ಭಾನುವಾರ, ಡಿಸೆಂಬರ್ 15, 2019
23 °C
ಶಾನುಬೋಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಗ್ರಾಮ ಸಭೆ

ಹಳ್ಳಿ ಪ್ಲಾಸ್ಟಿಕ್‌ ಮುಕ್ತವಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೂಟಗಲ್ (ರಾಮನಗರ): ಶಾಲಾ ಮಕ್ಕಳಿಗೆ ತಮ್ಮ ಸುತ್ತಲಿನ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೇವಲ ಚುನಾಯಿತ ಪ್ರತಿನಿಧಿಗಳು ಮತ್ತು ಸಾರ್ವಜನಿಕರಿಗೆ ಸೀಮಿತವಾಗಿದ್ದ ಗ್ರಾಮಸಭೆಗಳನ್ನು ಇಂದು ಸರ್ಕಾರಿ ಶಾಲೆಗಳಲ್ಲಿಯೂ ಆಯೋಜಿಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಬಿ.ಜಗದೀಶ್ ಹೇಳಿದರು.

ಇಲ್ಲಿನ ಶಾನುಬೋಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಸ್ಥಳೀಯ ಸಂಸ್ಥೆಗಳ ಆಡಳಿತ ನಡೆಯುವ ವೈಖರಿಯ ಬಗ್ಗೆ ಶಾಲಾ ಮಕ್ಕಳಲ್ಲಿಯೂ ಅರಿವು ಮೂಡುತ್ತಿದೆ. ಸರ್ಕಾರ ನಡೆಸುತ್ತಿರುವ ಮಕ್ಕಳ ಗ್ರಾಮ ಸಭೆಗಳಲ್ಲಿ ಮಕ್ಕಳು ತಮ್ಮ ಶಾಲೆಯ ಸಮಸ್ಯೆಗಳು ಮಾತ್ರವಲ್ಲದೆ ಗ್ರಾಮಗಳಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮಹದೇವಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಗೆ ಉತ್ತಮ ಅನುದಾನ ಬಾರದ ಹಿನ್ನಲೆಯಲ್ಲಿ ಸಮಗ್ರ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ನರೇಗಾ ಯೋಜನೆಯಡಿಯಲ್ಲಿ ಮೂಲ ಸೌಕರ್ಯಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭದ್ರಯ್ಯ ಮಾತನಾಡಿ ಹಳ್ಳಿಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮನೆಗೊಂದು ಬಟ್ಟೆ ಬ್ಯಾಗ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಘನ ಮತ್ತು ದ್ರವ ತ್ಯಾಜ್ಯವನ್ನು ಪ್ರತ್ಯೇಕಿಸಿ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಮಣ್ಣಿಗೆ ಪ್ಲಾಸ್ಟಿಕ್ ಸೇರುವುದನ್ನು ನಿಯಂತ್ರಿಸಲಾಗಿದೆ ಎಂದರು.

ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಜಿ.ಐಶ್ವರ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷ ಸಿ.ಎಸ್.ಅನಂತ, ಮಹಿಳಾ ಮತ್ತು ಮಕ್ಕಳ ಇಲಾಖೆಯ ನಿಂಬವ್ವ, ಸದಸ್ಯರಾದ ಕೃಷ್ಣೆಗೌಡ, ಚನ್ನಪ್ಪ, ನಿಂಗಮ್ಮ, ಜಯಮ್ಮ, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರಾದ ಎಸ್.ಟಿ.ಮಂಜುಳಾ, ಶ್ರೀನಿವಾಸ ಮೂರ್ತಿ, ವೀರಣ್ಣ ಪಟ್ಟಣಶೆಟ್ಟಿ, ಕೃಷ್ಣಮೂರ್ತಿ, ಬಾಬುಗೌಡ, ಅಂಜನಪ್ಪ, ವಿವಿಧ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ರಾಮದಾಸ್, ದೇವರಾಜ್, ಪೊಲೀಸ್ ಇಲಾಖೆಯ ಎಸ್.ಕೆ.ಕುಮಾರ್, ಶಿಕ್ಷಣ ಇಲಾಖೆಯ ಸಿಆರ್ ಪಿ ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)