ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಹಳ್ಳಿ ರಸ್ತೆ; ಜನರ ಪರದಾಟ

ಹಾದಿಯ ತುಂಬೆಲ್ಲ ಬರೀ ಜಲ್ಲು ಕಲ್ಲು: ಶೀಘ್ರ ಡಾಂಬರೀಕರಣಕ್ಕೆ ಒತ್ತಾಯ
Last Updated 26 ನವೆಂಬರ್ 2019, 12:28 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಸಾಕಷ್ಟು ಗ್ರಾಮೀಣ ರಸ್ತೆಗಳಲ್ಲಿ ಇಂದಿಗೂ ಜನರ ಓಡಾಟ ದುಸ್ತರವಾಗಿದೆ. ಮಾಗಡಿ ರಸ್ತೆಯಿಂದ ಜೋಗಿದೊಡ್ಡಿ ಮೂಲಕ ಯರೇಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಿತಿಯೂ ಇದೇ ಆಗಿದ್ದು, ಜನರು ಓಡಾಡುವುದಕ್ಕೆ ಅಂಜುತ್ತಿದ್ದಾರೆ.

ಮಾಗಡಿ ರಸ್ತೆಯಿಂದ ತಿರುವು ಪಡೆದು ತಿಮ್ಮಸಂದ್ರ, ಜೋಗಿದೊಡ್ಡಿ, ಅರಳಿಮರದ ದೊಡ್ಡಿ, ಮಾದೇಗೌಡನ ದೊಡ್ಡಿ ಮಾರ್ಗವಾಗಿ ಯರೇಹಳ್ಳಿ, ಕೂಟಗಲ್‌ವರೆಗೂ ಈ ರಸ್ತೆ ಸಾಗುತ್ತದೆ. ನಿತ್ಯ ಓಡಾಟಕ್ಕೆ ಸಾವಿರಾರು ಜನ ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ.

ವರ್ಷದ ಹಿಂದೆಯೇ ಈ ರಸ್ತೆ ಡಾಂಬರೀರಣ ಆರಂಭಗೊಂಡಿದೆಯಾದರೂ ಅರ್ಧಕ್ಕೆ ಕಾಮಗಾರಿಯನ್ನು ಕೈ ಬಿಡಲಾಗಿದೆ. ಹಿಂದೆ ಸುಮಾರಾಗಿ ಇದ್ದ ರಸ್ತೆಯನ್ನು ನಾಲ್ಕಾರು ತಿಂಗಳ ಹಿಂದೆಯೇ ಅಗೆಯಲಾಗಿದ್ದು, ತಾತ್ಕಾಲಿಕವಾಗಿ ಜಲ್ಲಿ ಕಲ್ಲನ್ನು ಸುರಿಯಲಾಗಿತ್ತು. ತಿಂಗಳುಗಳೇ ಕಳೆದರೂ ಡಾಂಬರ್‌ ಹಾಕದೇ ಕಚ್ಚಾ ರಸ್ತೆಯಾಗಿಯೇ ಕೈ ಬಿಡಲಾಯಿತು. ಈಗ ಮತ್ತೊಮ್ಮೆ ಇದೇ ರಸ್ತೆಗೆ ಜಲ್ಲಿ ಸುರಿಯಲಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಓಡಾಟ ಕಷ್ಟ: ರಸ್ತೆ ತುಂಬ ಜಲ್ಲಿ ಕಲ್ಲುಗಳು ತುಂಬಿಕೊಂಡಿರುವ ಕಾರಣ ಜನರ ಓಡಾಟ ಕಷ್ಟವಾಗಿದೆ. ನಿತ್ಯ ವಾಹನ ಸವಾರರು, ಪಾದಚಾರಿಗಳು ಬೀಳುವುದು ತಪ್ಪಿಲ್ಲ ಎಂದು ಸಾರ್ವಜನಿಕರು ಅಲವತ್ತುಗೊಳ್ಳುತ್ತಾರೆ.

ಈ ಭಾಗದ ಜನರು ಹೊಲಗಳಿಗೆ ತೆರಳಲು ಇದೇ ಪ್ರಮುಖ ರಸ್ತೆಯಾಗಿದೆ. ಆದರೆ ಸಂಪೂರ್ಣ ಜಲ್ಲಿಕಲ್ಲು ತುಂಬಿದ ಹಾದಿಯಲ್ಲಿ ಓಡಾಡಲು ಆಗದೇ ರೈತರು ಪರದಾಡುತ್ತಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆಗಿ ಬೀಳುವ ದೃಶ್ಯಗಳು ಸಾಮಾನ್ಯವಾಗಿದೆ. ರಾತ್ರಿ ಹೊತ್ತಿನಲ್ಲಿ ಅಂತೂ ಜನರು ಇಲ್ಲಿ ಓಡಾಡಲು ಹೆದರುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.

ತಿಮ್ಮಸಂದ್ರ, ಜೋಗಿದೊಡ್ಡಿ ಸೇರಿದಂತೆ ಸುತ್ತಲಿನ ಹಳ್ಳಿಗಳ ಜನರಿಗೆ ಹೈನುಗಾರಿಕೆಯು ಪ್ರಮಖ ಕಸುಬಾಗಿದೆ. ನಿತ್ಯ ಹೊಲಕ್ಕೆ ತೆರಳಿ ಮೇವು ತರಬೇಕಿದೆ. ಹೀಗೆ ಮೇವು ಹೊತ್ತು ಬರುವ ಸಂದರ್ಭ ಜನರು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡ ಉದಾಹರಣೆಗಳಿವೆ. ಈಚೆಗಷ್ಟೇ ಜೋಗಿದೊಡ್ಡಿ ಗ್ರಾಮದ ವಿಜಯಮ್ಮ ಎಂಬ ಮಹಿಳೆ ಹೀಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆದಷ್ಟು ಶೀಘ್ರ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕು. ಅರ್ಧಕ್ಕೆ ಕಾಮಗಾರಿ ಕೈಬಿಡದೇ ಸಂಪೂರ್ಣ ಡಾಂಬರೀಕರಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.


ಉಳಿದೆಡೆಯೂ ಇದೇ ಕಥೆ
ಸದ್ಯ ಗ್ರಾಮೀಣ ಭಾಗದಲ್ಲಿನ ಬಹುತೇಕ ರಸ್ತೆಗಳದ್ದೂ ಇದೇ ಕಥೆಯಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಬಿದ್ದ ಉತ್ತಮ ಮಳೆಯಿಂದಾಗಿ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಕೆಲವು ಕಡೆ ಕೊರಕಲು ಉಂಟಾಗಿ ರಸ್ತೆಯ ಅಂಚುಗಳೇ ಕೊಚ್ಚಿ ಹೋಗಿವೆ. ಇದು ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನೂ ಕೆಲವು ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇಂತಹ ರಸ್ತೆಗಳ ಪರಿಸ್ಥಿತಿಯನ್ನು ಅವಲೋಕಿಸಿ ಮರು ಡಾಂಬರೀಕರಣಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT