ, ಇನ್ನೂ ಕೆಲವು ಕಡೆ ಪಂಪು–ಮೋಟಾರುಗಳು ದುರಸ್ಥಿಗೆ ಬಂದು ನಿಂತಿವೆ. ಇದರಿಂದಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

ಬೋರ್‌ವೆಲ್‌ ಬಾಡಿಗೆ

ಅಂತರ್ಜಲ ಮಟ್ಟ ಕುಸಿದಿರುವ ಹಳ್ಳಿಗಳಲ್ಲಿ ನೀರು ಲಭ್ಯ ಇರುವ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ನೀರು ಸರಬರಾಜು ಮಾಡಲು ನಿರ್ಧರಿಸಲಾಗಿತ್ತು. ಸ್ಥಳೀಯ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಈ ಜವಾಬ್ದಾರಿಯನ್ನು ನೀಡಲಾಗಿತ್ತು. ಆದರೆ ಅಧಿಕಾರಿಗಳು ಹಾಗೂ ಸರ್ಕಾರಿ ಸಿಬ್ಬಂದಿ ಲೋಕಸಭಾ ಚುನಾವಣಾ ಕಾರ್ಯದಲ್ಲಿ ಮಗ್ನರಾದ ಕಾರಣ ಜನರ ಸಮಸ್ಯೆ ಕೇಳುವವರು ಇಲ್ಲವಾಗಿದೆ.

ನಡೆಯಲಿಲ್ಲ ಸಭೆ

ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ನಿರ್ವಹಣೆಗಾಗಿ ಶಾಸಕರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್‌ ಸಮಿತಿಯ ಸಭೆ ನಡೆಯಬೇಕಿದೆ. ರಾಜ್ಯ ಸರ್ಕಾರವು ತಾಲ್ಲೂಕುವಾರು ತುರ್ತು ಅನುದಾನ ಬಿಡುಗಡೆ ಮಾಡಿದೆ. ಆದರೆ ನೀತಿಸಂಹಿತೆಯ ಕಾರಣ ಅದನ್ನು ಸದ್ಬಳಕೆ ಮಾಡಿಕೊಳ್ಳುವ ಸಂಬಂಧ ಇನ್ನೂ ಸಭೆಗಳು ನಡೆದಿಲ್ಲ. ಅಧಿಕಾರಿಗಳು ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿ ಕೆಲವು ತುರ್ತು ಕಾಮಗಾರಿಗಳನ್ನು ಕಾರ್ಯಗತಗೊಳಿಸಿದ್ದಾರೆ.

ಎಷ್ಟೆಷ್ಟು ಅನುದಾನ ಬಳಕೆ?
ಬರ ಮತ್ತು ಕುಡಿಯುವ ನೀರಿನ ನಿರ್ವಹಣೆಗಾಗಿ ಸರ್ಕಾರ ಈ ಬಾರಿ ಜಿಲ್ಲೆಗೆ ಒಟ್ಟು ₹ 4.5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಇದರಲ್ಲಿ 207 ಕಾಮಗಾರಿಗಳನ್ನು ಕೈಗೆತ್ತಿಕೊಂಡು 132 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ₹ 2.63 ಕೋಟಿ ವ್ಯಯಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಜಿಲ್ಲೆಯಲ್ಲಿನ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳ ವಿವರ

ತಾಲ್ಲೂಕು ಕೊಳವೆ ನೀರು ಸರಬರಾಜು ಯೋಜನೆ ಕಿರು ನೀರು ಸರಬರಾಜು ಯೋಜನೆ
ಚನ್ನಪಟ್ಟಣ 176 235
ರಾಮನಗರ 135 233
ಕನಕಪುರ 234 699
ಮಾಗಡಿ 163 349
ಒಟ್ಟು 708 1516


ಈ ಸಾಲಿನಲ್ಲಿ ಬರ–ಕುಡಿಯುವ ನೀರಿಗಾಗಿ ಕೈಗೊಂಡ ಕಾಮಗಾರಿ, ಅನುದಾನದ ಲೆಕ್ಕಾಚಾರ

ತಾಲೂಕು ನಿಗದಿಯಾದ ಮೊತ್ತ (₹ ಗಳಲ್ಲಿ) ಒಟ್ಟು ಕಾಮಗಾರಿ ಪೂರ್ಣ ಕಾಮಗಾರಿ ವೆಚ್ಚ
ಚನ್ನಪಟ್ಟಣ ₹ 1.5 ಕೋಟಿ 46 29 ₹ 82.42 ಲಕ್ಷ
ಕನಕಪುರ ₹ 1.5 ಕೋಟಿ 85 55 ₹ 90.14 ಲಕ್ಷ
ಮಾಗಡಿ ₹ 75 ಲಕ್ಷ 39 25 ₹ 45.95 ಲಕ್ಷ
ರಾಮನಗರ ₹ 75 ಲಕ್ಷ 37 23 ₹ 45.32 ಲಕ್ಷ
ಒಟ್ಟು ₹ 4.5 ಕೋಟಿ 207 132 ₹ 2.63 ಕೋಟಿ

* ನಿತ್ಯ ನೀರಿಗಾಗಿ ಕೊಡ ಹಿಡಿದು ಸಾಲು ನಿಲ್ಲುವುದು ಅನಿವಾರ್ಯವಾಗಿದೆ. ಉಳಿದೆಲ್ಲ ಕೆಲಸ ಬಿಟ್ಟು ನೀರು ತುಂಬಿಸಲೇ ಒಬ್ಬರು ಬೇಕಾಗುತ್ತದೆ
–ಅನಿತಾ,ವಡ್ಡರದೊಡ್ಡಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT