ಮಂಗಳವಾರ, ನವೆಂಬರ್ 19, 2019
22 °C
ಪಿಎಫ್‌, ಜೀವ ವಿಮೆ, ಆರೋಗ್ಯ ಸೇವೆಯೂ ಇಲ್ಲ, ನೆಪ ಹೇಳುವ ಅಧಿಕಾರಿಗಳು: ಆರೋಪ

10 ತಿಂಗಳಿನಿಂದ ಬಾರದ ವೇತನ: ಪ್ರತಿಭಟನೆ ಎಚ್ಚರಿಕೆ

Published:
Updated:
Prajavani

ಹಾರೋಹಳ್ಳಿ (ಕನಕಪುರ): ‘ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಿಬ್ಬಂದಿ ನೌಕರರಿಗೆ 10 ತಿಂಗಳಿನಿಂದ ವೇತನ ಬಂದಿಲ್ಲ. ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದ್ದು ವೇತನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು’ ಎಂದು ಗ್ರಾಮ ಪಂಚಾಯಿತಿ ಸಿಬ್ಬಂದಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್‌ ತಿಳಿಸಿದರು.

ಇಲ್ಲಿನ ಹಾರೋಹಳ್ಳಿ ಹೋಬಳಿ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿದರು.

‘ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡಿದ್ದೇವೆ. ಇತ್ತೀಚೆಗೆ ಕಾಯಂ ಸಿಬ್ಬಂದಿ ನೌಕರರೆಂದು ರಾಜ್ಯ ಸರ್ಕಾರ ಅಂಗೀಕಾರ ಮಾಡಿದೆ. ಆದರೆ ನಮ್ಮನ್ನು ಕಾಯಂ ಸಿಬ್ಬಂದಿ ಮಾಡಿಕೊಂಡ ಮೇಲೆ ಕೊಡಬೇಕಿದ್ದ ವೇತನವನ್ನು 10 ತಿಂಗಳಿನಿಂದ ಕೊಡದೆ ಬಾಕಿ ಉಳಿಸಿಕೊಂಡಿದೆ’ ಎಂದರು.

‘ಪಂಚಾಯಿತಿ ಅಧಿಕಾರಿಗಳನ್ನು ಕೇಳಿದರೆ ಸರ್ಕಾರ ಹಣ ಹಾಕಿದರೆ ನಿಮಗೆ ಕೊಡುತ್ತೇವೆ. ಸರ್ಕಾರದಿಂದಲೇ ಹಣ ಬಾರದಿದ್ದರೆ ನಾವೇನು ಮಾಡಲಾಗದು ಎಂದು ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದು ಅವರು ದೂರಿದರು.

‘ಕೆಲವು ಪಂಚಾಯಿತಿಗಳಲ್ಲಿ ಕಾಯಂ ನೌಕರರಾಗಿ ಸರ್ಕಾರ ಅಂಗೀಕರಿಸುವುದಕ್ಕೂ ಮುಂಚಿನ ಸಂಬಂಳವನ್ನೂ ಕೊಟ್ಟಿಲ್ಲ. ಈಗಿನದನ್ನು ಕೊಟ್ಟಿಲ್ಲ. ಅ. 25ರ ನಂತರ ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

‘ನಮಗೆ ಸರ್ಕಾರದ ಯಾವುದೇ ಸವಲತ್ತು ಸಿಗುತ್ತಿಲ್ಲ. ನಮ್ಮ ಕುಟುಂಬಕ್ಕೆ ಯಾವುದೇ ಭದ್ರೆತೆಯಿಲ್ಲ. ಅತಂತ್ರ ಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಸರ್ಕಾರ ಕಾಯಂ ನೌಕರರೆಂದು ಅಂಗೀಕಾರ ಮಾಡಿಕೊಂಡ ಮೇಲೆ ಪಿಎಫ್‌ ಕಡಿತಗೊಳಿಸುತ್ತಿಲ್ಲ. ಜೀವ ವಿಮೆ, ಆರೋಗ್ಯ ಸೇವೆಯನ್ನೂ ನೀಡುತ್ತಿಲ್ಲ. ಇದಕ್ಕಾಗಿ ನಾವು ಸಂಘಟಿತರಾಗಿ ಹೋರಾಟ ನಡೆಸಬೇಕು’ ಎಂದರು.

ಕೊಟ್ಟಗಾಳು, ದೊಡ್ಡಮುದುವಾಡಿ, ಚಿಕ್ಕಮುದುವಾಡಿ ಮತ್ತು ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ನೌಕರರು ಸಭೆಯಲ್ಲಿ ಪಾಲ್ಗೊಂಡಿದ್ದರು. ನಾಲ್ಕು ಪಂಚಾಯಿತಿಯಲ್ಲಿ ಸಿಬ್ಬಂದಿ ನೌಕರರ ಸಂಘವನ್ನು ರಚನೆ ಮಾಡಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಪ್ರತಿಕ್ರಿಯಿಸಿ (+)